ಕಾರು ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ: ಐವರ ಬಂಧನ.

ಉಡುಪಿ,ಆಗಸ್ಟ್,2,2023(www.justkannada.in):  ಮಂಗಳೂರಿನ ಕಾಲೇಜಿನ ವೈದ್ಯರ ತಂಡ ತೆರಳುತ್ತಿದ್ದ ಕಾರು ತಡೆದು ಅವಾಜ್​ ಹಾಕಿ  ನೈತಿಕ ಪೊಲೀಸ್​ಗಿರಿ ತೋರಿದ್ದ ಐವರನ್ನ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಬಂಧಿತ ಆರೋಪಿಗಳು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಲ್ಪಾಡಿ ಗ್ರಾಮದ ಬಳಿ ಈ ಘಟನೆ ನಡೆದಿತ್ತು.  ಮಂಗಳೂರಿನ ಕಾಲೇಜಿನ ವೈದ್ಯರ ತಂಡ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಬಂಧಿತ ಐವರು  ಅವಾಜ್​ ಹಾಕಿ ಪೊಲೀಸ್​ ಗಿರಿ ನಡೆಸಿದ್ದರು ಎನ್ನಲಾಗಿದೆ.

ಮಾಳ ಎಸ್.ಕೆ. ಗಡಿ ಬಳಿಯಿಂದ ಕಾರು ಹಿಂಬಾಲಿಸಿದ್ದ ಗುಂಪು, ಕುಂಟಲ್ಪಾಡಿ ಬಳಿ ಕಾರು ಅಡ್ಡಗಟ್ಟಿ ವಿಭಿನ್ನ ಕೋಮಿಗೆ ಸೇರಿದವರು ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಅವಾಜ್ ಹಾಕುವುದರ ಜೊತೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಆ ವೇಳೆ ಕಾರಿನಲ್ಲಿದ್ದ ಮಹಿಳೆ 112ಗೆ ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಕೂಡಲೇ ಸ್ಥಳಕ್ಕೆ ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜೆ, ಸರ್ಕಲ್ ಇನ್ಸ್​ಪೆಕ್ಟರ್ ನಾಗರಾಜ್, ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Car- interception – moral police- Five- arrested.