ವಾಣಿಜ್ಯ ತೆರಿಗೆ ಇಲಾಖೆ ದಾಳಿ: ಸ್ವಪಕ್ಷದ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದ ಪರಿಷತ್ ಸದಸ್ಯ ಆರ್. ಶಂಕರ್

ಬೆಂಗಳೂರು,ಮಾರ್ಚ್,15,2023(www.justkannada.in): ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ  ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್​.ಶಂಕರ್ ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಎಂ ಎಲ್ ಸಿ  ಆರ್. ಶಂಕರ್, ನನ್ನ ವಿರುದ್ಧ ಸಂಚು ಹೂಡಲಾಗಿದೆ.  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್  ಸಿಗದಿದ್ದರೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಗೆ ಅಗತ್ಯವಿದ್ದ ಸಂದರ್ಭದಲ್ಲಿ ನಾನು ಬೆಂಬಲ ನೀಡಿದ್ದೆ. ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ನಾನೂ ಕಾರಣ. ಬಸವರಾಜ ಬೊಮ್ಮಾಯಿ ಮತ್ತು ಆರ್ ಅಶೋಕ ನನ್ನ ಮನೆಗೆ ಬಂದು ಬೆಂಬಲ ಕೋರಿದ್ದರು. ಅದಾದ ನಂತರ ಅವರು ಪ್ರತಿ ದಿನ ನನ್ನನ್ನು ನೋಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಆರು ಖಾಲಿ ಸ್ಥಾನಗಳಿದ್ದರೂ ನಮ್ಮನ್ನು ಪರಿಗಣಿಸಿಲ್ಲ ಎಂದು ಆರ್. ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.

 

ಐದು ವರ್ಷಕ್ಕೊಮ್ಮೆ ನನ್ನ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಂಚುತ್ತೇನೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಂಚುವುದಕ್ಕಾಗಿ ಬ್ಯಾಗ್ ​ಗಳನ್ನು ಇಡಲಾಗಿತ್ತು. ಇವುಗಳನ್ನು ಕಳೆದ ವರ್ಷ ನವೆಂಬರ್‌ನಲ್ಲಿ ವಿತರಣೆ ಮಾಡಬೇಕಿತ್ತು ಆದರೆ ಗುತ್ತಿಗೆದಾರರು ಪೂರೈಕೆ ವಿಳಂಬ ಮಾಡಿದ್ದರಿಂದ ತಡವಾಯಿತು. ಇವುಗಳನ್ನು ಬಡವ, ಶ್ರೀಮಂತ ಎಲ್ಲ ಜಾತಿಯ ಜನರಿಗೂ ಹಂಚುತ್ತಿದ್ದೇನೆ. ನಾನು ಅದನ್ನು ನನ್ನ ಚಾರಿಟೇಬಲ್ ಟ್ರಸ್ಟೊಂದರ ಬ್ಯಾನರ್ ಅಡಿಯಲ್ಲಿ ವಿತರಿಸುತ್ತಿದ್ದೇನೆ. ಇದು ಯಾವುದೇ ಪಕ್ಷದ ಪರವಾಗಿ ಅಲ್ಲ ಹಾಗೂ ನನ್ನ ಸ್ವಂತ ಹಣದಿಂದ ಹಂಚುತ್ತಿರುವುದು ಎಂದು ಆರ್​. ಶಂಕರ್  ತಿಳಿಸಿದರು.

Key words: Commercial tax -department –raid-MLC-R.Shankar- outrage –BJP