ಮೈಸೂರು,ಸೆಪ್ಟಂಬರ್,29,2026 (www.justkannada.in): ರಸ್ತೆ ಬದಿ ನಿಂತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ ಖಾಸಗಿ ಬಸ್ ಹರಿದು ಪುಟ್ಟಕಂದಮ್ಮ ಪ್ರಾಣಬಿಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಬಸವರಾಜು ಮತ್ತು ಕಾಂಚನ ದಂಪತಿಯ ಒಂದೂವರೆ ವರ್ಷದ ಪುತ್ರಿ ಲತೀಕ್ಷಾ ಮೃತಪಟ್ಟ ಬಾಲಕಿ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಸ್ಕೂಲ್ ಬಸ್ ಹರಿದು ಈ ಘಟನೆ ಸಂಭವಿಸಿದೆ.
ಬಸವರಾಜು ಮೊದಲ ಪುತ್ರ ತಿಲಕ್ ಶಾಲೆಯಿಂದ ಬಂದಿದ್ದ. ತಿಲಕ್ ನನ್ನು ಬಸ್ಸಿನಿಂದ ಇಳಿಸಿಕೊಂಡು ಮನೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಬಸ್ ರಿವರ್ಸ್ ತೆಗೆಯುವಾಗ ಚಾಲಕನ ನಿರ್ಲಕ್ಷ್ಯದಿಂದ ಮಗುವಿನ ತಲೆ ಮೇಲೆ ಬಸ್ ಹರಿದಿದೆ.
ಇನ್ನು ಘಟನೆಗೆ ಕಾರಣನಾದ ಚಾಲಕ ಸಿದ್ದರಾಜುವನ್ನು ಬಿಳಿಕೆರೆ ಠಾಣಾ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಯ ಪೋಸ್ಟ್ ಮಾರ್ಟಂ ಮಾಡಲಾಗಿದ್ದು ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.






