ಮೈಸೂರು, ಸೆಪ್ಟಂಬರ್,28, 2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ಸಂಭ್ರಮಕ್ಕೆ ಸೋಮವಾರ ಚಾಲನೆ ದೊರೆತ ಹಿನ್ನೆಲೆಯಲ್ಲಿ, ಮಾನಸಗಂಗೋತ್ರಿ ಬಯಲುರಂಗ ಮಂದಿರದ ರಸ್ತೆಯ ವಿದ್ಯುತ್ ದೀಪಾಲಂಕಾರವನ್ನು ಆರಂಭಿಸಲಾಯಿತು.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ವತಿಯಿಂದ ಮೈಸೂರಿನ ಹಲವು ರಸ್ತೆ ಹಾಗೂ ವೃತ್ತಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಈ ನಡುವೆ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರ ರಸ್ತೆಯಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ.
ಯುವ ಸಂಭ್ರಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಪಡುವಾರಹಳ್ಳಿ ಜಂಕ್ಷನ್ ನಿಂದ ಆರಂಭವಾಗಿ ಬಯಲ ರಂಗಮಂದಿರ ರಸ್ತೆಯಲ್ಲಿ ಅತ್ಯಂತ ಆಕರ್ಷಕ ಹಾಗೂ ವಿಶೇಷ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಸದರಿ ರಸ್ತೆಯ ದೀಪಾಲಂಕಾರವನ್ನು ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರೂ ಆಗಿರುವ ರಮೇಶ್ ಬಂಡಿಸಿದ್ದೇಗೌಡ ಅವರ ಸಮ್ಮುಖದಲ್ಲಿ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಸೆಸ್ಕ್ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್, ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮಾದೇಶ್, ವಿವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂದೀಪ್, ಕೆಪಿಟಿಸಿಎಲ್ ನೌಕರರ ಸಂಘ(659) ಉಪಾಧ್ಯಕ್ಷ ಎಚ್.ವಿ. ಸಂದೀಪ್ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.







