ಬೆಂಗಳೂರು, ಫೆ.೦೨,೨೦೨೬: ರಂಗಭೂಮಿ ಹಾಗೂ ಸಾಹಿತ್ಯ ಸದಾ ಪ್ರಶ್ನೆ ಮಾಡಲು ಪ್ರೇರೇಪಿಸುತ್ತದೆ. ಸ್ಥಗಿತಗೊಂಡ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ನಿರಂತರವಾಗಿರಲಿ ಎಂದು ಸಾಹಿತಿ, ಪತ್ರಕರ್ತ ಜಿ ಎನ್ ಮೋಹನ್ ಅಭಿಪ್ರಾಯಪಟ್ಟರು.
ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆ ಹಮ್ಮಿಕೊಂಡಿದ್ದ ರಂಗ ಪರಿಷೆಯಲ್ಲಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಸ್ತಕಗಳನ್ನು ದ್ವೇಷಿಸುವ ನಾಜಿ ಕಾಲವಿತ್ತು. ಈಗ ದೇಶದೆಲ್ಲೆಡೆ ಅಂತಹದೇ ವಾತಾವರಣವನ್ನು ಸೃಷ್ಟಿಸಿ, ಪುಸ್ತಕ ದ್ವೇಷವನ್ನು ಹರಡಲಾಗುತ್ತಿದೆ. ಪ್ರಶ್ನೆ ಮಾಡುವ ಮನಸ್ಸನ್ನು ಮುರುಟಿ ಹಾಕುವ ಯತ್ನ ನಡೆಯುತ್ತಿದೆ. ಇದರ ವಿರುದ್ಧ ಜಾಗೃತಿ ಸದಾ ಅಗತ್ಯ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್ ಎನ್ ಮುಕುಂದರಾಜ್ ಅವರು ಮಾತನಾಡಿ ರಂಗಭೂಮಿ ಹಾಗೂ ಸಾಹಿತ್ಯವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಎರಡೂ ಸಹಾ ಗಂಡಬೇರುಂಡದಂತೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ನಾಗರಾಜ ಮೂರ್ತಿ ಅವರು ಮಾತನಾಡಿ ಮಾನವೀಯ ಸಮಾಜವನ್ನು ಸೃಷ್ಟಿಸುವುದು ಇಂದಿನ ಅಗತ್ಯ. ಮನಸ್ಸನ್ನು ಕಲುಷಿತಗೊಳಿಸುತ್ತಿರುವ ಕಾಲದ ಬಗ್ಗೆ ಎಚ್ಚರ ಇರಲಿ ಎಂದರು.
ಕಾವ್ಯ ಪರಿಷೆ ಮುಖ್ಯಸ್ಥರಾದ ಮಲ್ಲಿಕಾರ್ಜುನ ಮಹಾಮನೆ, ಕವಿ ಅಂಕಣಕಾರ ಬಿ ಎನ್ ಮಲ್ಲೇಶ್, ಅಕಾಡೆಮಿ ಸದಸ್ಯರುಗಳಾದ ಮಮತಾ ಅರಸೀಕೆರೆ, ರವಿಕುಮಾರ್ ಭಾಗಿ ಉಪಸ್ತಿತರಿದ್ದರು.
key words: Let’s save the, theatre, that inspires questioning, G N Mohan, bangalore







