ಬೆಂಗಳೂರು, ಜುಲೈ,22,, 2026 (www.justkannada.in): ಪತ್ರಿಕೋದ್ಯಮಕ್ಕೆ ತಾಳ್ಮೆ, ಪ್ರಾಮಾಣಿಕತೆ ಮತ್ತು ವಿನಮ್ರತೆ ಮುಖ್ಯ. ನಂಬಿಕೆ ಎಂಬುದು ಕೇವಲ ಒಂದು ಬಾರಿ ಗಳಿಸುವ ಸಂಗತಿಯಲ್ಲ. ಪ್ರತಿದಿನವೂ ನೀವು ನಂಬಿಕೆಗೆ ಅರ್ಹರಾಗಲು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ತನಿಖಾ ಪತ್ರಕರ್ತೆ ಹಾಗೂ ‘ದಿ ನ್ಯೂಸ್ ಮಿನಿಟ್’ ಮಾಧ್ಯಮದ ಸಹ-ಸಂಸ್ಥಾಪಕರಾದ ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ ಅವರು ಕಿವಿಮಾತು ಹೇಳಿದರು.
ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ಶಾಲೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹಮ್ಮಿಕೊಂಡಿದ್ದ “ಪ್ರಜಾಪ್ರಭುತ್ವ ಸಮಾಜದಲ್ಲಿ ಸಾರ್ವಜನಿಕ ಒಳಿತಿಗಾಗಿ ಪತ್ರಿಕೋದ್ಯಮ” ಎಂಬ ವಿಷಯದ ಕುರಿತು ಮಾತನಾಡಿದ ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ ಅವರು, ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ, ಸಾರ್ವಜನಿಕ ಚರ್ಚೆಗಳನ್ನು ಬಲಪಡಿಸುವಲ್ಲಿ ಹಾಗೂ ಸಮಾಜದಲ್ಲಿ ಸತ್ಯ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯುವಲ್ಲಿ ಪತ್ರಿಕೋದ್ಯಮದ ಪಾತ್ರದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
“ತನಿಖಾ ಪತ್ರಿಕೋದ್ಯಮ ಎಂದರೆ ಕೇವಲ ದಾಖಲೆಗಳಲ್ಲ. ಇದು ಜನರೊಂದಿಗಿನ ಸಂಬಂಧ, ತಾಳ್ಮೆ ಮತ್ತು ನಿಮಗೆ ಮಾಹಿತಿ ನೀಡುವ ವ್ಯಕ್ತಿಯ ನಂಬಿಕೆಯನ್ನು ಗಳಿಸುವುದಾಗಿದೆ ಎಂದರು.
ಪತ್ರಿಕೋದ್ಯಮಕ್ಕೆ ತಾಳ್ಮೆ, ಪ್ರಾಮಾಣಿಕತೆ ಮತ್ತು ವಿನಮ್ರತೆ ಮುಖ್ಯ ಎಂದು ಚಿತ್ರಾ ಅವರು, “ನಿಮ್ಮ ಅಹಂಕಾರವನ್ನು ಹೊರಗಿಡಿ. ಇಲ್ಲಿ ನೀವು ಮುಖ್ಯವಲ್ಲ, ನಿಮ್ಮ ಸುದ್ದಿ ಮುಖ್ಯ. ಯಾವ ದಿನ ಸುದ್ಧಿಗಿಂತ ನೀವೇ ಮುಖ್ಯ ಎಂದು ಭಾವಿಸುತ್ತೀರೋ, ಅಂದೇ ನೀವು ಪತ್ರಕರ್ತರಾಗಿ ಸೋತಂತೆ.” ಪತ್ರಿಕೋದ್ಯಮ ಸಮಾಜದ ಸೇವೆಗಾಗಿ ಇರುವುದು. “ಪತ್ರಿಕೋದ್ಯಮ ಎಂದರೆ ಜನರ ಬೆನ್ನು ಬೀಳುವುದಲ್ಲ. ಪತ್ರಿಕೋದ್ಯಮ ಎಂದರೆ ಸತ್ಯದ ಬೆನ್ನು ಬೀಳುವುದು—ಅದು ಎಷ್ಟೇ ಕಷ್ಟ ಇರಲಿ, ಎಷ್ಟೇ ಸಮಯ ತೆಗೆದುಕೊಳ್ಳಲಿ ಎಂದು ನುಡಿದರು.
ಜೈನ್ (ಪರಿಗಣಿತ ವಿಶ್ವವಿದ್ಯಾಲಯ)ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಭಾರ್ಗವಿ ಡಿ. ಹೆಮ್ಮಿಗೆ ಅವರು, ನಮ್ಮ ವಿದ್ಯಾರ್ಥಿಗಳಲ್ಲಿ ನಿಜವಾದ ಪತ್ರಿಕೋದ್ಯಮದ ಮೌಲ್ಯಗಳಾದ ಸತ್ಯ, ನೈತಿಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಧೈರ್ಯವನ್ನು ತುಂಬುವುದು ನಮ್ಮ ಉದ್ದೇಶವಾಗಿದೆ.“ಇಂತಹ ಸಾಧಕ ಪತ್ರಕರ್ತರೊಂದಿಗಿನ ಸಂವಾದವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಧ್ಯಮ ಜಗತ್ತಿನ ಅನುಭವವನ್ನು ನೀಡುತ್ತದೆ ಮತ್ತು ಜವಾಬ್ದಾರಿಯುತ, ನೈತಿಕ ಹಾಗೂ ಸಾಮಾಜಿಕ ಪ್ರಜ್ಞೆಯುಳ್ಳ ಮಾಧ್ಯಮ ವೃತ್ತಿಪರರನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯದ ಬದ್ಧತೆಯನ್ನು ಬಲಪಡಿಸುತ್ತದೆ,” ಎಂದರು.
ಈ ಉಪನ್ಯಾಸದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ (BAJ) ಮತ್ತು ಸ್ನಾತಕೋತ್ತರ ಪದವಿ (MAJ) ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ತನಿಖಾ ಪತ್ರಿಕೋದ್ಯಮ, ಮಾಧ್ಯಮ ಸ್ವಾತಂತ್ರ್ಯ, ಪತ್ರಿಕೋದ್ಯಮದ ನೈತಿಕತೆ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಇಂದಿನ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಪತ್ರಕರ್ತರ ಪಾತ್ರದ ಕುರಿತು ಕೇಳಿದ ಪ್ರಶ್ನೆಗಳಿಗೆ ಸ್ಪೀಕರ್ ಅವರು ಉತ್ತರಿಸಿದರು.
Key words: Patience, honesty,humility, journalism, Chitra Subramaniam Duvella







