Friday, August 21, 2026

BDA Apartments

Home Crime RTI ಕಾರ್ಯಕರ್ತ ಗಂಗರಾಜು ವಿರುದ್ಧ ATEMPT TO MURDER..!

RTI ಕಾರ್ಯಕರ್ತ ಗಂಗರಾಜು ವಿರುದ್ಧ ATEMPT TO MURDER..!

ಮೈಸೂರು,ಮೇ,21,2026 (www.justkannada.in): ಮೈಸೂರಿನ ಆರ್‌ ಟಿಐ ಕಾರ್ಯಕರ್ತ ಗಂಗರಾಜು ವಿರುದ್ಧ ನಿವೇಶನ ವ್ಯವಹಾರಕ್ಕೆ ಸಂಬಂಧಿಸಿದ ಕೊಲೆ ಯತ್ನ ಆರೋಪದಡಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೇಶನ ಖರೀದಿ ಹೆಸರಿನಲ್ಲಿ 20 ಲಕ್ಷ ರೂ. ಮುಂಗಡ ಹಣ ಪಡೆದು ಬಳಿಕ ಹಣ ವಾಪಸ್ ನೀಡದೇ, ಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆಯೇ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಪ್ರಕಾರ, ಪಿರ್ಯಾದುದಾರರಿಗೆ 2024ರಲ್ಲಿ ಮೂಡಾದಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ಎಂಬುವರ ಪರಿಚಯವಾಗಿತ್ತು. ಅವರು ಮೈಸೂರು ನಗರದ ಜೆಪಿ ನಗರದಲ್ಲಿರುವ ಒಂದು ನಿವೇಶನವನ್ನು ಖರೀದಿ ಮಾಡಿಕೊಳ್ಳುವಂತೆ ಸಲಹೆ ನೀಡಿ, ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ಪರಿಚಯ ಮಾಡಿಕೊಟ್ಟಿದ್ದರು. ಬಳಿಕ ಪಿರ್ಯಾದುದಾರರು ಗಂಗರಾಜು ಅವರೊಂದಿಗೆ ನಿವೇಶನವನ್ನು ಪರಿಶೀಲಿಸಿದ್ದು, ಸುಮಾರು 8712 ಚದರ ಅಡಿ ವಿಸ್ತೀರ್ಣದ ಆ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗಂಗರಾಜು ಅವರೇ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆ ವೇಳೆ ನಿವೇಶನದ ಮಾಲೀಕರಾದ ಬನ್ನಂತೆಗೌಡರೂ ಸ್ಥಳದಲ್ಲಿದ್ದು, “ವ್ಯವಹಾರವನ್ನು ಗಂಗರಾಜು ಅವರ ಜೊತೆಯೇ ನಡೆಸಿಕೊಳ್ಳಿ, ನಾನು ಬಂದು ಸಹಿ ಮಾಡುತ್ತೇನೆ” ಎಂದು ಹೇಳಿದ್ದಾಗಿ ಪಿರ್ಯಾದುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಚದರ ಅಡಿಗೆ 3,800 ರೂ. ದರ ನಿಗದಿ ಮಾಡಲಾಗಿದ್ದು, 2024ರ ಜೂನ್ ತಿಂಗಳಲ್ಲಿ ಪಿರ್ಯಾದುದಾರರು 20 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಗಂಗರಾಜು ಅವರಿಗೆ ಮುಂಗಡವಾಗಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ನಂದೀಶ್ ಸಹ ಉಪಸ್ಥಿತರಿದ್ದರು ಎನ್ನಲಾಗಿದೆ.

ಹಣ ಸ್ವೀಕರಿಸಿದ ಬಳಿಕ ನಿವೇಶನದ ಟೈಟಲ್ ಡೀಡ್ ಪಡೆದು, ಬನ್ನಂತೆಗೌಡರಿಂದ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡುವುದಾಗಿ ಗಂಗರಾಜು ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಬಳಿಕ ಹಲವು ಬಾರಿ ಸಂಪರ್ಕಿಸಿದರೂ ನೋಂದಣಿ ಮಾಡಿಕೊಡದೇ, ಹಣ ವಾಪಸ್ ನೀಡುವ ಭರವಸೆ ನೀಡಿದರೂ ಇದುವರೆಗೆ ಯಾವುದೇ ಹಣ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಇದಾದ ಬಳಿಕ ಮೇ 20, 2026ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಪಿರ್ಯಾದುದಾರರು ಕಾರ್ಯನಿಮಿತ್ತ ಮೂಡ ಕಚೇರಿಗೆ ತೆರಳಿದ್ದ ವೇಳೆ ಗಂಗರಾಜು ಅಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಹಣ ವಾಪಸ್ ನೀಡುವಂತೆ ಕೇಳಿದಾಗ, “ನಂದೀಶ್‌ಗೆ ತಿಳಿಸಿದ್ದೇನೆ” ಎಂದು ಗಂಗರಾಜು ಹೇಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಪಿರ್ಯಾದುದಾರರು ನಂದೀಶ್‌ ಗೆ ಕರೆ ಮಾಡಿ ಕಚೇರಿಗೆ ಬರಲು ತಿಳಿಸಿದ್ದು, ನಂದೀಶ್ ಬರುವುದಕ್ಕೂ ಮುನ್ನವೇ ಗಂಗರಾಜು ತಮ್ಮ ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗಿದೆ. ನಂತರ ಸ್ಥಳಕ್ಕೆ ಬಂದ ನಂದೀಶ್, “ನಾನು ಸೆಟಲ್ ಮಾಡಿಕೊಡುತ್ತೇನೆ, ಬಿಡಿ” ಎಂದು ಸಮಾಧಾನಪಡಿಸಿದ್ದಾಗಿ ಹೇಳಲಾಗಿದೆ.

ಅದೇ ದಿನ ಮಧ್ಯಾಹ್ನ ಸುಮಾರು 3.15 ಗಂಟೆಗೆ ಮೈಸೂರು ನಗರದ ರಾಮಕೃಷ್ಣನಗರದ ಉಪನೋಂದಣಾಧಿಕಾರಿ (ದಕ್ಷಿಣ) ಕಚೇರಿ ಬಳಿ ಗಂಗರಾಜು ಅವರ ಕೆಎ-09-ಎಂಡಿ-5058 ಸಂಖ್ಯೆಯ ಕಾರು ನಿಂತಿರುವುದನ್ನು ಪಿರ್ಯಾದುದಾರರು ಗಮನಿಸಿದ್ದಾರೆ. ಈ ವೇಳೆ ತಮ್ಮ ಸ್ನೇಹಿತ ಸಣ್ಯಸ್ವಾಮೇಗೌಡರನ್ನು ಕಾಯುತ್ತ ನಿಂತಿದ್ದಾಗ ಗಂಗರಾಜು ಅಲ್ಲಿಗೆ ಬಂದಿದ್ದಾರೆ. “ನಿಮ್ಮ ಜೊತೆ ಮಾತನಾಡಬೇಕು” ಎಂದು ಹೇಳಿದರೂ ಗಂಗರಾಜು ಕಾರಿನೊಳಗೆ ಕುಳಿತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬಳಿಕ ಪಿರ್ಯಾದುದಾರರು ಕಾರಿನ ಮುಂದೆ ಹೋಗಿ ಮಾತನಾಡಲು ಯತ್ನಿಸಿದಾಗ, ಗಂಗರಾಜು ಕಾರನ್ನು ವೇಗವಾಗಿ ಚಲಾಯಿಸಿ ತಮ್ಮ ಮೇಲೆ ನುಗ್ಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಪಿರ್ಯಾದುದಾರರು ಗಾಬರಿಗೊಂಡು ಕಾರಿನ ಬಾನೆಟ್ ಮೇಲೆ ಬಿದ್ದಿದ್ದು, ಕಾರಿನ ವೈಫರ್ ಹಿಡಿದುಕೊಂಡೇ ಉಳಿದಿದ್ದಾರೆ. ಆದರೂ ಗಂಗರಾಜು ಕಾರನ್ನು ನಿಲ್ಲಿಸದೇ, ಸುಮಾರು ಒಂದು ಕಿಲೋಮೀಟರ್‌ ದೂರ ವೇಗವಾಗಿ ಚಲಾಯಿಸಿಕೊಂಡು ಕುವೆಂಪುನಗರ ಪೊಲೀಸ್ ಠಾಣೆವರೆಗೆ ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಮಗೆ ಕೊಡಬೇಕಿದ್ದ 20 ಲಕ್ಷ ರೂ. ಹಣವನ್ನು ವಾಪಸ್ ನೀಡಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದಲೇ ಗಂಗರಾಜು ತಮ್ಮನ್ನು ಕಾರಿನಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪಿರ್ಯಾದುದಾರರು ಆರೋಪಿಸಿದ್ದಾರೆ. ದೂರಿನ ಮೇರೆಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Key words: Attempt, Murder, against, RTI activist, Gangaraju, Mysore