ಮೈಸೂರು, ಅಕ್ಟೋಬರ್,9,2026 (www.justkannada.in): ಪಿರಿಯಾಪಟ್ಟಣದಲ್ಲಿ ಮಾಜಿ ಶಾಸಕ ಅಪ್ಪ ಮತ್ತು ಮಗನ ನಡುವೆ ತಿಕ್ಕಾಟ ನಡೆಯುತ್ತಿದ್ದು, ಮಾಜಿ ಶಾಸಕ ಮಹದೇವ್ ಅವರು ತನ್ನ ಮಗನಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಪುತ್ರ ಪ್ರಸನ್ನ ವಿರುದ್ದವೇ ತಂದೆ ಮಹದೇವ್ ತಿರುಗಿಬಿದ್ದಿದ್ದು ಶಿಸ್ತಿನ ಪಾಠ ಮಾಡಿದ್ದಾರೆ. ಸದ್ಯ ಪಿರಿಯಾಪಟ್ಟಣ ಕ್ಷೇತ್ರದಿಂದ ಅಪ್ಪ- ಮಗ ಇಬ್ಬರೂ ಟಿಕೆಟ್ ಆಕಾಂಕ್ಷಿ ಆಗಿದ್ದು ನೋಟಿಸ್ ಜಾರಿ ಮಾಡಲು ಕಾರಣ ಮಗ ಪ್ರಸನ್ನ ಪಾದಯಾತ್ರೆ ಮಾಡಿದ್ದು.
ಹೌದು ಮೊನ್ನೆಯಷ್ಟೇ ಮಗ ಪ್ರಸನ್ನ ಪಾದಯಾತ್ರೆ ನಡೆಸಿದ್ದರು. ಮಗ ನಡೆಸಿದ್ದ ರೈತ ಪಾದಯಾತ್ರೆ ವಿರುದ್ಧ ತಂದೆ ಮಾಜಿ ಶಾಸಕ ಮಹದೇವ್ ಅವರು ಸಿಡಿದೆದ್ದಿದ್ದು, ಪಕ್ಷದಿಂದ ಯಾವುದೇ ಅನುಮತಿ ಪಡೆಯದೆ ಪಾದಯಾತ್ರೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಪ್ರಸನ್ನ ರವರಿಗೆ ನೋಟೀಸ್ ನೀಡಲಾಗಿದೆ. ಸ್ಪಷ್ಟನೆ ನೀಡುವಂತೆ ಸೂಚನೆ ನೀಡಲಾಗಿದೆ. ಪಾದಯಾತ್ರೆಗೆ ಪಕ್ಷದ ಮುಖಂಡರಿಂದಾಗಲಿ ಅಥವಾ ಪದಾಧಿಕಾರಿಗಳಿಂದಾಗಲಿ ಅನುಮತಿ ಪಡೆದಿಲ್ಲ. ಈ ಮೂಲಕ ಕಾರ್ಯಕರ್ತರಿಗೆ ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ. ಪಕ್ಷದ ನಿಬಂಧನೆಗಳನ್ನ ಗಾಳಿಗೆ ತೂರಿದ್ದಾರೆ. ನಿಖಿಲ್ ಅನುಮತಿ ನೀಡಿದ್ದಾರೆಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಪಾದಯಾತ್ರೆ ಕೈಗೊಳ್ಳುವ ಮೂಲಕ ಪಕ್ಷ ಕವಲುದಾರಿಯಲ್ಲಿ ಸಾಗುವಂತೆ ಮಾಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿಲ್ಲ. ಆದರೂ ಪಾದಯಾತ್ರೆ ನಡೆಸಲು ಯಾರು ಅನುಮತಿ ನೀಡಿದರು. ಈ ಕುರಿತು ಸ್ಪಷ್ಟನೆ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.
ಈಗಾಗಲೇ ಜೆಡಿಎಸ್ ನ ಶಿಸ್ತು ಸಮಿತಿ ಮುಂದೆ ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಪ್ರಸನ್ನ ರವರು ಶೀಘ್ರದಲ್ಲೇ ಸಮಜಾಯಿಷಿ ನೀಡಬೇಕಿದೆ.. ಕಾರಣ ನೀಡದಿದ್ದಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮಹದೇವ್ ಅವರು ತಿಳಿಸಿದ್ದಾರೆ.






