ಮೈಸೂರು,ಸೆಪ್ಟಂಬರ್,25,2026 (www.justkannada.in) ಕನ್ನಡ ಸಾಹಿತ್ಯದ ಮಹಾನ್ ಸಾಹಿತಿಗಳು ಹಾಗೂ ಸಾಧಕರ ಜೀವನ ಮೌಲ್ಯಗಳನ್ನು ಅರಿತು, ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಕರು ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಪ್ರೊ. ಎ.ಎಸ್. ಮಹೇಶ್ ಕರೆ ನೀಡಿದರು.
ನಗರದ ಕೆ.ಬಿ.ಎಲ್. ಲೇಔಟ್ನ ದೇವೇಗೌಡ ಸರ್ಕಲ್ನಲ್ಲಿರುವ ಕಾವೇರಿ ಕಾಲೇಜು ಆಫ್ ಮ್ಯಾನೇಜ್ಮೆಂಟ್ ನಲ್ಲಿ ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ’ ವಿಷಯದ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಹಲವು ಜೀವನ ಮೌಲ್ಯಗಳು ಅಡಕವಾಗಿವೆ. ಪಂಪ, ರನ್ನ, ಬೇಂದ್ರೆ ಹಾಗೂ ಕುವೆಂಪು ಅವರ ಸಾಹಿತ್ಯ ಮತ್ತು ಜೀವನದ ಆಶಯಗಳನ್ನು ಯುವಜನರು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯ ಕೇವಲ ಓದಿಗೆ ಸೀಮಿತವಾಗದೆ, ಬದುಕನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಅವರು ಹೇಳಿದರು.
ಅದೇ ರೀತಿ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಹುಲ್ ದ್ರಾವಿಡ್ ಅವರ ಶಿಸ್ತು, ತಾಳ್ಮೆ, ಪರಿಶ್ರಮ, ವಿನಯ ಹಾಗೂ ಬದ್ಧತೆಯಂತಹ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಶಸ್ಸು ಎಂಬುದು ಕೇವಲ ಪ್ರತಿಭೆಯಿಂದ ಮಾತ್ರ ಸಾಧ್ಯವಲ್ಲ; ನಿರಂತರ ಪರಿಶ್ರಮ, ಶಿಸ್ತು, ಮೌಲ್ಯಾಧಾರಿತ ಬದುಕು ಹಾಗೂ ಉತ್ತಮ ನಡವಳಿಕೆಯೂ ಅಗತ್ಯ ಎಂದು ಅವರು ತಿಳಿಸಿದರು.
ಪಂಪ, ರನ್ನ, ಬೇಂದ್ರೆ, ಕುವೆಂಪು ಮೊದಲಾದ ಮಹನೀಯರ ಕೃತಿಗಳಲ್ಲಿರುವ ಮಾನವೀಯತೆ, ಸಮಾಜಮುಖಿ ಚಿಂತನೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನೈತಿಕ ಮೌಲ್ಯಗಳನ್ನು ಯುವಕರು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಪ್ರೊ. ಎ.ಎಸ್. ಮಹೇಶ್ ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಕೇವಲ ವಿದ್ಯಾರ್ಹತೆ ಅಥವಾ ಉದ್ಯೋಗದ ದೃಷ್ಟಿಯಿಂದ ಮಾತ್ರ ರೂಪಿಸಿಕೊಳ್ಳದೆ, ಉತ್ತಮ ನಾಗರಿಕರಾಗಿ ಬೆಳೆಯುವ ನಿಟ್ಟಿನಲ್ಲಿ ಜ್ಞಾನ, ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಪ್ರೊ. ಎಸ್. ಶ್ರೀಕಂಠಸ್ವಾಮಿ, ಪ್ರಾಂಶುಪಾಲರಾದ ಡಾ. ದೀಪು ಆರ್., ಕಾರ್ಯಕ್ರಮದ ಆಯೋಜಕರಾದ ಕನ್ನಡ ವಿಭಾಗದ ಮುಖ್ಯಸ್ಥ ಕುಮಾರ್ ಹೆಚ್.ಬಿ., ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಶೇಷ ಉಪನ್ಯಾಸವು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವುದರ ಜೊತೆಗೆ, ಸಾಹಿತ್ಯದ ಜೀವನ ಮೌಲ್ಯಗಳನ್ನು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಪ್ರೇರಣೆಯನ್ನು ನೀಡಿತು.






