Saturday, September 5, 2026

BDA Apartments

Home Front Page ವಸತಿ ಶಾಲೆಯಲ್ಲಿ ಅವ್ಯವಸ್ಥೆ: ಸಚಿವ ಕೆ.ಎಂ. ಶಿವಲಿಂಗೇಗೌಡ  ತೀವ್ರ ತರಾಟೆ, ಸ್ಥಳಾಂತರಕ್ಕೆ ಆದೇಶ

ವಸತಿ ಶಾಲೆಯಲ್ಲಿ ಅವ್ಯವಸ್ಥೆ: ಸಚಿವ ಕೆ.ಎಂ. ಶಿವಲಿಂಗೇಗೌಡ  ತೀವ್ರ ತರಾಟೆ, ಸ್ಥಳಾಂತರಕ್ಕೆ ಆದೇಶ

ಹಾಸನ,ಸೆಪ್ಟಂಬರ್,5,2026 (www.justkannada.in): ಹಾಸನ ಶಾಂತಿಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಅವ್ಯವಸ್ಥೆಯ ಬಗ್ಗೆ ವರದಿಯಾದ ಬೆನ್ನಲ್ಲೆ ಈ ವಿಚಾರಕ್ಕೆ ಸಂಬಂಧಿಸಿದಂತ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತೀವ್ರ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ನಗರದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾ ಸೇವಾ’ ಆಂದೋಲನ ಸಭೆಯಲ್ಲಿ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ಪ್ರಸ್ತಾಪಿಸಿದ ಸಚಿವ ಶಿವಲಿಂಗೇಗೌಡರು, “ಕೂಡಿ ಹಾಕಲು ಅವರೇನು ಕುರಿ-ದನಗಳಾ? ನಿಮ್ಮ ಮಕ್ಕಳಾಗಿದ್ದರೆ ಇಂತಹ ಜಾಗದಲ್ಲಿ ಮಲಗಲು ಬಿಡುತ್ತಿದ್ದಿರಾ? ನಿಮ್ಮ ಆತ್ಮಸಾಕ್ಷಿ ಇದಕ್ಕೆ ಹೇಗೆ ಒಪ್ಪುತ್ತದೆ? ಎಂದು ಕಿಡಿಕಾರಿದರು.

ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಈ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿಯ 92 ಬಾಲಕರು ಹಾಗೂ 80 ಬಾಲಕಿಯರು ಸೇರಿದಂತೆ ಒಟ್ಟು 172 ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದು, ಕಳೆದ ಐದು ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ ನಲ್ಲೇ ಮಕ್ಕಳು ಪಾಠ ಕಲಿಯುವಂತಾಗಿದೆ. ಗಾಳಿ-ಬೆಳಕಿನ ಕೊರತೆಯ ಜೊತೆಗೆ 92 ಬಾಲಕರಿಗೆ ಕೇವಲ ಐದು ಶೌಚಾಲಯಗಳಿದ್ದು, ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಶಿವಲಿಂಗೇಗೌಡರು, ಮುಂದಿನ 15 ದಿನಗಳ ಒಳಗೆ ಪರ್ಯಾಯ ಸುಸಜ್ಜಿತ ಬಾಡಿಗೆ ಕಟ್ಟಡವನ್ನು ಹುಡುಕಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕು. ನಾನು ಮುಂದಿನ ಬಾರಿ ಭೇಟಿ ನೀಡುವ  ವೇಳೆಗೆ ಮಕ್ಕಳು ಈ ಹಳೆಯ ಶೆಡ್‌ ನಲ್ಲಿ ಇರಬಾರದು. ಇಲ್ಲದಿದ್ದರೇ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಕೊಟ್ಟರು.

Key words: residential school, Students, Officers, Minister, K.M. Shivalingegowda, orders