Tuesday, September 29, 2026

BDA Apartments

Tamil Nadu BDA JK_Adv BDA Adv
Home Front Page ತಮಿಳುನಾಡು ನಿಯೋಗ ಮೇಕೆದಾಟು ಯೋಜನೆ ಸ್ಥಳಕ್ಕೆ ಬಂದು ಪರಿಶೀಲಿಸಲಿ: ಸಿಎಂ ಡಿ.ಕೆ ಶಿವಕುಮಾರ್

ತಮಿಳುನಾಡು ನಿಯೋಗ ಮೇಕೆದಾಟು ಯೋಜನೆ ಸ್ಥಳಕ್ಕೆ ಬಂದು ಪರಿಶೀಲಿಸಲಿ: ಸಿಎಂ ಡಿ.ಕೆ ಶಿವಕುಮಾರ್

ನವದೆಹಲಿ: ಸೆಪ್ಟಂಬರ್, 29,2026 (www.justkannada.in): “ಮೇಕೆದಾಟು ಯೋಜನೆಯಿಂದ ನಾವು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳಬಹುದು, ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶ ಕೇಂದ್ರ ಸಚಿವರಿಗೆ ಮನದಟ್ಟಾಗಿದೆ. ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ ಯೋಜನೆ ಜಾಗ ಪರಿಶೀಲನೆ ಮಾಡಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ಮೇಕೆದಾಟು ಅಣೆಕಟ್ಟಿಗೆ ಮತ್ತೊಮ್ಮೆ ಡಿಪಿಆರ್ ಸಲ್ಲಿಕೆಯಾಗಿರುವ ಬಗ್ಗೆ ಎಂದು ಕೇಳಿದಾಗ, “ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಸ್ಥಳ ಗುರುತಿಸಲಾಗಿದೆ. ಈಗ 5 ಸಾವಿರ ಕ್ಯೂಸೆಕ್ ನೀರಿಗೆ ಬಡಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಕೆ.ಆರ್.ಎಸ್ ತುಂಬಿಲ್ಲದ ಕಾರಣ ಕಬಿನಿ ಭಾಗದ ರೈತರು ಗಲಾಟೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ತಂಡ ಸ್ಥಳಕ್ಕೆ ಭೇಟಿ ನೀಡಿದೆ” ಎಂದು ಮಾಹಿತಿ ನೀಡಿದರು.

“ತಮಿಳುನಾಡು ತಂಡ ಭೇಟಿ ನೀಡಿದರೂ ಅವರಿಗೂ ಸಹಕಾರ ನೀಡಲಾಗುವುದು. ನೀರನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ  ಎನ್ನುವುದು ಅಧಿಕಾರಿಗಳಿಗೆ ಸಹ  ಮನದಟ್ಟಾಗಿದೆ. ತಮಿಳುನಾಡು ಮುಖ್ಯಮಂತ್ರಿಯವರಿಗೆ ಮೇಕೆದಾಟು ಯೋಜನೆಯ ಸಭೆಯಲ್ಲಿ ಪಾಲ್ಗೊಳ್ಳಲು ಭೇಟಿ ನೀಡಲು ಮನವಿ ಮಾಡಿಕೊಳ್ಳಲಾಗುವುದು” ಎಂದರು.

ಜಲಶಕ್ತಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ

“ರಾಜ್ಯದ ಕೃಷ್ಣಾ, ಮೇಕೆದಾಟು ಸೇರಿದಂತೆ ಇತರೆ ಜಲವಿವಾದಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಅವರೊಂದಿಗೆ ಚರ್ಚಿಸಿ  ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಿ ಸಹಕರಿಸಲು ಮನವಿ ಮಾಡಲಾಗಿದ್ದು, ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ರಾಜ್ಯದ ಯೋಜನೆಗಳಿಗೆ ಬರಬೇಕಾದ ಅನುದಾನಗಳ ಬಗ್ಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

 ಮಹದಾಯಿ ಯೋಜನೆ: ಜಂಟಿ ಸಭೆ ನಡೆಸಲು ಕೇಂದ್ರದ ಭರವಸೆ

“ಮಹದಾಯಿ ಮತ್ತು ಅರಣ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಭೆಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಅಕ್ಕ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು  ಸಮಸ್ಯೆ  ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.

ರಾಜಕೀಯ ಬದ್ಧತೆ ಅಗತ್ಯ

ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪತ್ರವ್ಯವಹಾರ ಸರಿಯಾಗಿ ಆಗುತ್ತಿಲ್ಲ ಎಂದು ಕೇಳಿದಾಗ, “ಅವೆಲ್ಲಾ ಸುಳ್ಳು.  ಕೇಂದ್ರ ಸಚಿವರೂ ಈ ಬಗ್ಗೆ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ರಾಜಕೀಯ ಬದ್ಧತೆ ಅಗತ್ಯವಿದೆ.  ಅರಣ್ಯ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಲು ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ 2023ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ಮೀಸಲಿರಿಸಿದ್ದರೂ ಈವರೆಗೆ  ಅನುದಾನ ಬಿಡುಗಡೆ ಮಾಡಿಲ್ಲ. ನಾವು ಕೇಳುತ್ತಲೇ ಇದ್ದೇವೆ . ಅವರು ಬಿಡುಗಡೆ ಮಾಡುತ್ತಿಲ್ಲ” ಎಂದರು.

ರಾಜ್ಯದ ಹಿತಕ್ಕೆ ಸಹಕಾರ ನೀಡುವುದಾಗಿ ಕೇಂದ್ರದ ಭರವಸೆ

“ದಕ್ಷಿಣ ವಲಯದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ   ಕೇಂದ್ರ  ಗೃಹಸಚಿವರು  ತಮಿಳುನಾಡಿನಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವುದಾಗಿ  ಮಾತು ಕೊಟ್ಟಂತೆ ಶೀಘ್ರದಲ್ಲಿಯೇ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ, ಪ್ರಸ್ತಾವನೆಗಳನ್ನು ಅವರ ಮುಂದಿಡಲಾಗಿದೆ ಎಲ್ಲರೂ ರಾಜ್ಯದ ಹಿತಕ್ಕೆ ಸಹಕಾರ ಕೊಡುವುದಾಗಿ ಒಪ್ಪಿದ್ದಾರೆ.  ಅಕ್ಟೋಬರ್ 10  ನಂತರ ಸಮಯ ನೀಡುವುದಾಗಿ ತಿಳಿಸಿದ್ದಾರೆ” ಎಂದರು.

ಬರಪರಿಹಾರಕ್ಕೆ ಮನವಿ ಮಾಡಲಾಗಿದೆ

ಕೇಂದ್ರಕ್ಕೆ ಬರ ಪರಿಹಾರ  ಕೇಳಲಾಗಿದೆಯೇ ಎಂದು ಕೇಳಿದಾಗ, “ರಾಜ್ಯದಲ್ಲಿ 200 ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. 101 ತಾಲ್ಲೂಕುಗಳಿಗೆ 700 ಕೋಟಿ ಅನುದಾನ ಕೋರಲಾಗಿತ್ತು. ಪ್ರಸ್ತುತ ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರಿಹಾರದ ಮೊತ್ತವೂ ಏರಿಕೆಯಾಗಲಿದೆ. ಅಕ್ಟೋಬರ್ 3 ರಂದು ಕೇಂದ್ರದ ತಂಡ ಬರ ಪರಿಶೀಲನೆಗಾಗಿ ರಾಜ್ಯಕ್ಕೆ ಆಗಮಿಸಲಿದೆ” ಎಂದರು.

ಭದ್ರಾ ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಮನವಿ

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ಕೇಂದ್ರಕ್ಕೆ ಮನದಟ್ಟು ಮಾಡಿಕೊಡಲಾಗಿದೆ. ಮೂರು ನಾಲ್ಕು ವರ್ಷಗಳಿಂದ ಕೇವಲ ಮಾತುಗಳನ್ನೇ ಆಡಿದ್ದು ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಲಾಗಿದೆ.  ವಿಚಾರ ಸಚಿವ ಸಂಪುಟ ಸಭೆಯಲ್ಲಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ಹಸಿರು ಉದ್ಯಾನವನ: ರಕ್ಷಣಾ ಸಚಿವರ ಭರವಸೆ

“ಬೆಂಗಳೂರಿನ ಇಬ್ಬಲೂರಲ್ಲಿ 700ಎಕರೆ ರಕ್ಷಣಾ ಇಲಾಖೆಯ ಭೂಮಿ ಖಾಲಿ ಇದೆ. ಹಸಿರು ಉದ್ಯಾನವನ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಇದಕ್ಕೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ” ಎಂದು ಹೇಳಿದರು.

“ಇದರ ಜೊತೆಗೆ ಉದ್ಯಾನವನ, ಮೇಕ್ರಿ ಸರ್ಕಲ್ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ಇಲಾಖೆ ಜಮೀನು ಹಸ್ತಾಂತರಕ್ಕೆ ಮನವಿ ಮಾಡಲಾಗಿದೆ. ಬೆಂಗಳೂರಿನ ರಕ್ಷಣಾ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಅವಳಿ ಸುರಂಗ ಯೋಜನೆ, ಅಗರ- ಸರ್ಜಾಪುರ ರಸ್ತೆ ವಿಸ್ತರಣೆ, ಏರ್ಪೋರ್ಟ್ ರಸ್ತೆಯಿಂದ (ಬಳ್ಳಾರಿ ರಸ್ತೆ) ಸರೋವರ ಲೇಔಟ್ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ನೆರವು, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆ ಜಮೀನು ಹಸ್ತಾಂತರದ ಬಗ್ಗೆ ಮನವಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಸ್ಕೈ ಡೆಕ್: ದೇಶದ ಇತರೆ ರಾಜ್ಯಗಳನ್ನು ಪರಿಗಣಿಸಿದಂತೆಯೇ ಬೆಂಗಳೂರನ್ನೂ ಪರಿಗಣಿಸಿ

“ಕಳೆದ ಎರಡೂವರೆ  ವರ್ಷಗಳಿಂದ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ. ನಗರದಲ್ಲಿ  ಎರಡು ವಿಮಾನ ನಿಲ್ದಾಣಗಳಿರುವುದರಿಂದ ಅಲ್ಲಿಂದ  26 ಕಿಮೀ ದೂರದಲ್ಲಿ ಸ್ಥಳ ಗುರುತಿಸಲು ಸಲಹೆ ನೀಡಿದ್ದಾರೆ.  ಪ್ರವಾಸಿಗರು ಭೇಟಿ ನೀಡುವಂತಹ ಸ್ಥಳದಲ್ಲಿ ಇರಬೇಕು. ಹಾಗಾಗಿ ಇತರೆ ದೇಶದ ಇತರೆ ರಾಜ್ಯಗಳನ್ನು ಪರಿಗಣಿಸಿದಂತೆಯೇ ಬೆಂಗಳೂರನ್ನೂ ಪರಿಗಣಿಸುವಂತೆ ಮನವಿ ಮಾಡಲಾಗಿದೆ” ಎಂದರು.

ರಾಜ್ಯದ ಹಿತ ಕಾಪಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ

“ಕಸ್ತೂರಿ ರಂಗನ್ ವರದಿ, ಬರ ಮತ್ತು ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ರಾಜ್ಯದ ಹಿತ ಕಾಪಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ” ಎಂದರು.Tamil Nadu mekedatu mekedatu 1

ಗವಿಸಿದ್ದೇಶ್ವರ ಸ್ವಾಮೀಜಿಗಳ ಕುರಿತ ವದಂತಿ: ತಪ್ಪಿತಸ್ಥರ ವಿರುದ್ಧ ಕ್ರಮ

ಗವಿಸಿದ್ದೇಶ್ವರ ಸ್ವಾಮೀಜಿಗಳನ್ನೂ ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, “ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ನಾನೇ ಖುದ್ದಾಗಿ ಆಹ್ವಾನಿಸಿದ್ದೇನೆ. ಅವರಲ್ಲದೆ ಇನ್ನೂ ಹಲವು ಸ್ವಾಮೀಜಿಗಳನ್ನು ಆಹ್ವಾನಿಸಿದ್ದೇನೆ. ರಾಜ್ಯದ ನಾಡದೇವತೆಗೆ  ಪ್ರಾರ್ಥಿಸಲು ಅವರು ಬರಲಿದ್ದಾರೆ. ಕೆಲವರಿಗೆ ಅಸೂಯೆ ಇರುತ್ತದೆ. ಆದ್ದರಿಂದ ತಪ್ಪು ಸಂದೇಶ ನೀಡಿದ್ದಾರೆ.   ಪೊಲೀಸರು ಇದನ್ನು ತನಿಖೆ ಮಾಡುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದರು.

 ಎಸ್ ಐ ಆರ್ ಈಗ ರಾಷ್ಟ್ರಮಟ್ಟದ ವಿಚಾರ

ಸಿಡಬ್ಲ್ಯುಸಿ ಸಭೆಯಲ್ಲಿ ಎಸ್ಐಆರ್ ವಿಚಾರ ಪ್ರಸ್ತಾಪ ಮಾಡಲಾಗುವುದೇ ಎಂದು ಕೇಳಿದಾಗ, “ಮತಗಳ್ಳತನ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದೆ ಕರ್ನಾಟಕದಿಂದ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಮತಗಳ್ಳತನದ ವಿಚಾರವನ್ನು ಎತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 31 ಸಾವಿರ ಮತಗಳಿಂದ ಸೋತಿದ್ದರು ಹಾಗೂ ಈ ಕ್ಷೇತ್ರವೊಂದರಲ್ಲೇ ಇಂದಿನ ಮಾಹಿತಿಯಂತೆ 12 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಎಸ್ ಐ ಆರ್ ವಿಚಾರ ಈಗ ರಾಷ್ಟ್ರದ ವಿಚಾರವಾಗಿದೆ. ನಮ್ಮ ನಾಯಕರು ಎಸ್ ಐ ಆರ್ ನ ಬಗ್ಗೆ ಹಲವು ಆತಂಕಗಳನ್ನು ವ್ಯಕ್ತಪಡಿಸಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದ್ದು, ನಾವೆಲ್ಲರೂ ಅವರೊಂದಿಗಿದ್ದೇವೆ” ಎಂದರು.delegation cm dks

ರೈತ ಚೈತನ್ಯ ಯಾತ್ರೆ ನನ್ನ ಕ್ಷೇತ್ರದಿಂದಲೇ ಮಾಡಲಿ, ಬೇಡ ಎನ್ನುವುದಿಲ್ಲ

ವಿರೋಧಪಕ್ಷದವರ ರೈತ ಚೈತನ್ಯ ಯಾತ್ರೆ ಬಗ್ಗೆ ಕೇಳಿದಾಗ, “ಈ ಯಾತ್ರೆಯನ್ನು ನನ್ನ ಕ್ಷೇತ್ರದಿಂದಲೇ, ನನ್ನ ಮನೆಯಿಂದಲೇ ಪ್ರಾರಂಭಿಸಲಿ, ನಾನು ಬೇಡ ಎನ್ನುವುದಿಲ್ಲ. ಅವರು ರಾಜಕಾರಣ ಮಾಡಲಿ, ನಾವು ಬೇಡ ಎನ್ನಲಾಗುವುದಿಲ್ಲ. ಅವರ ಎಲ್ಲ ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿಗಳು ಬರುತ್ತವೆ. ಹೋರಾಟ ಮಾಡುವವರಿಗೆ ಬೇಡ ಎನ್ನುವುದಿಲ್ಲ.  ಪಾದಯಾತ್ರೆ ಅವರು ಮಾಡಿಕೊಳ್ಳಲಿ. ವಿರೋಧಪಕ್ಷದವರನ್ನು ಕಸ್ತೂರಿ ರಂಗನ್ ಮತ್ತು  ಬರದ ವಿಚಾರದ ಬಗ್ಗೆ ಚರ್ಚೆ ಮಾಡಲು ಕರೆದಿದ್ದೇವೆ. ಕೆಲವು ನಮ್ಮನ್ನು ಮೂದಲಿಸಿದ್ದಾರೆ. ಸಲಹೆಯನ್ನೂ ನೀಡಿದ್ದಾರೆ. ಈ ವಿಚಾರವಾಗಿ ಸರ್ವಪಕ್ಷದ ನಿಯೋಗ ದೆಹಲಿಗೆ ತೆರಳೋಣವೆಂದು ಹೇಳಿದ್ದೇನೆ. ನಮಗೆ ರಾಜ್ಯದ ಜನರ ಹಿತ ಮುಖ್ಯ. ವಿರೋಧಪಕ್ಷದವರು ಸರ್ವಪಕ್ಷ ನಿಯೋಗದಲ್ಲಿ  ಬರಲು ಒಪ್ಪಿದರೆ ಅವರು ರೈತರೊಂದಿಗೆ ಇದ್ದಾರೆ, ಇಲ್ಲವಾದರೆ ಅವರು ರೈತರೊಂದಿಗೆ ಇಲ್ಲ ಎಂದು ಸಾಬೀತಾಗುತ್ತದೆ” ಎಂದರು.inspect jk02

 

English Summary
Title

Karnataka CM Invites Tamil Nadu to Inspect Mekedatu Project Site

Short Description
Karnataka Chief Minister D.K. Shivakumar has invited a Tamil Nadu delegation to inspect the Mekedatu project site to verify its intended use. Speaking in New Delhi, he clarified that the proposed balancing reservoir on the Cauvery River is strictly a drinking water initiative for Bengaluru, not for irrigation. The Chief Minister offered full cooperation to Tamil Nadu officials to review the structural design, aiming to resolve long-standing interstate water sharing disputes through direct dialogue.
Keywords
Tamil Nadu, delegation, inspect, Mekedatu project, CM D.K. Shivakumar