ನಿಮಗೆ ದೇಶಕ್ಕಿಂತ ರಾಜಕಾರಣವೇ ಮುಖ್ಯವಾ..? NEP ರದ್ದು ಮಾಡುತ್ತೇವೆಂದ ಸಿಎಂ ಸಿದ್ಧರಾಮಯ್ಯಗೆ ಸಿ.ಟಿ ರವಿ ತಿರುಗೇಟು.

ಚಿಕ್ಕಮಗಳೂರು, ಆಗಸ್ಟ್ 15,2023(www.justkannada.in): ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ರದ್ದುಗೊಳಿಸಲಾಗುವುದು  ಎಂದು ಹೇಳಿದ್ದ ಸಿಎಂ ಸಿದ್ಧರಾಮಯ್ಯಗೆ ಮಾಜಿ ಸಚಿವ, ಸಿಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೊದಲು ಕಸ್ತೂರಿ ರಂಗನ್​​​ ಅವರ ನೇತೃತ್ವದಲ್ಲಿ ಸಾವಿರಾರು ಜನರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಈ ಯೋಜನೆಯು ಯಾವುದೇ ರಾಜಕೀಯ ಉದ್ದೇಶಗಳನ್ನು ಹೊಂದಿರುವ ಯೋಜನೆಯಾಗಿರಲಿಲ್ಲ. ಬದಲಾಗಿ ಶಿಕ್ಷಣದ ಮೂಲಕ ದೇಶ ಕಟ್ಟುವ ಯೋಜನೆಯಾಗಿತ್ತು. ಈ ರೀತಿ ಉತ್ತಮ ಉದ್ದೇಶವನ್ನು ಹೊಂದಿರುವ ಯೋಜನೆಯನ್ನು ನಿಲ್ಲಿಸಿದ್ದಿರಿ. ನಿಮಗೆ ದೇಶಕ್ಕಿಂತ ರಾಜಕಾರಣವೇ ಮುಖ್ಯವಾ ಎಂದು ಕಿಡಿಕಾರಿದ್ದಾರೆ.

ನಿಮ್ಮ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವಂತಹ ಮಾನಸಿಕತೆ ಹೊಂದಿರುವಂತದ್ದಾಗಿರಬೇಕು. ಮಾತೃಭಾಷೆಯಲ್ಲಿ ಶಿಕ್ಷಣ, ತಾಂತ್ರಿಕ ಕೌಶಲವುಳ್ಳ ಶಿಕ್ಷಣ ಒದಗಿಸುವುದು ತಪ್ಪಾ ಎಂದು ಸಿಟಿ ರವಿ ಪ್ರಶ್ನಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ನೈತಿಕ ಮೌಲ್ಯಗಳನ್ನು ಒಳಗೊಂಡಿದ್ದು, ಮೂರು ವರ್ಷಗಳ ಕಾಲ ಅಭಿಪ್ರಾಯ ಪಡೆದು ಅದರ ಪಠ್ಯಕ್ರಮವನ್ನು ರೂಪಿಸಲಾಗಿದೆ. ಈಗ ಎನ್​ಇಪಿ ಬೇಡ ಎನ್ನಲು ಯಾವುದೇ ರೀತಿ ಸೂಕ್ತ ಕಾರಣಗಳಿಲ್ಲ  ಎಂದು ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

Key words: CM Siddaramaiah- saying – cancel –NEP- CT Ravi