ಮೈಸೂರು, ಜೂನ್.23,2026 (www.justkannada.in): ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಜೀತ ಪದ್ಧತಿಯ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಇಟ್ಟಿಗೆ ಫ್ಯಾಕ್ಟರಿಯಲ್ಲಿ ಬಲವಂತದ ದುಡಿಮೆಗೆ ಒಳಗಾಗಿದ್ದ 18 ಮಂದಿ ಸೋಲಿಗ ಸಮುದಾಯದ ಕಾರ್ಮಿಕರನ್ನು ಪೊಲೀಸರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಫ್ಯಾಕ್ಟರಿ ಮಾಲೀಕರಾದ ಯತಿರಾಜ್, ಗಿರೀಶ್ ಹಾಗೂ ಮಹದೇವ್ ಅವರನ್ನು ಬನ್ನೂರು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ತಮಿಳುನಾಡಿನವರಾದ 7 ಪುರುಷರು ಮತ್ತು 9 ಮಹಿಳೆಯರು ಸೇರಿದಂತೆ ಒಟ್ಟು 18 ಮಂದಿ ಹಲವು ವರ್ಷಗಳಿಂದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 25 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಮೈಸೂರು ಭಾಗಕ್ಕೆ ವಲಸೆ ಬಂದಿದ್ದ ಈ ಕುಟುಂಬಗಳು, ಮುಂಗಡವಾಗಿ ನೀಡಲಾಗಿದ್ದ ಹಣದ ಹೆಸರಿನಲ್ಲಿ ಜೀತ ಪದ್ಧತಿಗೆ ಒಳಗಾಗಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳು ಕಾರ್ಮಿಕರಿಗೆ ಸುಮಾರು ₹25 ಸಾವಿರ ಮುಂಗಡ ಹಣ ನೀಡಿ, ಅದನ್ನೇ ನೆಪವಾಗಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿದೆ. ಕಾರ್ಮಿಕರಿಗೆ ಸ್ವಾತಂತ್ರ್ಯವಿಲ್ಲದ ವಾತಾವರಣ ನಿರ್ಮಿಸಿ, ಬೇರೆಡೆಗೆ ತೆರಳದಂತೆ ನಿರ್ಬಂಧ ಹೇರಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಈ ನಡುವೆ, ಕಾರ್ಮಿಕರಾದ ಮುತ್ತಣ್ಣ ಮತ್ತು ಜ್ಯೋತಿ ದಂಪತಿ ಫ್ಯಾಕ್ಟರಿಯಿಂದ ತಪ್ಪಿಸಿಕೊಂಡು ಹೊರಬರಲು ಯತ್ನಿಸಿದ್ದರು. ಆದರೆ ಅವರ ಬೆನ್ನತ್ತಿದ ಫ್ಯಾಕ್ಟರಿ ಮಾಲೀಕರು ದಂಪತಿಯನ್ನು ಮರಳಿ ಕರೆತಂದು ಕೂಡಿ ಹಾಕಿದ್ದರೆಂದು ತಿಳಿದುಬಂದಿದೆ. ಬಳಿಕ ಮತ್ತೆ ಕೆಲಸಕ್ಕೆ ಸೇರಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ದೊರಕಿದ ಬಳಿಕ ತಹಶೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ಪೊಲೀಸರು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ ಜೀತ ಪದ್ಧತಿಗೆ ಒಳಗಾಗಿದ್ದ ಕಾರ್ಮಿಕರನ್ನು ರಕ್ಷಿಸಿ, ಗಾಯಗೊಂಡಿದ್ದ ಮುತ್ತಣ್ಣ ಹಾಗೂ ಜ್ಯೋತಿ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಪ್ರಕರಣ ಸಂಬಂಧ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ, ಹಲ್ಲೆ ಹಾಗೂ ಕಾರ್ಮಿಕರ ಶೋಷಣೆಗೆ ಸಂಬಂಧಿಸಿದ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿರುವ ಬನ್ನೂರು ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಮೈಸೂರು ಜಿಲ್ಲೆಯಲ್ಲಿ ಮತ್ತೆ ಜೀತ ಪದ್ಧತಿಯ ಕರಾಳ ಮುಖವನ್ನು ಬಯಲಿಗೆಳೆದಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
ENGLISH SUMMARY…
Bonded Labour Rescued in Mysuru; Three Brick Kiln Owners Arrested
Mysuru, June 23: In a major operation, police and NGOs rescued 18 bonded labourers from a brick kiln at Bevanahalli village in T. Narasipura taluk of Mysuru district. Three brick kiln owners — Yathiraj, Girish and Mahadev — have been arrested by Bannur police.
The rescued workers, including 7 men and 9 women from Tamil Nadu, had reportedly been working under bonded labour conditions after receiving advance payments of ₹25,000. The victims belonged to Soliga families that had migrated to Mysuru around 25 years ago in search of livelihood.
The case came to light after a couple, Muttanna and Jyothi, attempted to escape from the kiln. The owners allegedly tracked them down, confined them and assaulted them for refusing to return to work.
Acting on a complaint, a team led by Tahsildar Suresh Achar conducted a raid, rescued the workers and shifted the injured couple to a hospital for treatment. Police have registered a case and launched further investigation.
#Mysuru #BondedLabour #BrickKiln #TamilNaduWorkers #BannurPolice #KarnatakaNews
Key words: Bonded Labour, Rescued, Mysuru, Owners, Arrested





