ಕೊರೋನಾ ಮುಕ್ತ ಮೈಸೂರು ಜಿಲ್ಲೆ ನಮ್ಮ ಗುರಿ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಏಪ್ರಿಲ್ 29, 2020 (www.justkannada.in): ನಂಜನಗೂಡು ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹತೋಟಿಗೆ ಬರುತ್ತಿದೆ. ಕೊರೋನಾ ಮುಕ್ತ ಮೈಸೂರು ಹಾಗೂ ನಂಜನಗೂಡನ್ನು ಮಾಡುವುದು ನಮ್ಮ ಗುರಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ನಂಜನಗೂಡು ಮಿನಿವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ಸ್ಥಳೀಯ ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಜಿಲ್ಲಾ ವರಿಷ್ಠಾದಿಕಾರಿ ರಿಷ್ಯಂತ್, ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಇನ್ನು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ನಮ್ಮ ವೈದ್ಯರು, ನರ್ಸ್ ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಅಧಿಕಾರಿ ವರ್ಗದವರ ಸೇವೆಯೂ ಗಣನೀಯ ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಜ್ಯೂಬ್ಲೆಂಟ್ ಪ್ರಕರಣದ ಮೂಲ ಪತ್ತೆಯಾಗಬೇಕೆಂದು ಇಲ್ಲಿನ ಶಾಸಕರಾದ ಹರ್ಷವರ್ಧನ್ ನನಗೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಹರ್ಷಗುಪ್ತ ಅವರನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೇಮಿಸಲಾಗಿದೆ ಎಂದು ತಿಳಿಸಿದರು.