ಮೈಸೂರು,ಸೆಪ್ಟಂಬರ್,25,2026 (www.justkannada.in): ಇತ್ತೀಚೆಗೆ ತಾವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠೀ ನಡೆಸಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಾಗೇನಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ. ನಿಮಗೆ ಹಾಗೆ ಅನ್ನಿಸಬಹುದು. ಸಿದ್ದರಾಮಯ್ಯ ಮತ್ತು ನಾನು ಚೆನ್ನಾಗಿಯೇ ಇದ್ದೇವೆ” ಎಂದು ಹೇಳಿದರು.
ಇಡಿ ದಾಳಿ ನಡೆದ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಬಂದಿದ್ದರು. ಸಿದ್ದರಾಮಯ್ಯ ಅವರ ಆಪ್ತರು ಅವರ ಜೊತೆಯಲ್ಲೇ ಇದ್ದಾರೆ ಎಂದು ಹೇಳುವ ಮೂಲಕ, ತಮ್ಮ ನಡುವಿನ ಅಂತರದ ಪ್ರಶ್ನೆಗೆ ಸಚಿವರು ಜಾಣ್ಮೆಯ ಉತ್ತರ ನೀಡಿದರು.
ಇಡಿ ದಾಳಿ: “ನೋಟಿಸ್ ಕೊಟ್ಟರೆ ಉತ್ತರ ಕೊಡುತ್ತೇನೆ”
ತಮ್ಮ ವಿರುದ್ಧ ನಡೆದಿರುವ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಇಡಿ ಅಧಿಕಾರಿಗಳು ಯಾವುದೇ ನೋಟಿಸ್ ನೀಡಿಲ್ಲ. ನೋಟಿಸ್ ಕೊಟ್ಟರೆ ಹೋಗಿ ಉತ್ತರ ಕೊಡುತ್ತೇನೆ” ಎಂದರು.
ಕೇಂದ್ರ ಸರ್ಕಾರದ ಯೋಜನೆಯಲ್ಲಿ ನಾನು ಯಾವುದೇ ಕಮಿಷನ್ ಪಡೆದಿಲ್ಲ. ಕಮಿಷನ್ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ದಾಖಲೆ ಬೇಕು. ನನ್ನ ಮೇಲೆ ಯಾಕೆ ದಾಳಿ ನಡೆಯಿತು ಎಂಬುದನ್ನು ತಿಳಿದುಕೊಳ್ಳಲು ನನಗೆ ಸಮಯ ಬೇಕು” ಎಂದು ಹೇಳಿದರು.
ಕಳೆದ 12 ವರ್ಷಗಳಲ್ಲಿ ಬಿಜೆಪಿಯ ಯಾವುದೇ ನಾಯಕರ ಮೇಲೆ ಇಡಿ ದಾಳಿ ನಡೆದಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿಯವರ ವಿರುದ್ಧ ದೂರು ನೀಡಿದರೂ ದಾಳಿ ನಡೆಯುವುದಿಲ್ಲ ಎಂದು ಟೀಕಿಸಿದರು.
ನೀಲಿ ಶಾಲು ವಿವಾದ: ಹೆಸರೇಳದೆ ಪ್ರತಾಪ್ ಸಿಂಹಗೆ ಟಾಂಗ್
ನೀಲಿ ಶಾಲು ಕುರಿತು ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಗೆ ಸತೀಶ್ ಜಾರಕಿಹೊಳಿ, “ದೇಶಕ್ಕೆ ನೀಲಿ ಶಾಲಿನ ಅವಶ್ಯಕತೆಯಿದೆ. ಈ ಬಗ್ಗೆ ನಮ್ಮ ಸ್ವಾಮೀಜಿ ಉತ್ತರ ಕೊಟ್ಟಿದ್ದಾರೆ. ಈ ವಿಚಾರವಾಗಿ ಹೆಚ್ಚೇನೂ ಹೇಳುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.
ಈ ಮೂಲಕ ಪ್ರತಾಪ್ ಸಿಂಹ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಸಚಿವರು ಟಾಂಗ್ ನೀಡಿದರು.






