Tuesday, September 15, 2026

BDA Apartments

ಸಾರಿಗೆಗೆ ಇಸ್ರೋ ತಂತ್ರಜ್ಞಾನದ ನೆರವು ಪಡೆಯಲು ಡಿಸಿಎಂ ಸವದಿ ಪ್ರಯತ್ನ BDA JK_Adv BD...
Home Front Page ಸಾರಿಗೆಗೆ ಇಸ್ರೋ ತಂತ್ರಜ್ಞಾನದ ನೆರವು ಪಡೆಯಲು ಡಿಸಿಎಂ ಸವದಿ ಪ್ರಯತ್ನ

ಸಾರಿಗೆಗೆ ಇಸ್ರೋ ತಂತ್ರಜ್ಞಾನದ ನೆರವು ಪಡೆಯಲು ಡಿಸಿಎಂ ಸವದಿ ಪ್ರಯತ್ನ

ಬೆಂಗಳೂರು, ಏಪ್ರಿಲ್ 29, 2020 (www.justkannada.in): ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಸಾರಿಗೆ ಇಲಾಖೆಗೆ ಕಾಯಕಲ್ಪ ನೀಡುವ ಕುರಿತು ಇಂದು ಬೆಂಗಳೂರಿನ ಇಸ್ರೋ ಹೆಡ್ ಕ್ವಾರ್ಟರ್ಸ್ ನಲ್ಲಿ ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಇಸ್ರೋದ ಅಧ್ಯಕ್ಷ ಕೆ. ಶಿವನ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.

ಇಸ್ರೋ ತಂತ್ರಜ್ಞಾನವನ್ನು ಪಡೆದು ಪ್ರಮುಖವಾಗಿ ಸಾರಿಗೆ ಇಲಾಖೆಯ ಕಾರ್ಯ ನಿರ್ವಹಣೆಯ ಗುಣಮಟ್ಟವನ್ನು ಮತ್ತಷ್ಟು ಪುನಶ್ಚೇತನಗೊಳಿಸುವ ಬಗ್ಗೆ ಮತ್ತು ಸಾರಿಗೆ ಸಂಸ್ಥೆಗಳಾದ ಕೆ.ಎಸ್.ಆರ್. ಟಿ. ಸಿ, ವಾಯವ್ಯ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ, ಬಿ.ಎಂ.ಟಿ.ಸಿ ಮುಂತಾದ ಸಂಸ್ಥೆಗಳ ವೆಚ್ಚಗಳನ್ನು ಕಡಿಮೆ ಮಾಡಿ ಆದಾಯ ಹೆಚ್ಚಿಸುವ ಮಾರ್ಗೋಪಾಯದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ಬಸ್ಸುಗಳ ಸೇವೆ ಹಾಗೂ ಸರಕು ಸಾಗಾಣಿಕೆಯ ವಾಹನಗಳ ಕಾರ್ಯಚಟುವಟಿಕೆಗಳು ಗಮನಾರ್ಹ ಪ್ರಮಾಣದಲ್ಲಿವೆ.ಈ ಸೇವೆಗಳ ಕಾರ್ಯದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲವಾಗುವಂತಹ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸುವ ಕುರಿತು ಇಸ್ರೋದಿಂದ ಅಗತ್ಯವಾದ ವೈಜ್ಞಾನಿಕ ಸೇವಾ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಇಸ್ರೋದ ಮುಖ್ಯಸ್ಥರಲ್ಲಿ ಡಿಸಿಎಂ ಸವದಿ ಅವರು ಮನವಿ ಮಾಡಿಕೊಂಡರು.

ಸಾರಿಗೆ ಸಂಸ್ಥೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಒದಗಿಸಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಇಸ್ರೋದಿಂದ ಮಾರ್ಗದರ್ಶನ ಒದಗಿಸಿಕೊಡಬೇಕೆಂದು ಉಪಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು.

ಕೊರೋನಾ ಪಿಡುಗಿನಿಂದಾಗಿ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಮಟ್ಟ ತೀವ್ರವಾಗಿ ಕುಸಿದಿದೆ. ಇದರಿಂದ ಚೇತರಿಸಿಕೊಳ್ಳಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಉಪಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ಅಂಶಗಳ ಬಗ್ಗೆ ಇಸ್ರೋ ಮುಖ್ಯಸ್ಥರು ಸಹಮತ ವ್ಯಕ್ತಪಡಿಸಿ, ಈ ಕುರಿತು ತಂತ್ರಜ್ಞಾನದ ನೆರವು ನೀಡುವ ಭರವಸೆ ವ್ಯಕ್ತಪಡಿಸಿದರು.

ಇಸ್ರೋದ ಸೈಂಟಿಫಿಕ್ ಸೆಕ್ರೆಟರಿ ಡಾ. ಉಮಾಮಹೇಶ್ವರನ್ ಹಾಗೂ ಇಸ್ರೋದ ಅಂತರಿಕ್ಷ್ ಎಂ.ಡಿ. ರಾಕೇಶ್ ಶಶಿಭೂಷಣ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.