ಬೆಂಗಳೂರು, ಜೂ.22: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮಾಡಿದ್ದ ಆರೋಪಗಳು ಮತ್ತು ಸವಾಲಿನ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಹಿರಂಗ ಚರ್ಚೆಗೆ ಸಿದ್ಧ ಎಂದು ಘೋಷಿಸಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಡಿಕೆ ಶಿವಕುಮಾರ್, ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಸಮಗ್ರ ಚರ್ಚೆ ನಡೆಸಲು ಆಹ್ವಾನ ನೀಡಿದ್ದಾರೆ. ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ತಾವು ಹಾಗೂ ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ಆಗಮಿಸುವಂತೆ ಅವರು ಕೋರಿದ್ದಾರೆ.

ಪತ್ರದಲ್ಲಿ, “ತಾವು ಪ್ರಾರಂಭಿಸಿದ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಚರ್ಚಿಸಲು ನಾನು ಉತ್ಸುಕನಾಗಿದ್ದೇನೆ. ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ಆಗಮಿಸಿ,” ಎಂದು ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಯೋಜನೆಯ ಭೂಸ್ವಾಧೀನ, ಅನುಮೋದನೆ, ಆಡಳಿತಾತ್ಮಕ ನಿರ್ಧಾರಗಳು ಹಾಗೂ ರಾಜಕೀಯ ಹಸ್ತಕ್ಷೇಪದ ಕುರಿತು ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅಲ್ಲದೆ, ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧವೇ ಎಂದು ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು.

ಈ ಸವಾಲಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಇದೀಗ ಅಧಿಕೃತ ಆಹ್ವಾನ ನೀಡಿರುವುದರಿಂದ, ಜೂನ್ 26ರಂದು ನಡೆಯಲಿರುವ ಚರ್ಚೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಇಬ್ಬರು ಪ್ರಮುಖ ನಾಯಕರ ನಡುವಿನ ಈ ಮುಖಾಮುಖಿ ಚರ್ಚೆಯಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯ ಹಲವು ಅಂಶಗಳು ಸಾರ್ವಜನಿಕವಾಗಿ ಬೆಳಕಿಗೆ ಬರುವ ನಿರೀಕ್ಷೆಯಿದೆ.
ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದ್ದು, ಡಿಕೆಶಿ ಆಹ್ವಾನಕ್ಕೆ ಕುಮಾರಸ್ವಾಮಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಇದೀಗ ಗಮನ ಸೆಳೆದಿದೆ. ಜೂನ್ 26ರ ಚರ್ಚೆ ನಡೆಯುತ್ತದೆಯೇ ಅಥವಾ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Key words: Bidadi Township, DK Shivakumar, HD Kumaraswamy, Karnataka Politics Vidhana Soudha , Bengaluru News, Political Debate
SUMMARY:
Bidadi Township Row Reaches Crucial Stage; CM D.K. Shivakumar Accepts HDK’s Challenge
Bengaluru, June 22: The Bidadi Township controversy has taken a dramatic turn with Deputy Chief Minister D.K. Shivakumar accepting Union Minister H.D. Kumaraswamy’s challenge for a public discussion on the project.
In a letter to Kumaraswamy, Shivakumar invited him and a team of five representatives to attend a discussion at his Vidhana Soudha office on June 26 at 11 a.m.

The invitation comes after Kumaraswamy raised questions about the Bidadi Township project and challenged Shivakumar to a public debate. By formally inviting the Union Minister, Shivakumar has signaled his readiness to defend the project and address the allegations.
The proposed face-off between the two senior leaders has generated significant political interest, with all eyes now on Kumaraswamy’s response.

#BidadiTownship #DKShivakumar #HDKumaraswamy #KarnatakaPolitics #VidhanaSoudha #BengaluruNews #PoliticalDebate






