ಕೌತುಕ, ಕುತೂಹಲದ ಚಂದ್ರಯಾನ-2

ಹೈದರಾಬಾದ್:ಜೂ-17: ಚಂದ್ರಯಾನ-2 ಉಡಾವಣೆಗೆ ಸಿದ್ಧತೆ ಭರದಿಂದ ಸಾಗಿದೆ. ಬಾಹ್ಯಾಕಾಶ ರಂಗದಲ್ಲಿ ಈಗಾಗಲೇ ಮಹತ್ವದ ಮೈಲಿಗಲ್ಲು ಗಳನ್ನು ದಾಖಲಿಸಿರುವ ಭಾರತ ಈ ಮಹತ್ವದ ಯೋಜನೆ ಸಾಕಾರಕ್ಕೆ ಸಜ್ಜಾಗಿದೆ. ಪ್ರಪಂಚದ ಹಲವು ದೇಶಗಳು ಕೂಡ ಈ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿವೆ.

ಇಸ್ರೋ 2008ರಲ್ಲಿ ಚಂದ್ರಯಾನ-1 ಉಡಾವಣೆ ಮಾಡಿದ ಬಳಿಕ ಮಹತ್ವದ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಮಂಗಳಯಾನ ಮಿಷನ್ ಮೂಲಕ ಇಸ್ರೋ ಜಗತ್ತನ್ನೇ ಚಕಿತಗೊಳ್ಳುವಂತೆ ಮಾಡಿತ್ತು. ಅದರ ಬೆನ್ನಲ್ಲೇ ಚಂದ್ರಯಾನ-2, ಗಗನಯಾನ ಮುಂತಾದ ಯೋಜನೆಗಳಿಗೆ ತಯಾರಿ ನಡೆಸುತ್ತಿದೆ. ಈ ನಡುವೆ 2030ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ಯಾವುದೇ ದೇಶದ ಸಹಕಾರವಿಲ್ಲದೆ ನಿರ್ವಿುಸಲು ಮುಂದಾಗಿದೆ.

ಚಂದ್ರಯಾನ-2: ಇಸ್ರೋ ಚಂದ್ರಯಾನ-2ವನ್ನು ಜುಲೈ 15ಕ್ಕೆ ಲಾಂಚ್ ಮಾಡುವುದಾಗಿ ಹೇಳಿದೆ, ಇದರ ಲ್ಯಾಂಡರ್ ಮತ್ತು ರೋವರ್ ಸೆಪ್ಟೆಂಬರ್ 6ಕ್ಕೆ ಚಂದ್ರನ ಮೇಲ್ಮೈ ತಲುಪಲಿದೆ. ಚಂದ್ರಯಾನ-1ನ ಎರಡನೇ ಆವೃತ್ತಿ ಎಂದೇ ಗುರುತಿಸಲಾಗಿರುವ ಚಂದ್ರಯಾನ-2 ಮಿಷನ್​ನ್ನು 2012ರಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಇದರ ಲ್ಯಾಂಡರ್ ಮಾಡ್ಯೂಲನ್ನು ರಷ್ಯಾದಿಂದ ತರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್​ಕೊಸ್​ವೊಸ್ ಇದನ್ನು ನೀಡುವುದೆಂದು ನಿಗದಿಯಾಗಿತ್ತು. ಆದರೆ ರಷ್ಯಾದ ಇಂತಹದ್ದೇ ಲ್ಯಾಂಡರ್​ನಲ್ಲಿ 2011ರಲ್ಲಿ ಸಮಸ್ಯೆಗಳಿರುವುದು ಕಂಡುಬಂದಿದ್ದರಿಂದ ರಷ್ಯಾ ಈ ಒಪ್ಪಂದದಿಂದ ಹಿಂದೆ ಸರಿಯಿತು. ಆಗ ಭಾರತಕ್ಕೆ ತನ್ನದೇ ಲ್ಯಾಂಡರ್ ರೂಪಿಸುವ ಅನಿವಾರ್ಯತೆ ಎದುರಾಯಿತು. ಇದರ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಗೆ ಕೆಲ ವರ್ಷಗಳು ಬೇಕಾದವು. ಇದರ ಫಲವಾಗಿ ಚಂದ್ರಯಾನ-1ಗೆ ಹೋಲಿಕೆ ಮಾಡಿದರೆ ಸಾಕಷ್ಟು ಸುಧಾರಿತ ಯೋಜನೆ ಎನ್ನುವ ಹೆಗ್ಗಳಿಕೆಗೆ ಚಂದ್ರಯಾನ-2 ಪಾತ್ರವಾಗಿದೆ.

ಚಂದ್ರಯಾನ-1 ಇಸ್ರೋ ಚಂದ್ರನಲ್ಲಿಳಿಸಿದ ಮೊದಲ ಪರಿಶೋಧನಾತ್ಮಕ ಮಿಷನ್ ಆಗಿತ್ತು. ಕಕ್ಷೆಯಲ್ಲಿದ್ದುಕೊಂಡೇ ಚಂದ್ರನ ಬಗೆಗೆ ಅಧ್ಯಯನ ನಡೆಸುವಂತೆ ವಿನ್ಯಾಸಗೊಳಿಸಲಾಗಿತ್ತು. ಆದರೂ ಚಂದ್ರಯಾನ-1 ಇದರ ಮಿಷನ್ ಮೂನ್ ಇಂಪ್ಯಾಕ್ಟ್ ಪ್ರೋಬ್(ಎಂಐಪಿ) ಅನ್ನು ಚಂದ್ರನಲ್ಲಿಗೆ ತಲುಪಿಸಿತ್ತು. ಎಂಐಪಿ ಕಳುಹಿಸಿ ದಾಖಲೆಗಳನ್ನು ಆಧರಿಸಿ ಚಂದ್ರನಲ್ಲಿ ನೀರಿನ ಕಣಗಳಿರುವುದಾಗಿ ವಿಜ್ಞಾನಿಗಳು ಹೇಳಿದ್ದರಾದರೂ ಇದರ ನಿಖರತೆಗೆ ಇನ್ನಷ್ಟು ಅಧ್ಯಯನಗಳು ಅನಿವಾರ್ಯ. ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಚಂದ್ರಯಾನ-2ನ್ನು ತಯಾರಿಸಲಾಗಿದ್ದು, ಇದರಲ್ಲಿ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಜತೆ ಚಂದ್ರನಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಅಗತ್ಯ ಸಲಕರಣೆಗಳೂ ಇವೆ. ಆರ್ಬಿಟರ್ ಚಂದ್ರನ ಮೇಲ್ಮೈನಿಂದ 100 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಮಿಷನನ್ನು ತಲುಪಿಸಿದರೆ, ಇದರಿಂದ ಬೇರ್ಪಡುವ ಲ್ಯಾಂಡರ್ ಮತ್ತು ರೋವರ್ ನಿಧಾನವಾಗಿ ಚಂದ್ರನ ಮೇಲ್ಮೈ ತಲುಪಲಿವೆ. ಇಸ್ರೋ ಲ್ಯಾಂಡರ್ ಮಾಡ್ಯೂಲ್​ಗೆ ‘ವಿಕ್ರಮ್ ಎಂದು ಹೆಸರಿಟ್ಟಿದ್ದರೆ, ರೋವರ್​ಗೆ ‘ಪ್ರಜ್ಞಾನ್’ ಎಂದು ಹೆಸರಿಟ್ಟಿದೆ. ಅಂದರೆ ಬುದ್ಧಿವಂತಿಕೆ ಎಂದರ್ಥ.

ಲ್ಯಾಂಡರ್: ಲ್ಯಾಂಡರ್​ನ ಲ್ಯಾಂಡಿಂಗ್​ನಲ್ಲಿರುವ ಮುಖ್ಯಾಂಶವೆಂದರೆ ಚಂದ್ರನ ಮೇಲ್ಮೈಯನ್ನು ನಿಧಾನವಾಗಿ ತಲುಪುವುದು. ಲ್ಯಾಂಡರ್ ಮತ್ತು ರೋವರ್ ಚಂದ್ರನ ಗುರುತ್ವಾಕರ್ಷಣಾ ವಲಯಕ್ಕೆ ತಲುಪುತ್ತಿದ್ದಂತೆ ವೇಗವಾಗಿ ಕೆಳಕ್ಕೆ ಬೀಳುತ್ತವೆ. ಹೀಗಾದರೆ ಲ್ಯಾಂಡರ್​ನಲ್ಲಿರುವ ಸಲಕರಣೆಗಳು ಚೆಲ್ಲಾಪಿಲ್ಲಿಯಾಗಿ ಹೋಗಲಿವೆ. ಈ ರೀತಿಯಾದಲ್ಲಿ ಘರ್ಷಣೆಯಿಂದ ಯಂತ್ರಗಳು ಕಾರ್ಯನಿರ್ವಹಿಸದಂತೆ ಆಗಬಹುದು. ಅಲ್ಲಿ ಗಾಳಿಯ ಪ್ರಮಾಣವೂ ಕಡಿಮೆ ಇರುವುದರಿಂದ ಪ್ಯಾರಾಚೂಟ್​ನಂಥ ತಂತ್ರಜ್ಞಾನಗಳ ಬಳಕೆಗೂ ಅವಕಾಶವಿರುವುದಿಲ್ಲ. ಚಂದ್ರನ ಮೇಲ್ಮೈನಲ್ಲಿ ಚಂದ್ರಯಾನ-2 ಮೃದುವಾಗಿ ಲ್ಯಾಂಡ್ ಆಗಬೇಕೆಂದರೆ ಗಂಟೆಗೆ 3.6 ಕಿ.ಮೀ. ಅಥವಾ ಅದಕ್ಕಿಂತಲೂ ಕಡಿಮೆ ವೇಗ ಹೊಂದಿರುವುದು ಅನಿವಾರ್ಯ.

ಲ್ಯಾಂಡರ್ ಚಂದ್ರನಲ್ಲಿಳಿದ ಬಳಿಕ ಆರು ಚಕ್ರಗಳ ಸೌರಶಕ್ತಿ ಆಧಾರಿತ ರೋವರ್ ಇದರಿಂದ ಪ್ರತ್ಯೇಕಗೊಂಡ ಮೇಲ್ಮೈಗೆ ಇಳಿಯಲಿದೆ. ನಂತರ ದಾಖಲೆಗಳ ಸಂಗ್ರಹ ಮತ್ತು ಅವಲೋಕನ ನಡೆಸಲಿದೆ. ಇದರಲ್ಲಿ ಎರಡು ಯಂತ್ರಗಳಿದ್ದು, ಇದು ಮೇಲ್ಮೈ ಸಂಯೋಜನೆ ಬಗ್ಗೆ ಅಧ್ಯಯನ ನಡೆಸಲಿದೆ.

147 ಕೆಜಿ ತೂಕದ ಲ್ಯಾಂಡರ್ ಅಲ್ಲೇ ಉಳಿದುಕೊಳ್ಳಲಿದ್ದು, ಇದರಲ್ಲಿರುವ ಯಂತ್ರಗಳ ಸಹಾಯದಿಂದ ಚಂದ್ರನಲ್ಲಿರುವ ವಾತಾವರಣದ ಅಧ್ಯಯನ ನಡೆಸಲಿದೆ.

ಚಂದ್ರಯಾನ-2ನ ಲ್ಯಾಂಡರ್ ಮತ್ತು ರೋವರ್​ನ್ನು 14 ದಿನಗಳ ಕಾಲ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ. 2,379 ಕೆಜಿ ತೂಕದ ಆರ್ಬಿಟರ್ ಒಂದು ವರ್ಷದ ಕಾಲ ಚಂದ್ರನ ಕಕ್ಷೆಯಲ್ಲೇ ಉಳಿಯಲಿದ್ದು, ಇದರಲ್ಲಿ 7 ಯಂತ್ರಗಳಿವೆ. ಇದರಲ್ಲಿರುವ ಕ್ಯಾಮೆರಾದ ಸಹಾಯದಿಂದ ಗುಣಮಟ್ಟದ ಮೂರು ಆಯಾಮಗಳ ನಕ್ಷೆಯನ್ನು ಸೆರೆಹಿಡಿಯಲು ಸಾಧ್ಯವಾಗಲಿದೆ. ಇದರಲ್ಲಿ ಖನಿಜ ಸಂಯೋಜನೆ, ಚಂದ್ರನ ವಾತಾವರಣ ಮತ್ತು ಚಂದ್ರನಲ್ಲಿ ನೀರಿನ ಕಣಗಳ ಇರುವಿಕೆ ಬಗ್ಗೆ ಅಧ್ಯಯನ ನಡೆಸಲೆಂದೇ ಪ್ರತ್ಯೇಕ ತಂತ್ರಜ್ಞಾನಗಳಿವೆ.

2 ಸೆಕೆಂಡ್​ನಲ್ಲಿ ಸಂದೇಶ

ಚಂದ್ರ ಭೂಮಿಯಿಂದ 384 ಸಾವಿರ ಕಿ.ಮೀ. ದೂರದಲ್ಲಿದ್ದು, ಅಲ್ಲಿಂದ ರವಾನೆಯಾದ ಸಂದೇಶ, ಚಿತ್ರಗಳು ಎರಡು ಸೆಕೆಂಡ್ ಅವಧಿಯಲ್ಲಿ ಇಸ್ರೋ ಕೇಂದ್ರದಲ್ಲಿ ಲಭಿಸುತ್ತವೆ. ಚಂದ್ರನ ಸುತ್ತ 100 ಕಿ.ಮೀ. ವೇಗದಲ್ಲಿ ಸುತ್ತುವ ಕಕ್ಷೆಗಾಮಿಯಿಂದ ಇಸ್ರೋಗೆ ಮಾಹಿತಿ ಲಭಿಸುತ್ತದೆ. ಚಂದ್ರನ ಮೇಲೆ ಒಂದೆಡೆ ನೆಲೆಯೂರುವ ಲ್ಯಾಂಡರ್ ಸಹ ನೇರವಾಗಿ ಸಂದೇಶವನ್ನು ಭೂಮಿಗೆ ಕಳಿಸುತ್ತದೆ. ರೋವರ್ ತನಗೆ ಲಭಿಸಿದ ಮಾಹಿತಿಯನ್ನು ಲ್ಯಾಂಡರ್ ಮೂಲಕ ಭೂಮಿಗೆ ತಲುಪಿಸುತ್ತದೆ. ಲ್ಯಾಂಡರ್ ಸಂಪರ್ಕ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡರೆ ಕಕ್ಷೆಗಾಮಿ ಮೂಲಕ ಸಂದೇಶ ರವಾನಿಸಲು ವ್ಯವಸ್ಥೆ ಮಾಡಲಾಗಿದೆ.

ಮಿಷನ್ ಹಾದಿ

ಜುಲೈ 15-ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ
ಆಗಸ್ಟ್ 1-ಜಿಎಸ್​ಎಲ್​ವಿ ಮಾರ್ಕ್-3 ಉಡ್ಡಯನ ವಾಹನದಿಂದ ಚಂದ್ರಯಾನ-2 ಬೇರ್ಪಡೆ
ಆಗಸ್ಟ್-6-ಅಂಡಾಕಾರದಲ್ಲಿ ಐದು ಬಾರಿ ಭೂಮಿ ಸುತ್ತ ಕಕ್ಷೆ ಬದಲಿಸುತ್ತ ಆರನೇ ಬಾರಿಗೆ ಚಂದ್ರನತ್ತ ಪಯಣ
ಚಂದ್ರನ ಪ್ರಭಾವಲಯಕ್ಕೆ ಆಗಮನ
ಕಕ್ಷೆಗಾಮಿಯಿಂದ (ಆರ್ಬಿಟರ್) ವಿಕ್ರಂ ಲ್ಯಾಂಡರ್ ಬೇರ್ಪಡೆ
ಸೆಪ್ಟೆಂಬರ್ 6-7- ಚಂದ್ರನ ಮೇಲ್ಮೈಯತ್ತ ಪ್ರಯಾಣ
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಕೆ
ವಿಕ್ರಮ್ ಲ್ಯಾಂಡರ್​ನಿಂದ ಪ್ರಜ್ಞಾನ್ ರೋವರ್ ಆಗಮನ
14 ದಿನಗಳ ಕಾಲ ಚಂದ್ರನ ಮೇಲ್ಮೈ ಅಧ್ಯಯನ
ಕೃಪೆ:ವಿಜಯವಾಣಿ

ಕೌತುಕ, ಕುತೂಹಲದ ಚಂದ್ರಯಾನ-2
chandrayaan-2-indias-orbiter-lander-rover-mission