ಭೀಕರ ಬರಗಾಲದಲ್ಲಿ ಕುಡಿಯುವ ನೀರಿನ ರಾಜಕಾರಣ ಏಕೆ ..? ಡಿಎಂಕೆ ಚುನಾವಣಾ ಪ್ರಣಾಳಿಕೆ ವಿರುದ್ದ ಕುರುಬೂರು ಶಾಂತಕುಮಾರ್ ಕಿಡಿ.

ಬೆಂಗಳೂರು,ಮಾರ್ಚ್,23,2024(www.justkannada.in): ಕುಡಿಯುವ ನೀರಿಗಾಗಿ ಜನ ಅಹಕಾರ ಪಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಭೀಮ, ಕೃಷ್ಣಾ,  ಘಟಪ್ರಭಾ, ಮಹದಾಯಿ, ಕಾವೇರಿ ನದಿಗಳಿಂದ ನೀರು ಹರಿಸುವಂತೆ ರೈತರು ಘೋರ ಆಕ್ರಂದನ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಾರಕ್ಕೊಮ್ಮೆ ನೀರು ಸಿಗುವಂತಾಗಿದೆ. ಇಂಥ ಸ್ಥಿತಿಯಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಸ್ಥಗಿತಗೊಳಿಸುವ ಡಿಎಂಕೆ ಚುನಾವಣಾ ಪ್ರಣಾಳಿಕೆ ಏಕೆ ಬೇಕು..? ಕುಡಿಯೋ ನೀರಿನ ವಿವಾದ ಕೆಣಕಿ ಜನರನ್ನ ರೂಚ್ಚಿಗೆಳಿಸುವ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಹಾಗೂ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ನಡೆದ ಕುಡಿಯುವ ನೀರು ಸಮಸ್ಯೆ ಕುರಿತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಿ. ನೀರಿನ ಸಂಕಷ್ಟ ಕಾಲದಲ್ಲಿ ರೈತರು ಕೂಡ ಬೆಳೆ ಪದ್ಧತಿ ಬದಲಾಯಿಸಿಕೊಳ್ಳಬೇಕು. ವೇಸ್ಟ್ ವಾಟರ್ ಪುನರ್ ಬಳಕೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕಳೆದ ಆರು ತಿಂಗಳ ಹಿಂದೆ ಕಾವೇರಿ ಹೋರಾಟ ಮಾಡಿದಾಗ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಸರ್ಕಾರದ ಗಮನ ಸೆಳೆದರು ಪ್ರಯೋಜನವಾಗಲಿಲ್ಲ. ಮತ್ತೊಂದು ಕಡೆ ಬೆಂಗಳೂರು ನಗರದಲ್ಲಿರುವ ಕೆರೆ ಕಟ್ಟೆಗಳನ್ನ ಮುಚ್ಚಿ  ಭೂ ಮಾಫಿಯಾದವರು ದೊಡ್ಡ ಕಟ್ಟಡಗಳ ನಿರ್ಮಾಣ ಮಾಡಿದ ಕಾರಣವೂ ಸಮಸ್ಯೆಯ ಮೂಲವಾಗಿದೆ.  ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಾಗಬೇಕು. ರಾಜ್ಯ ಸರ್ಕಾರದ ವೈಫಲ್ಯದಿಂದ ನಾವು ಸಂಕಷ್ಟ ಪಡುವಂತಾಗಿದೆ ಎಂದು  ಕಿಡಿಕಾರಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿಮಾತನಾಡಿದ ಭಾರತೀಯ ವಿಜ್ಞಾನ ಮಂದಿರದ ಸಂಶೋಧಕ ಡಾ.ಟಿವಿ ರಾಮಚಂದ್ರ, ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿದಾಗ 1562 ಕೆರೆ ಕುಂಟೆಗಳಿದ್ದವು ಇಂದು ಭೂ ಮಾಫಿಯಾ ಒತ್ತುವರಿಯಿಂದ ಕೆರೆಕುಂಟೆಗಳು ಕಾಣೆಯಾಗಿವೆ,  ಇಂದು 193 ಕೆರೆಗಳು ಮಾತ್ರ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಡಳಿತ ಮಾಡುವ ಅಧಿಕಾರಸ್ತರು ಆಯ್ಕೆ ಮಾಡಿದ ಜನರ ನೀರು ಪರಿಸರದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ ಕಣ್ಣೊರೆಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಇದರಿಂದಲೇ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಮೇಕೆದಾಟು ಯೋಜನೆ ನಿರ್ಮಾಣದಿಂದ 5000 ಹೆಕ್ಟೇರ್ ಕಾಡು ಪರಿಸರ ನಾಶವಾಗಲು ಕಾರಣವಾಗುತ್ತದೆ.  ಅದರ ಬದಲು ಬೆಂಗಳೂರು ನಗರದ ಅಂತರ್ಜಲ ಹೆಚ್ಚಿಸುವ ಯೋಜನೆಗಳು ಕಠಿಣ ನಿರ್ಧಾರದ ಮೂಲಕ ಜಾರಿಗೆ ತಂದು ಒತ್ತುವರಿ ಮಾಡಿರುವ ರಾಜಕಾಲುವೆ ಕೆರೆ ಕುಂಟಿಗಳನ್ನು ಖಾಲಿ ಮಾಡಿಸಬೇಕು ಆಗ  ನೀರಿನ ಸಮಸ್ಯೆ ಬಗೆಹರಿಯುತ್ತದೆ  ಎಂದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ ಬಳಕೆ ಬಗ್ಗೆ ಸಂಸ್ಕರಿಸಿದ ನೀರಿನ ಪುನರ್ ಬಳಕೆ ಬಗ್ಗೆ ಜನರಿಗೆ  ಸರಿಯಾದ ಮಾಹಿತಿ ಇಲ್ಲ.  ಮರು ಬಳಕೆ ನೀರನ್ನು ಹೆಚ್ಚು ಜನರು ಉಪಯೋಗಿಸುತ್ತಿಲ್ಲ. ನೀರಿನ ಬೀಕರತೆ ಪರಿಣಾಮ ಬೆಂಗಳೂರು ನಗರದ ಜನ  ವಲಸೆ ಹೋಗಬೇಕಾಗುತ್ತದೆ  ಇದನ್ನು ಅರಿತು ನೀರು ಸರಬರಾಜು ಮಂಡಳಿಯವರು ಸಮರೋಪಾದಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಅಧ್ಯಕ್ಷರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ಡಾ.ವೂಡೆ.ಪಿ ಕೃಷ್ಣ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ಹಾಗೂ  ದಾಕ್ಷಾಯಿಣಿ ಸೇರಿ ಹಲವರು ಉಪಸ್ಥಿತರಿದ್ದರು.

Key words: water politics- DMK -election manifesto-Kuruburu ShanthaKumar