ರಂಜ-ಸುರಗಿ-3

ಮೈಸೂರು,ಜನವರಿ,21,2021(www.justkannada.in): ಕೊರೋನಾ ಪಿಡುಗು ಜಗತ್ತನ್ನೆಲ್ಲಾ ವ್ಯಾಪಿಸಿ ಒಂದು ವರ್ಷವೇ ಕಳೆಯಿತು. ಈ ಕಾಲದಲ್ಲಿ ನಾವು ಹಿಂದೆಂದೂ ಕಂಡರಿಯದ ಬದುಕನ್ನು ನೋಡುವಂತಾಯಿತು. ಇದ್ದಕ್ಕಿದ್ದಂತೆ ಲಾಕ್ ಡೌನ್ ಘೋಷಿಸಿದಾಗ ವಿಚಿತ್ರವಾದ ಭಯವೂ ಮನಸ್ಸನ್ನು ತುಂಬಿಕೊಂಡು, ಒಂದು ರೀತಿಯ ನಿರಾಳತೆಯೂ ಮೂಡಿ ಸಂತೋಷವೇ ಆಯಿತು.  ನಿರಾಳತೆ ಏಕೆಂದರೆ, ಒಂದೇ ಸಮನೆ ಬಿಡುವಿಲ್ಲದಂತೆ ಏನಾದರೂ ಒಂದು ಕಾರಣಕ್ಕೆ ಹೊರಗಡೆ ತಿರುಗಾಡುವುದು, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಇವೆಲ್ಲದರಿಂದ ಬಿಡುಗಡೆ ಸಿಕ್ಕು ನಮ್ಮಷ್ಟಕ್ಕೆ ನಾವು ಇರಬಹುದಲ್ಲಾ ಎಂದು, ಇದು ಬಹಳ ಕಾಲ ಮುಂದುವರಿಯಲಾರದು ಎಂಬ ಆಶಾಭಾವನೆಯೊಂದಿಗೆ ಈ ಬಿಡುವಿನ ಕಾಲದಲ್ಲಿ ನನ್ನ ಸಮಯವನ್ನು ನನಗೆ ಬೇಕಾದಂತೆ ಕಳೆಯಬಹುದಲ್ಲಾ, ಯಾರ ಮನೆಗೂ ಹೋಗುವಂತಿಲ್ಲ, ನಮ್ಮ ಮನೆಗೂ ಯಾರೂ ಬರುವುದಿಲ್ಲ, ಎಲ್ಲರಿಗೂ ಭಯ, ಮತ್ತೊಬ್ಬರ ಸಂಪರ್ಕಕ್ಕೆ ಹೆದರುವಂತಹ ಕಾಲ. ಓದಬೇಕೆಂದುಕೊಂಡ ಪುಸ್ತಕಗಳನ್ನು ಯಾವ ಅಡೆತಡೆ ಇಲ್ಲದೇ ಓದಬಹುದು, ಮನೆಯಲ್ಲಿಯೇ ಇಷ್ಟಪಟ್ಟ ಸಿನಿಮಾಗಳನ್ನು ನೋಡಬಹುದು, ಹೀಗೆಲ್ಲಾ ಯೋಜನೆಗಳು. ಅದರೊಂದಿಗೆ ನಮಗೆ ಅಗತ್ಯವಿರುವ ಆಹಾರಸಾಮಗ್ರಿ ಸಿಗುತ್ತೋ ಇಲ್ಲವೋ ಎಂಬ ಆತಂಕ ಕೂಡ. ಆದರೂ ಏಕಾಂತತೆಯ ಆನಂದವನ್ನು ಸ್ವಲ್ಪಕಾಲವಾದರೂ ಅನುಭವಿಸಬಹುದು ಎಂದೆನಿಸಿತ್ತು. ಈ ಪಿಡುಗು ನಮ್ಮ ದೇಶದಲ್ಲೇನೂ ಹೆಚ್ಚು ವ್ಯಾಪಿಸಲಾರದು ಎಂದು ಆಲೋಚಿಸುತ್ತಾ ಆದಷ್ಟು ಮುನ್ನೆಚ್ಚರಿಕೆಯಿಂದ ದಿನಗಳನ್ನು ಕಳೆಯುತ್ತಾ ಲಾಕ್ ಡೌನ್ ಕಳೆದ ಮೇಲೆ ಎಲ್ಲಾ ಸರಿಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಂತರದ ದಿನಗಳಲ್ಲಿ ನನ್ನ ಪರಿಚಯದವರು, ಹತ್ತಿರದವರು ಈ ರೋಗದಿಂದ ಸಾವಿಗೀಡಾದುದನ್ನು  ನೋಡಿ  ನಿಜಕ್ಕೂ ಭಯವಾಯಿತು.jk

ಚೀನಾದಲ್ಲಿ  ಪ್ರಾರಂಭವಾದ  ಈ ರೋಗ  ಪಶ್ಚಿಮದ ದೇಶಗಳಾದ ಇಟಲಿ, ಸ್ಪೇನ್, ಇಂಗ್ಲೆಂಡ್, ಫ್ರಾನ್ಸ್ ದೇಶದಲ್ಲಿ ವ್ಯಾಪಿಸಿ ಜನ ಸಾಯುತ್ತಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡುತ್ತಿರುವಾಗ ‘ಏಕಾಂತದ ಸುಖ’ ಸಾಧ್ಯವಾಗದೇ ಆತಂಕದದಲ್ಲಿ ದಿನದೂಡುವಂತಾಯಿತು. ಸುಮಾರು ಒಂದುನೂರು ವರ್ಷಗಳ ಹಿಂದೆ ಅಂದರೆ 1918ರಲ್ಲಿನ ಸ್ಪ್ಯಾನಿಷ್ ಫ್ಲ್ಯೂನಿಂದಾಗಿ ಬಹಳ ಜನ ಸಾವಿಗೀಡಾದಂತಹ  ಕರಾಳ ದಿನಗಳ ಚಿತ್ರಣವನ್ನು ಪತ್ರಿಕೆಗಳು ನಮ್ಮೆದುರು ತೆರೆದಿಟ್ಟವು. ಜಗತ್ತಿನಲ್ಲಿ ಎಲ್ಲಾ ಕಡೆ ಈ ರೋಗ ವ್ಯಾಪಿಸಿದ್ದರೂ ಯಾರೂ ಇದನ್ನು ಸರಿಯಾಗಿ ಬಹಿರಂಗಪಡಿಸದೇ ಸ್ಪೇನ್ ದೇಶದವರು ಮೊದಲು ಪ್ರಸ್ತಾಪಿಸಿದ್ದರಿಂದ ಸ್ಪ್ಯಾನಿಷ್ ಫ್ಲ್ಯೂ ಎಂಬ ಹೆಸರು ಬಂದಿತಂತೆ. ಈಗ ಕರ್ನಾಟಕ ರಾಜ್ಯ ಒಳಗೊಂಡಿರುವ ಪ್ರದೇಶಗಳಲ್ಲೇ (ಆಗ ಬಾಂಬೆ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮೈಸೂರು ಎಂದು ಬೇರೆ ಬೇರೆ ಆಡಳಿತವಿದ್ದ ಪ್ರದೇಶಗಳು) ಸುಮಾರು ಅರ್ಧ ಮಿಲಿಯದಷ್ಟು ಜನ ಸಾವನ್ನಪ್ಪಿದ್ದರು. 1921ರ ಜನಗಣತಿಯ ಅಂಕಿಅಂಶಗಳಂತೆ ಅಂದಿನ ರಾಜಪ್ರಭುತ್ವಕ್ಕೊಳಪಟ್ಟ ಮೈಸೂರು ರಾಜ್ಯದಲ್ಲಿ ಸಾವಿಗೊಳಗಾದವರ ಸಂಖ್ಯೆ 248,040, ತುಮಕೂರಿನಲ್ಲಿ ಅತ್ಯಂತ ಹೆಚ್ಚು ಅಂದರೆ 50000 ಜನರು, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ 35000, ಬೆಂಗಳೂರು ನಗರ ಮತ್ತು ಜಿಲ್ಲೆಯಲ್ಲಿ 25000, ಶಿವಮೊಗ್ಗದಲ್ಲಿ 30000ಕ್ಕಿಂತಲೂ ಹೆಚ್ಚು, ಹಾಸನದಲ್ಲಿ 30000, ಚಿತ್ರದುರ್ಗದಲ್ಲಿ 30000 ಸಾವಿಗೀಡಾಗಿದ್ದರು. (ದಿನಾಂಕ 16/04/2020ರ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಕೆ. ಸುಬ್ರಹ್ಮಣ್ಯ ಅವರ ಲೇಖನ )

ಸಾಂಕ್ರಾಮಿಕ ರೋಗಗಳಿಂದ ಜನರು ಬವಣೆಪಟ್ಟಿರುವುದು, ಅದರಿಂದ ಬಿಡುಗಡೆ ಸಿಗದೇ ಕಷ್ಟಪಡುತ್ತಿರುವುದು ನಮ್ಮ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಎಷ್ಟು ಅಭಿವ್ಯಕ್ತಗೊಂಡಿವೆ ಎಂಬುದನ್ನು ಗಮನಿಸುತ್ತಿದ್ದೆ. ಈ ಅವಧಿಯಲ್ಲಿ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಬಹಳಷ್ಟು ಸಣ್ಣಕಥೆಗಳು, ಕವನಗಳು ಪ್ರಕಟಗೊಂಡಿವೆ. ನನ್ನ ಮೇಲೆ ಬಹಳ ಪರಿಣಾಮ ಬೀರಿದ ಕಥೆಯೆಂದರೆ ಸುನಂದಾ ಕಡಮೆಯವರ ‘ನರಗುಂದ ರೋಡ್’’ ಎಂಬ ಕಥೆ. ವಲಸೆಗಾರರ ಬವಣೆಯ ಕಥೆ, ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಬದುಕು ಕಟ್ಟಿಕೊಳ್ಳುತ್ತಿರುವಾಗ, ಪ್ರೀತಿಯೆಂಬುದರ ಸವಿಯ ರುಚಿ ಆತನಿಗೆ ಹತ್ತುತ್ತಿದ್ದಾಗಲೇ ಈ ಕೊರೋನಾ ಅವನ ಬದುಕನ್ನೇ ಮೂರಾಬಟ್ಟೆ ಮಾಡಿಬಿಡುತ್ತದೆ. ವಸುಮತಿ ಉಡುಪ ಅವರ ‘ಗುಮಾನಿ’ ಕಥೆಯಲ್ಲಿ ಲಾಕ್ ಡೌನ್  ಘೋಷಿಸಿದಾಗ ಅನಿವಾರ್ಯವಾಗಿ ಹುಟ್ಟೂರಿಗೆ  ಬರಬೇಕಾದಾಗ ಊರವರು, ಮನೆಯವರು ಊರಿನೊಳಗೆ ಬಿಟ್ಟುಕೊಳ್ಳದೇ, ಆಮೇಲೆ ಜನಸಂಚಾರ ಇರದ ಗದ್ದೆಯ ಬದಿಯಲ್ಲಿ ಬಿಡಾರ ಮಾಡಿಕೊಟ್ಟದ್ದು, ಸ್ವಂತ ಅಣ್ಣನಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿ ಅಸಹಾಯಕತೆ, ಯಾತನೆಯಿಂದ ನರಳಿದ್ದು ಇವೆಲ್ಲಾ ಚಿತ್ರಿತವಾಗಿವೆ. ಇದನ್ನೆಲ್ಲಾ ನಾವು ಈ ಕೋವಿಡ್  ಸಮಯದಲ್ಲಿ ಪ್ರತ್ಯಕ್ಷವಾಗಿಯೂ, ಮಾಧ್ಯಮಗಳ ಮೂಲಕವಾಗಿಯೂ ನೋಡಿದ್ದೇವೆ.  ಅನುಪಮಾ ಪ್ರಸಾದ್ ಅವರ ‘ಮೊಲ್ಲೆ ಹೂ ಮಾದೇವಿ ಮೀಮಾಂಸೆ’ ಕಥೆಯಲ್ಲಿ ಜನತಾ ಕರ್ಫ್ಯೂ ದಿನ ಜನ ಸಂಜೆ ಶಂಖ ಊದಿ, ಜಾಗಟೆ ಬಾರಿಸಿದ್ದು, ಲಾಕ್ ಡೌನ್ ಆದಾಗ ಜನ ಸಿಕ್ಕಸಿಕ್ಕ ವಾಹನಗಳಲ್ಲಿ ಊರಿಗೆ ಹೊರಟಿದ್ದು, ಮಗುವನ್ನು ನೋಡಿಕೊಳ್ಳಲೆಂದು ಇಟ್ಟುಕೊಂಡ ಹುಡುಗಿಯನ್ನು ದಾರಿಯಲ್ಲೇ ಬಿಟ್ಟು ಊರಿಗೆ ಹೋದ ಗಂಡಹೆಂಡತಿಯರು, ಆ ಹುಡುಗಿಗೆ ಏನೂ ದಿಕ್ಕುದೆಸೆ ಇಲ್ಲದುದನ್ನು ಗಮನಿಸಿದ ಮಾದೇವಿ ತನ್ನ ಮನೆಗೆ ಕರೆದೊಯ್ಯುವುದರ ಚಿತ್ರಣವಿದೆ. ಇದು, ಕಷ್ಟಕಾಲದಲ್ಲಿ ಕೂಡ ಮನುಷ್ಯರಲ್ಲಿ ಕರುಣೆ ಪ್ರೀತಿಯ ಸೆಲೆ  ಇನ್ನೂ ಬತ್ತಿಹೋಗಿಲ್ಲ ಎಂಬುದನ್ನು ತೋರಿಸುತ್ತದೆ. ಕೊರೋನಾ ಜನರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಗ್ಗೆ ಹಲವಾರು ಕವಿತೆಗಳೂ ಪ್ರಕಟವಾಗಿವೆ. ಸವಿತಾ ನಾಗಭೂಷಣ ಇವರು ಜನರ ಆತಂಕ, ತಲ್ಲಣಗಳನ್ನು  ಕವಿತೆಯಾಗಿಸಿದ್ದಾರೆ. ಹಿಂದೆ ಪ್ಲೇಗು, ಕಾಲರಾ ಎಂಬ ರೋಗಗಳಿಂದ ಜನರು ತತ್ತರಿಸಿದ್ದನ್ನು ಎಸ್.ಎಲ್,ಭೈರಪ್ಪನವರ ‘ಗೃಹಭಂಗ’, ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳಲ್ಲಿ ನೋಡಬಹುದು.

ಹೀಗೆ ಚರಿತ್ರೆಯನ್ನು ಅವಲೋಕಿಸಿದಾಗ ಪಶ್ಚಿಮದ ದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಜನಜೀವನವನ್ನು ಕಂಗೆಡಿಸಿದ ಬಗೆಗಿನ ನಿರೂಪಣೆಗಳು ಇಂಗ್ಲಿಷ್, ಇಟಾಲಿಯನ್  ಸಾಹಿತ್ಯದಲ್ಲಿ ನೋಡುವುದಾದರೆ, ಹದಿನಾಲ್ಕನೇ ಶತಮಾನದ  ಇಟಾಲಿಯನ್  ಜಿವಾನ್ನಿ ಬೊಕ್ಯಾಚ್ಯೋ (Giovanni Boccaccio) ನ The Decameron (1350) ಎಂಬ ಕಥಾಸಂಕಲನ ಬಹಳ ಹೆಸರು ಮಾಡಿರುವುದನ್ನು ಗಮನಿಸಬಹುದು.  ಪ್ಲೇಗ್ ಪಿಡುಗಿನಿಂದ ರಕ್ಷಿಸಿಕೊಳ್ಳಲು ಏಳು ಜನ ಮಹಿಳೆಯರು ಮತ್ತು ಮೂವರು ಸಾಹಸೀ ಯುವಕರು ಚರ್ಚ್ ಒಂದರಲ್ಲಿ ವಾಸ್ತವ್ಯ ಹೂಡಿ, ಅಲ್ಲಿ ಅವರು ಕಳೆದ ಹತ್ತು ದಿನಗಳಲ್ಲಿ ಪ್ರತಿಯೊಬ್ಬರೂ ಹೇಳಿರುವ ವಿನೋದದ, ಚಮತ್ಕಾರದ, ಜನರ ಕಷ್ಟಕಾರ್ಪಣ್ಯದ ಬಗೆಗಿನ ಒಂದು ನೂರು ಕಥೆಗಳಿವೆ.

ಡೇನಿಯಲ್ ಡಿಫೋನ(1660-1731) ‘ದಿ ಜರ್ನಲ್ ಆಫ್ ದಿ ಪ್ಲೇಗ್ ಇಯರ್’  1722ರಲ್ಲಿ ಪ್ರಕಟವಾಯಿತು. 1665ರಲ್ಲಿ ಲಂಡನ್ನಿನಲ್ಲಿ ಪ್ಲೇಗ್ ರೋಗ ಹರಡುತ್ತಿದ್ದಾಗ, ಸಾರ್ವಜನಿಕ ಮತ್ತು ಖಾಸಗಿ ಸಂಗತಿಗಳು ಎಲ್ಲವನ್ನೂ ಗಮನಿಸಿದ ವ್ಯಕ್ತಿಯೊಬ್ಬನ ದಿನಚರಿಯಂತಹ ಬರಹವಿದು. ಆ ದಿನಗಳಲ್ಲಿ ಮುದ್ರಿತ ದಿನಪತ್ರಿಕೆಗಳು ಇರಲಿಲ್ಲವಾದ್ದರಿಂದ ಚರ್ಚಿನಲ್ಲಿರುವ ಮರಣ ದಾಖಲೆಗಳು, ದೇಶ-ವಿದೇಶಗಳಲ್ಲಿರುವ ವರ್ತಕರೊಂದಿಗೆ ನಡೆದಿರುವ ಪತ್ರವ್ಯವಹಾರದಿಂದ ರೋಗದ ಬಗ್ಗೆ  ಮಾಹಿತಿಯನ್ನು ಪಡೆಯಬೇಕಾಗಿತ್ತು. ಬಾಯಿಂದ ಬಾಯಿಗೆ ಹರಡುವ ವದಂತಿಗಳಿಂದ ರೋಗದ ವಿಚಾರ ತಿಳಿಯುತ್ತಿತ್ತು. ರೋಗ ಬಂದಿರುವುದನ್ನೂ ಗುಟ್ಟಾಗಿ ಇಡುತ್ತಿದ್ದರು. ಸರ್ಕಾರಕ್ಕೆ ಎಲ್ಲಾ ಗೊತ್ತಿದ್ದು ಈ ಬಗ್ಗೆ ಸಭೆಗಳನ್ನು ನಡೆಸಿದ್ದರೂ ಅದನ್ನೆಲ್ಲಾ ಬಹಿರಂಗಪಡಿಸದೇ ಇರುತ್ತಿದ್ದುದರಿಂದ ಈ ವದಂತಿಗಳೂ ಅಡಗಿಹೋಗುತ್ತಿದ್ದವು. ಆದರೆ ಫ್ರೆಂಚರಿಬ್ಬರು ಮರಣಹೊಂದಿದಾಗ ಅದು ಸರ್ಕಾರಕ್ಕೆ ಗೊತ್ತಾಗಿ ಅಲ್ಲಿ ಡಾಕ್ಟರರನ್ನು ನಿಯೋಜಿಸಿದಾಗ ಅವರು ಪ್ಲೇಗ್ ರೋಗದಿಂದ ಸತ್ತಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದರು. ಹೀಗಾಗಿ ಪ್ಲೇಗ್ ರೋಗದಿಂದಲೇ  ಮರಣಹೊಂದಿದವರೆಂಬುದು ದಾಖಲಾಯಿತು. Ranja-Suragi-3

ಅಮೆರಿಕದ ಕವಿ,ಕಥೆಗಾರ ಎಡ್ಗರ್ ಅಲೆನ್ ಪೋ ಬರೆದ ಸಣ್ಣಕಥೆ ‘ದಿ ಮಾಸ್ಕ್ ಆಫ್ ದಿ ರೆಡ್ ಡೆತ್’( The Masque of the Red Death) 1842ರಲ್ಲಿ ಪ್ರಕಟವಾಗಿದ್ದು, ದೇಶದಲ್ಲೆಲ್ಲಾ “ಕೆಂಪು ಸಾವು’ ( Red Death) ಎಂದು ಹೆಸರು ಪಡೆದ ಪ್ಲೇಗ್ ರೋಗದಿಂದ ಜನ ಸಾಯುತ್ತಿದ್ದಾಗ  ಆ ಬಗ್ಗೆ ಏನೂ ತಲೆಕೆಡಿಸಿಕೊಳ್ಲದೇ, ಅದರಿಂದ ಪಾರಾಗಲು, ರಾಜಕುಮಾರ ಪ್ರಾಸ್ಪೆರೋ ಅರೋಗ್ಯವಂತರಾದ ತನ್ನ ಸ್ನೇಹಿತ, ಸ್ನೇಹಿತೆಯರೊಂದಿಗೆ ದೂರದ ಕೋಟೆಯಂತಿರುವ ಮಹಲಿನಲ್ಲಿ ಹೊರಜಗತ್ತಿನ ಪರಿವೆಯೇ ಇಲ್ಲದೇ ವಿಲಾಸಿಜೀವನ ನಡೆಸುತ್ತಿರುತ್ತಾನೆ. ಹೀಗೆ ಐದಾರು ತಿಂಗಳು ಕಳೆಯುತ್ತಿದ್ದಂತೆ ಸಾವು ಅನ್ನುವುದು ಅಲ್ಲಿಗೆ ಮುಖವಾಡ ಧರಿಸಿದ ವ್ಯಕ್ತಿಯ ರೂಪದಲ್ಲಿ ಬರುತ್ತದೆ. ಈ ಕಥೆ ಸಾಂಕ್ರಾಮಿಕ ಪಿಡುಗು ಯಾರನ್ನೂ ಬಿಡುವುದಿಲ್ಲವೆಂಬುದು ಕೊರೋನಾ ವೈರಸ್ ಹರಡುವಿಕೆಯನ್ನು ಪ್ರತ್ಯಕ್ಷ ಅನುಭವಿಸುತ್ತಿರುವ ನಮ್ಮ ಅನುಭವಕ್ಕೆ ಬರುತ್ತಿರುವ  ಈ ಸಂದರ್ಭದಲ್ಲಿ ತುಂಬಾ ಪ್ರಸ್ತುತವಾಗುತ್ತದೆ.

ಕೆ.ಪದ್ಮಾಕ್ಷಿ