ಮಂಡ್ಯ.ಜುಲೈ,22,2026 (www.justkannada.in): ನ್ಯಾಯಾಲಯಗಳಲ್ಲಿ ದೀರ್ಘಕಾಲ ಬಾಕಿ ಉಳಿಯುವ ವ್ಯಾಜ್ಯಗಳಿಗೆ ಪರ್ಯಾಯವಾಗಿ ಮಧ್ಯಸ್ಥಿಕೆ (Mediation) ವ್ಯವಸ್ಥೆ ಪರಿಣಾಮಕಾರಿ ಹಾಗೂ ಜನಸ್ನೇಹಿ ಪರಿಹಾರ ಮಾರ್ಗವಾಗಿ ರೂಪುಗೊಳ್ಳುತ್ತಿದ್ದು, ಸಮಾಜದಲ್ಲಿ ಸೌಹಾರ್ದಯುತ ವಿವಾದ ಪರಿಹಾರದ ಸಂಸ್ಕೃತಿಯನ್ನು ಬೆಳೆಸಲು ಮಧ್ಯಸ್ಥಿಕೆ ತರಬೇತಿಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸುಬ್ರಮಣ್ಯ ಜೆ.ಎನ್. ತಿಳಿಸಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎಡಿಆರ್ (ADR) ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ, ವಕೀಲರ ಸಂಘ, ಮಂಡ್ಯ ಹಾಗೂ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳ ನೂತನ ಮಧ್ಯಸ್ಥಿಕೆದಾರರ 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಕಾರ್ಯಾಗಾರ–2026 ಉದ್ಘಾಟಿಸಿ ಸುಬ್ರಮಣ್ಯ ಜೆ.ಎನ್ ಅವರು ಮಾತನಾಡಿದರು.
ಮಧ್ಯಸ್ಥಿಕೆ ಪ್ರಕ್ರಿಯೆಯು ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ವಿವಾದದಲ್ಲಿರುವ ಎರಡೂ ಪಕ್ಷಗಳ ನಡುವೆ ಪರಸ್ಪರ ವಿಶ್ವಾಸ, ಸಹಕಾರ ಮತ್ತು ಬಾಂಧವ್ಯವನ್ನು ಉಳಿಸಿಕೊಂಡೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮಧ್ಯಸ್ಥಿಕೆಯ ತತ್ವಗಳು, ಪರಿಣಾಮಕಾರಿ ಸಂವಹನ ಕೌಶಲ್ಯ, ಸಮಾಲೋಚನಾ ವಿಧಾನಗಳು, ವಿವಾದ ನಿರ್ವಹಣಾ ತಂತ್ರಗಳು, ನೈತಿಕ ಮೌಲ್ಯಗಳು ಹಾಗೂ ಪ್ರಾಯೋಗಿಕ ಮಾದರಿ ಪ್ರಕರಣಗಳ ಮೂಲಕ ಸಮಗ್ರ ತರಬೇತಿ ನೀಡಲಾಗುತ್ತಿದೆ. ನ್ಯಾಯಾಧೀಶರು, ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ವೃತ್ತಿಪರರು ಭಾಗವಹಿಸಿ ಮಧ್ಯಸ್ಥಿಕೆ ಪ್ರಕ್ರಿಯೆಯ ಸೂಕ್ಷ್ಮ ಅಂಶಗಳನ್ನು ಅರಿತುಕೊಳ್ಳಲಿದ್ದಾರೆ ಎಂದರು.
ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಟಿ.ಎಸ್. ಮಾತನಾಡಿ, ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ತರಬೇತಿಯ ಮೂಲಕ ಪರಿಣಾಮಕಾರಿ ಮಧ್ಯಸ್ಥಿಕೆದಾರರಾಗಿ ರೂಪುಗೊಂಡು ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಆನಂದ.ಎಂ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸರ್ಕಾರಿ ಅಭಿಯೋಜಕರಾದ ವೆಂಕಟಲಕ್ಷ್ಮಮ್ಮ ಜಿ., ಹಿರಿಯ ಮಧ್ಯಸ್ಥಿಕ ತರಬೇತುದಾರ ಬೀನಾ ದೇವರಾಜ್ ಮತ್ತು ಗೀತಾದೇವಿ ಎಂ. ಪಾಪಣ್ಣ, ಅನುರಾಧ ಎಸ್. ಆರ್., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಬಿ. ಅವರು ಉಪಸ್ಥಿತರಿದ್ದರು.
Key words: Mediation, good way, resolve disputes, Subramanya J.N.






