ದಾಖಲೆ ಮರೆತು ಮತಗಟ್ಟೆಗೆ ಬಂದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

ಮೈಸೂರು, ಮೇ 10, 2023 (www.justkannada.in):: ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ದಾಖಲೆ ಮರೆತು ಬಂದಿದ್ದರು.

ಮತಗಟ್ಟೆಗೆ ಆಗಮಿಸಿದ ವೇಳೆ ಮೂಲ ದಾಖಲೆ ತರುವಂತೆ ಮತಗಟ್ಟೆ ಅಧಿಕಾರಿಗಳು ಮನವಿ ಮಾಡಿದರು. ಹೀಗಾಗಿ ಮತ್ತೆ ಬಂದು ವೋಟ್ ಮಾಡುವುದಾಗಿ ತಿಳಿಸಿ ಪ್ರಮೋದಾದೇವಿ ಒಡೆಯರ್ ಹಿಂದಿರುಗಿದರು.

ಮತಗಟ್ಟೆ ಅಧಿಕಾರಿಗಳಿಗೆ ಸಾಫ್ಟ್ ಕಾಪಿಯನ್ನು ಪ್ರಮೋದ ದೇವಿ ಒಡೆಯರ್ ತೋರಿಸಿದರು. ಆದರೆ ಒರಿಜಿನಲ್ ದಾಖಲಾತಿ ತರುವಂತೆ ಚುನಾವಣೆ ಸಿಬ್ಬಂದಿ ಮನವಿ ಮಾಡಿದರು. ಒರಿಜಿನಲ್ ದಾಖಲೆ ತರುವಂತೆ ಆಪ್ತರಿಗೆ ರಾಜವಂಶಸ್ಥೆ ಸೂಚಿಸಿ ಮತ ಗಟ್ಟೆ ಹೊರ ಭಾಗ ಕಾರಿನಲ್ಲಿ ಕಾದು ನಂತರ ಕೆಲ ಸಮಯದ ನಂತರ ಮತ ಚಲಾಯಿಸಿದರು.

‘’ಮೊದಲೆಲ್ಲ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಆಫಿಸ್ ನಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ‌ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತ ಹೇಳಿದ್ರು. ಆಫೀಸ್‌ನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ‌ ತಡ ಆಯ್ತು’’ ಎಂದು ಪ್ರಮೋದಾದೇವಿ ಹೇಳಿದರು.

ಯುವಕರು ಮತದಾನದ ಮೂಲಕ ತಮ್ಮ ಭಾವನೆ ವ್ಯಕ್ತ ಪಡಿಸಬೇಕು. ಅಲ್ಲದೆ ನಮ್ಮ ಧ್ವನಿ ಕೇಳಲ್ಲ ಅಂದ್ರೆ ಏನೂ ಮಾಡೊಕೆ ಆಗಲ್ಲ. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿಯೂ ಇದ್ರೂ ಅದನ್ನ ಇಲ್ಲಿ ಬಂದು ವ್ಯಕ್ತಡಿಸಿ. ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ ಎಂದು ಹೇಳಿದರು.