Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Cinema ಅಮ್ಮನನ್ನು ನೆನೆದು ಹಿರಿಯ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಬರೆದ ಭಾವನಾತ್ಮಕ ಸಾಲುಗಳಿವು…

ಅಮ್ಮನನ್ನು ನೆನೆದು ಹಿರಿಯ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಬರೆದ ಭಾವನಾತ್ಮಕ ಸಾಲುಗಳಿವು…

ಮೈಸೂರು, ಏಪ್ರಿಲ್ 23, 2021 (www.justkannada.in): ಹಿರಿಯ ನಟಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರು ಅಮ್ಮನ ನೆನಪಿನಲ್ಲಿ ಬರೆದ ಭಾವನಾತ್ಮಕ ಪತ್ರವೊಂದು ಫೇಸ್ ಬುಕ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಇತ್ತೀಚಿಗಷ್ಟೇ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿ ನಿಧನರಾಗಿದ್ದರು. ಇದೇ ನೆನಪಿನಲ್ಲಿ ಅಮ್ಮನನ್ನು ನೆನೆಪು ಬರೆದ ಭಾವನಾತ್ಮಕ ಸಾಲುಗಳು ಅವರ ಮೇಲಿನ ಪ್ರೀತಿಯನ್ನು ಸಾರಿ ಹೇಳುತ್ತಿವೆ.
ನನ್ನ ಮುದ್ದು “ಅಮ್ಮ”
ಇಂದಿಗೆ ನೀನು ನಮ್ಮನ್ನ ಅಗಲಿ 15 ದಿನಗಳಾಯಿತು …. ನಾನು ಹುಟ್ಟಿದಾಗಿನಿಂದ ನಿನ್ನ ಬಿಟ್ಟು ಬೇರೆ ಇದ್ದಿಲ್ಲ . ಈಗ ನೀನು ಇರದ ಈ ಜಗತ್ತು ನನಗೆ ಕಷ್ಟ ಎನಿಸುತ್ತಿದೆ. ಎಷ್ಟು ವಿಷಯ ನಿಂಗೆ ಹೇಳಬೇಕು, ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕು ಅನಿಸುತ್ತೆ, ಆದರೆ… ಎಲ್ಲ ವಿಷಯ ಜೀವನದಲಿ ನನಗೆ ಕಲಿಸಿದೆ, ಆದರೆ ನಿನ್ನ ಬಿಟ್ಟು ಬದಕಲು ಯಾಕೆ ಕಲಿಸಲಿಲ್ಲ ಅಮ್ಮ ..ಆ ದಿನ ಬಾಲ್ಕನಿಲಿ ಕೂತು ಮುಂಜಾನೆ ಕಾಫಿ ಸವಿಯುತ್ತ ನೀನು ನಿನ್ನ ಬರ್ತ್ ಡೇ ಸೆಲಬ್ರೇಷನ್ ಇನ್ನೂ 3 ದಿನಗಳಲ್ಲಿ ಅಂತ ರೆಡಿ ಆಗುತ್ತಿದೆ, ಮೊಮಕ್ಳ ಜೊತೆ ಮೆನು ಡಿಸ್ಕಸ್ ಮಾಡ್ತಿದೆ … ಕಣ್ಣಿಗೆ ಕಟ್ಟಿದ ಹಾಗಿದೆ. ನೀನು ಸ್ನಾನ ಮಾಡಿ
ದೇವರ ಎಲ್ಲ ಫೋಟೋಗಳಿಗೆ ದಾಸವಾಳ ಮುಡಿಸಿ, ದೀಪ ಬೆಳಗಿಸಿ ಸುಮಾರು ಹೊತ್ತು ಮಂತ್ರ ಜಪಿಸುತ್ತ ಕುಳಿತಿದ್ದೆ. ನಂತರ ನಾನೇ ಬಂದು ಹೇಳಿದೆ ಜಾಸ್ತಿ ಅಡುಗೆ ಬೇಡ ಅಂತ. ಇಲ್ಲ ಬರೀ ಸಾರು ಪಲ್ಯ ಮಾಡ್ತೀನಿ ಅಂದೆ, ಸರಿ ಅಂತ ನಾನು ರೂಮ್ ನಲ್ಲಿ ಕೆಲಸ ಮುಂದುವರೆಸಿದೆ. ಸುಮಾರು 1.30 ಕ್ಕೆ ಮತ್ತೆ ನಿನ್ನ ಬಳಿ ಬಂದು ಹರಿಣಿ ಆಂಟಿಗೆ ಫೋನ್ ಮಾಡ್ಬೇಕು ಅಂದಾಗ ಟೀ ಟೈಮ್ ಸಂಜೆ ಮಾಡೋಣ ಅಂದೆ. ಆಗ ನೀನು ಇಂಗು ಒಗ್ಗರ್ಣೆ ಕೊಡ್ತಾ ಇದ್ದೆ. ಅದೇ ನಾನು ನಿನ್ನ ಜೊತೆ ಕೊನೆಬಾರಿ ನೇರ ಮಾತನಾಡಿದ್ದು. ನಂತರ ರೂಂ ನಿಂದ ನಿನ್ನ ನೋಡಿದಾಗ ಹಾಲ್ ನಲ್ಲಿ ಇದ್ದ ಸೋಫಾ ಮೇಲೆ 2 ದಿಂಬುಗಳನ್ನು ಇಟ್ಟು ಮಲಗುತಿದ್ದೆ. ಯಾಕೆ ಮಧ್ಯಾಹ್ನ ಸದ ಬಹಾರ್ ನಲ್ಲಿ ಸಿನೆಮಾ ನೋಡುತಿಲ್ಲವಲ್ಲ ಅಂದೆನಿಸಿತ್ತು. ಫ್ಯಾನ್ ಹಾಕಿ ಸೆಕೆ ಜಾಸ್ತಿ ಅಂತ ಮಲಗಿದ್ದಾರೇನೊ ಅನಿಸಿತ್ತು. ಸರಿ ಮಲಗಲಿ 15 ನಿಮಿಷ ಬಿಟ್ಟು ಎಬ್ಬಿಸೋಣ ಅಂದುಕೊಂಡೆ…… ಆದರೆ ಅಮ್ಮ ಆ ಸಮಯದಲ್ಲಿ ನೀನು ನಿನ್ನ ಕೊನೆ ಪ್ರಯಾಣಕ್ಕೆ ಸಿದ್ದವಾಗಿದ್ದೆ ಅಂತ ಗೊತ್ತಾಗಲಿಲ್ಲ …. ಸ್ವಿಚ್ ಆನ್ /ಆಫ್ ಆಗುವುದರಲ್ಲಿ ನೀನು ಇಲ್ಲ ಅದು ಹೇಗೆ ???? ಸಿನೆಮಾದಲ್ಲಿ ಸ್ಟಾಪ್ ಬ್ಲಾಕ್ ಲಿ ಮಾಯವಾದಂತೆ … ತಿಳಿದವರು ಹೇಳ್ತಾರೆ ಶರಣರನ್ನು ಮರಣದಲ್ಲಿ ಕಾಣು ಅಂತ, ಆದರೆ ಹೀಗೆ ತಕ್ಷಣ ನಮ್ಮನ್ನ ಬಿಟ್ಟು ಹೋದರೆ ನಾನು ಹೇಗೆ ಬಾಳಲಿ, ಸಂಕಟ ತಡೆಯಲಾರೆ….ಕಾಲ ಮರೆಸುತ್ತೆ ಅಂತಾರೆ, ಇಲ್ಲ ಇದು ನಿರಂತರ.
ನಿನ್ನಷ್ಟು ಡಿಸಿಪ್ಲಿನ್, ಜೀವನ ಉತ್ಸಾಹ ನನ್ನಲಿ ಇಲ್ಲ. ಆದ್ರೆ ಇನ್ನೂ ಮುಂದೆ ಕಲಿತೀನಿ ನಿನ್ನ ಹಾಗೆ ಬದುಕುವುದನ್ನು. ಪ್ರಾಮೀಸ್! ನಿನ್ನನ್ನು ನನ್ನಲ್ಲಿ ನೋಡುವಂತೆ ಮಾಡ್ತೀನಿ.
ಓಂ ಶಾಂತಿ
ಪ್ರತಿಮಾ ದೇವಿ ಶಂಕರ್ ಸಿಂಗ್
9.4.1933—6.4.2021