ಬೆಳಗಾವಿ, ಸೆಪ್ಟಂಬರ್, 23,2026 (www.̤justkannada.in) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ 26ನೇ ವಾರ್ಷಿಕ ಘಟಿಕೋತ್ಸವ ಸೆ.26ರಂದು ಬೆಳಗ್ಗೆ 11 ಗಂಟೆಗೆ ಜ್ಞಾನ ಸಂಗಮದಲ್ಲಿ ನಡೆಯಲಿದೆ.
ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಪಸ್ಥಿತರಿರುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.
ಘಟಿಕೋತ್ಸವದಲ್ಲಿ 74,763 ಪದವಿ ವಿದ್ಯಾರ್ಥಿಗಳು ಹಾಗೂ 329 ಪಿಎಚ್ ಡಿ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ 74,009 ಬಿ.ಇ./ಬಿ.ಟೆಕ್, 725 ಬಿ.ಇ. ಆರ್ಕಿಟೆಕ್ಚರ್, 12 ಬಿ.ಇ. ಪ್ಲಾನಿಂಗ್ ಹಾಗೂ 17 ಬಿ.ಎಸ್ಸಿ ವಿದ್ಯಾರ್ಥಿಗಳು ಸೇರಿದ್ದಾರೆ.
ಮೂವರಿಗೆ ಗೌರವ ಡಾಕ್ಟರೇಟ್
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಡಾ. ಸಬಿತಾ ರಾಮಮೂರ್ತಿ, ಡಾ. ಎಂ.ಪಿ. ಶ್ಯಾಮ್ ಹಾಗೂ ಪ್ರೊ. ಟಿ.ಜಿ. ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ತಿಳಿಸಿದರು.
45 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕ
ಈ ಬಾರಿ 45 ವಿದ್ಯಾರ್ಥಿಗಳಿಗೆ ಒಟ್ಟು 94 ಚಿನ್ನದ ಪದಕಗಳು ಪ್ರದಾನವಾಗಲಿವೆ. ಇದರಲ್ಲಿ 38 ವಿಟಿಯು ಚಿನ್ನದ ಪದಕ ಹಾಗೂ 56 ದತ್ತಿ ನಿಧಿ ಚಿನ್ನದ ಪದಕಗಳಿವೆ. 49 ವಿದ್ಯಾರ್ಥಿಗಳು ದತ್ತಿ ಚಿನ್ನದ ಪದಕದ ಜತೆಗೆ ನಗದು ಬಹುಮಾನಕ್ಕೂ ಅರ್ಹರಾಗಿದ್ದು, 7 ವಿದ್ಯಾರ್ಥಿಗಳು ದತ್ತಿ ಚಿನ್ನದ ಪದಕ ಪಡೆಯಲಿದ್ದಾರೆ. ಅಲ್ಲದೆ 300 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಲು ಅರ್ಹತೆ ಪಡೆದಿದ್ದಾರೆ.
12 ಚಿನ್ನದ ಪದಕ ಗೆದ್ದು ವಿಶ್ವನಾಥ್ ಮುಂಚೂಣಿ
ದಾವಣಗೆರೆಯ ಜೈನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್.ಎಂ. ವಿಶ್ವನಾಥ್ 12 ಚಿನ್ನದ ಪದಕಗಳಿಗೆ ಅರ್ಹರಾಗುವ ಮೂಲಕ ಅತಿ ಹೆಚ್ಚು ಚಿನ್ನದ ಪದಕ ಪಡೆಯುವ ವಿದ್ಯಾರ್ಥಿಯಾಗಿದ್ದಾರೆ.
ನಿಪ್ಪಾಣಿಯ ವಿಎಸ್ ಎಂ ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಾಕ್ಷಿ ಎಸ್. ಹಡಲಗೆ 8 ಚಿನ್ನದ ಪದಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರಿನ ಸಿಎಂಆರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿನ್ಮಯಿ ಎಂ. ಕಶ್ಯಪ್ ಹಾಗೂ ಶಿವಮೊಗ್ಗದ ಜೆಎನ್ಎನ್ ಕಾಲೇಜ್ ಆಫ್ ಎಂಜಿನಿಯರಿಂಗ್ನ ಬಿ.ಎಂ. ಧನ್ಯಶ್ರೀ ತಲಾ 7 ಚಿನ್ನದ ಪದಕ ಪಡೆದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎ.ಸಿ. ಕವಿನಾ 6 ಚಿನ್ನದ ಪದಕಗಳಿಗೆ ಅರ್ಹರಾಗಿದ್ದಾರೆ.
ಹೆಚ್ಚು ರ್ಯಾಂಕ್ ಪಡೆದ ಪ್ರಮುಖ ಕಾಲೇಜುಗಳು
ಬೆಂಗಳೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – 29 ರ್ಯಾಂಕ್
ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ – 16
ಆರ್ಎನ್ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು – 13
ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – 11
ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – 11
ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಸಚಿವರು (ಮೌಲ್ಯಮಾಪನ) ಪ್ರೊ. ಯು.ಜೆ. ಉಜ್ವಲ್ ಹಾಗೂ ಕುಲಸಚಿವರು (ಆಡಳಿತ) ಪ್ರೊ. ಪ್ರಸಾದ ಬಿ. ರಾಂಪುರೆ ಉಪಸ್ಥಿತರಿದ್ದರು.






