ಹಿರಿಯ ಹೆಂಡತಿ ಕೊಲೆ ಮಾಡಿದ್ದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಕೋರ್ಟ್ .

ಚಾಮರಾಜನಗರ,ಮಾರ್ಚ್,18,2024(www.justkannada.in):  ಹಿರಿಯ ಹೆಂಡತಿಯನ್ನ ಕೊಲೆಗೈದು ಸಾಕ್ಷಿ ನಾಶ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50,000 ದಂಡ ವಿಧಿಸಿ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಹನೂರು ಪೊಲೀಸ್ ಠಾಣೆಗೆ ಸೇರಿದ ಹುತ್ತೂರು ಗ್ರಾಮದ ನಾಯಕರ ಹೊಸಕೇರಿ ಬೀದಿಯ ನಿವಾಸಿ  ನಾಗ(46) ಬಿನ್ ಲೇಟ್ ಮಾದನಾಯಕ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಘಟನೆ ಹಿನ್ನೆಲೆ…

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಹನೂರು ಪೊಲೀಸ್ ಠಾಣೆಗೆ ಸೇರಿದ ಹುತ್ತೂರು ಗ್ರಾಮದ ನಾಯಕರ ಹೊಸಕೇರಿ ಬೀದಿಯಲ್ಲಿ ಆರೋಪಿ ನಾಗ 12/03/2019ರಂದು  ತನ್ನ ಹಿರಿಯ ಪತ್ನಿ ಅರಸಮ್ಮ ವಾಸವಿದ್ದ ಮನೆಗೆ ರಾತ್ರಿ ವೇಳೆ ಆಗಮಿಸಿ  ಹಣ ಕೇಳಿದ್ದಾನೆ. ಈ ವೇಳೆ ಅರೋಪಿ ನಾಗ ಹಾಗೂ ಮೃತೆ ಅರಸಮ್ಮ ಇಬ್ಬರ ನಡುವೆ ಮಧ್ಯರಾತ್ರಿಯವರೆವಿಗೂ ಮಾತಿಗೆ- ಮಾತು ಬೆಳೆದು ಜಗಳವಾಗಿದೆ.

ನಂತರ ಮಧ್ಯರಾತ್ರಿಯಲ್ಲಿ ಪತ್ನಿ ಅರಸಮ್ಮಳನ್ನ ಕತ್ತು ಹಿಸುಕಿ ಆರೋಪಿ ನಾಗ ಕೊಲೆ ಮಾಡಿದ್ದು, ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಉಪ್ಪಾಳದ ಓಣಿಯಲ್ಲಿ ಬೀಸಾಡಿದ್ದನು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಮಾಡಿದ್ದು ಸಾಕ್ಷ್ಯವನ್ನು ನಾಶಪಡಿಸಿರುವುದು ತನಿಖೆಯಿಂದ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ದ ಭಾರತ ದಂಡ ಸಂಹಿತೆ ಕಲಂ: 302 201 506 ಅನುಸಾರ ಶಿಕ್ಷಾರ್ಹ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ಹನೂರು ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಆರೋಪ ಸಾಭೀತಾದ ಕಾರಣ ಆರೋಪಿ ನಾಗನಿಗೆ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ ಅವರು  ಭಾರತ ದಂಡ ಸಂಹಿತೆ ಕಲಂ. 302 ರ ಕೊಲೆ ಅಪರಾಧಕ್ಕಾಗಿ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ.50,000/- ದಂಡ, ದಂಡ ಪಾವತಿಸಲು ವಿಫಲರಾದರೆ ಮತ್ತೆ 06 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪು ನೀಡಿದ್ದಾರೆ.

ಭಾರತ ದಂಡ ಸಂಹಿತೆ ಕಲಂ. 201 ರ ಸಾಕ್ಷ್ಯ ನಾಶ ಅಪರಾಧಕ್ಕಾಗಿ 03 ವರ್ಷ ಜೈಲು ಶಿಕ್ಷೆ ಹಾಗೂ ರೂ.25,0000/- ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಮತ್ತೆ 03 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ರವರು ವಾದ ಮಂಡಿಸಿದ್ದರು.

Key words:  court – life imprisonment – fine – accused husband – murder –wife-kollegal