ಪ್ರೌಢಶಾಲೆಗೆ ಕಟ್ಟಡವಿಲ್ಲದ ಗ್ರಾಮದಲ್ಲಿ ಸಿಎಂ ವಾಸ್ತವ್ಯಕ್ಕೆ ಸಿದ್ಧತೆ

ಕಲಬುರಗಿ:ಜೂ-17: ಜಿಲ್ಲೆಯ ಜೀವನಾಡಿ ಭೀಮಾ ನದಿ ತೀರದ ತಾಲೂಕಿನ ಹೇರೂರ ಬಿ. ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೂ. 22ರಂದು ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಕಲಬುರಗಿ ಮಹಾನಗರದಿಂದ 40 ಕಿ.ಮೀ. ದೂರದ ಅಫ‌ಜಲಪುರ ವಿಧಾನಸಭಾ ಕ್ಷೇತ್ರದ ಹೇರೂರ ಬಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಶಾಲೆಗೆ ಬಣ್ಣ ಹೊಡೆಯುವುದು, ಶೌಚಾಲಯ ನಿರ್ಮಿಸುವ ಕಾರ್ಯ ಹಗಲಿರಳು ನಡೆದಿವೆ.

ಅಲ್ಲದೇ ಮುರಿದು ಹೋಗಿದ್ದ ಬಾಗಿಲು ಹಚ್ಚುವ ಜತೆಗೆ ಮುಖ್ಯವಾಗಿ ಐದಾರು ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾಗಿರುವ ಶಾಲಾ ಕಟ್ಟಡದ ಕಳಪೆ ಕಾಮಗಾರಿ ಕಾಣದ ಹಾಗೆ ದುರಸ್ಥಿಗೊಳಿಸುವ ಕಾರ್ಯವೂ ನಡೆದಿದೆ.

ಗ್ರಾಪಂ ಕೇಂದ್ರ ಹೊಂದಿರುವ ಹೇರೂರ ಬಿ.ಯಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಕಟ್ಟಡವೇ ಇಲ್ಲ. ಗ್ರಾಮದಲ್ಲಿರುವ ಈಗಲೋ ಆಗಲೋ ಬೀಳುವ ಶಾಲಾ ಕಟ್ಟಡದಲ್ಲಿಯೇ ಪ್ರೌಢಶಾಲೆ ನಡೆಸಲಾಗುತ್ತಿದೆ. ಪ್ರಾಥಮಿಕ ಶಾಲೆಯನ್ನು ಊರಾಚೆ ಹೊಸದಾಗಿ ಐದಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಕಟ್ಟಡದ ಕಿಟಕಿ, ಬಾಗಿಲುಗಳು ಕಳಪೆ ಕಾಮಗಾರಿಯಿಂದ ಕಿತ್ತುಹೋಗಿವೆ.

ಈಗ ಹೊಸದಾಗಿ ಅಳವಡಿಸಲಾಗುತ್ತಿದೆ. ಶಾಲೆ ದುರಸ್ಥಿಗೊಳಿಸಿ ಬಣ್ಣ ಹಚ್ಚಲಾಗುತ್ತಿದೆ. ಇದೇ ಶಾಲೆ ಆವರಣದಲ್ಲಿ ಜನತಾ ದರ್ಶನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಿಸಲಾಗುತ್ತಿದೆ. ಸಾರ್ವಜನಿಕ ಸಮಾರಂಭಕ್ಕಾಗಿ ಊರಾಚೆಯ ಪ್ರಸಿದ್ಧ ದೇವಾಲಯ ಹುಲಕಂಠೇಶ್ವರ ದೇವಾಸ್ಥಾನ ಎದುರು ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲೇ ಆಗಮಿಸುವ ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಭೀಮಾ ನದಿಗೆ ಹತ್ತಿಕೊಂಡೇ ಇರುವ ಹೇರೂರ ಬಿ. ಗ್ರಾಮ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಗ್ರಾಮದಿಂದ ದೂರದ ಬೆಳಗುಂಪಾ ಹಳ್ಳದಲ್ಲಿ ಕೊರೆಯಲಾದ ಬೊರವೆಲ್‌ ಆಸರೆಯಾಗಿದೆ. ಬೊರವೆಲ್‌ ಕೆಟ್ಟರೇ ಕುಡಿಯಲು ಯೋಗ್ಯವಲ್ಲದ ಭೀಮಾ ನದಿ ನೀರೇ ಗತಿ.

ಆದರೆ ಬೇಸಿಗೆಯಲ್ಲಿ ಸಂಪೂರ್ಣ ನದಿ ಬತ್ತಿರುವುದರಿಂದ ಕೊಡ ನೀರಿಗಾಗಿಯೂ ಜನರು ಪರದಾಡುವಂತಿದೆ. ಗ್ರಾಮದಲ್ಲಿದ್ದರೂ ಕಾರ್ಯನಿರ್ವಹಿಸದೇ ಸದಾ ಮುಚ್ಚಿದ್ದ ಹಾಗೂ ಯಾವುದೇ ಔಷಧ ಇಲ್ಲದ ಪಶು ಚಿಕಿತ್ಸಾಲಯವನ್ನು ಈಗ ಪ್ರಾರಂಭಿಸಲಾಗುತ್ತಿದೆ.

ಚಿಕಿತ್ಸಾಲಯಕ್ಕೂ ಬಣ್ಣ ಬಳೆಯಲಾಗುತ್ತಿದೆ. ಅಲ್ಲದೇ ಒಂದೊಂದೇ ಸಲಕರಣೆಗಳನ್ನು ತಂದಿಡಲಾಗುತ್ತಿದೆ. ಅದೇ ರೀತಿ ವಾರಕೊಮ್ಮೆ ಇಲ್ಲವೇ ಎರಡು ದಿನ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಉಪಕೇಂದ್ರವೂ ನಿತ್ಯ ಸೇವೆ ನೀಡಲಾರಂಭಿಸಿದೆ. ಕೆಟ್ಟು ನಿಂತಿದ್ದ ನೀರು ಶುದ್ಧೀಕರಣ ಘಟಕ ದುರಸ್ಥಿಗೊಳಿಸಲಾಗುತ್ತಿದೆ.

ಗ್ರಾಮಸ್ಥರ ಬೇಡಿಕೆಗಳು?
* ಹೇರೂರ ಬಿ- ಜೇವರ್ಗಿ ತಾಲೂಕಿನ ಹರವಾಳ ನಡುವೆ ಭೀಮಾ ನದಿ ಮೇಲೆ ಸೇತುವೆ ನಿರ್ಮಾಣ.

* ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು.

* ಪೊಲೀಸ್‌ ಠಾಣೆ ಸ್ಥಾಪಿಸುವುದು.

* 20 ವರ್ಷಗಳ ಹಿಂದೆ ಗ್ರಾಮದಲ್ಲಿದ್ದ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಶಾಖೆ ಪುನರಾರಂಭ ಆಗಲಿ.

* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ವಿಎಸ್‌ಎಸ್‌ಎನ್‌) ಸಂಘ ಸ್ಥಾಪಿಸುವುದು.

* ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದು.

* ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಲಸಂಗ್ರಹಾಲಯ ಸದುಪಯೋಗಪಡಿಸುವುದು.

* ಗ್ರಾಮದ ಆರಾಧ್ಯದೈವ ಹುಲಿಕಂಠೇಶ್ವರ ದೇವಸ್ಥಾನ ಅಭಿವೃದ್ಧಿಪಡಿಸುವುದು.

ಕಟ್ಟಕಡೆ ಗ್ರಾಮದಂತಿರುವ ಹೇರೂರ ಬಿ.ಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಕುಡಿಯುವ ನೀರು, ವಿದ್ಯುತ್‌ ಸಮಸ್ಯೆಗೆ ಶಾಶ್ವತ ಕ್ರಮವಾಗಬೇಕು. ಗ್ರಾಮದ ಭೀಮಾ ನದಿ ಮೇಲೆ ಸೇತುವೆ ನಿರ್ಮಾಣವಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಿಎಂ ವಾಸ್ತವ್ಯ ಈ ಬೇಡಿಕೆಗಳು ಸಾಕಾರಗೊಳ್ಳಲಿವೆ ಎಂಬ ದೃಢ ವಿಶ್ವಾಸ ಹೊಂದಲಾಗಿದೆ.
-ಹಣಮಂತ ಕ್ಯಾಸರ್‌, ಗ್ರಾಮಸ್ಥ

2006ರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅಫ‌ಜಲಪುರ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಈಗ ಕ್ಷೇತ್ರ ವ್ಯಾಪ್ತಿಯ ಹೇರೂರ ಬಿ. ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಿರುವುದು ಸಂತಸ ತಂದಿದೆ. ಗ್ರಾಮಸ್ಥರ ಬೇಡಿಕೆಗಳು ಈಡೇರಿದರೆ ಮತ್ತಷ್ಟು ಖುಷಿ ತರುತ್ತದೆ.
-ಎಂ.ವೈ. ಪಾಟೀಲ, ಶಾಸಕರು, ಅಫಜಲಪುರ
ಕೃಪೆ:ಉದಯವಾಣಿ

ಪ್ರೌಢಶಾಲೆಗೆ ಕಟ್ಟಡವಿಲ್ಲದ ಗ್ರಾಮದಲ್ಲಿ ಸಿಎಂ ವಾಸ್ತವ್ಯಕ್ಕೆ ಸಿದ್ಧತೆ
preparing-for-a-cm-stay-in-a-village-without-a-high-school-building