ದೇಶದಲ್ಲಿಯೂ ನಮ್ಮ ಗ್ಯಾರೆಂಟಿಗೊಂದು  ಮತ ಕೊಡಿ: ಡಾ.ಯತೀಂದ್ರ ಜತೆಗೂಡಿ ಎಂ. ಲಕ್ಷ್ಮಣ್  ಮತಯಾಚನೆ .

ಮೈಸೂರು,ಏಪ್ರಿಲ್,6,2024 (www.justkannada.in):  ನಮ್ಮ ಗ್ಯಾರಂಟಿ ಸರ್ಕಾರದಷ್ಟೇ ಗ್ಯಾರಂಟಿಯಾಗಿ ನಿಮ್ಮ ಸೇವಕನಾಗಿ ಕೆಲಸ ಮಾಡಿಕೊಡುತ್ತೇನೆ ನನಗೊಂದು ಅವಕಾಶ ಕೊಡಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ್ ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲೋನಿ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಆಲನಹಳ್ಳಿ ಹಾಗೂ ಹೊಸುಂಡಿ ಗ್ರಾಮಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಪುತ್ರ ಹಾಗೂ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ಜತೆಗೂಡಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ಎಲ್ಲಾ ಕಾರ್ಯಕ್ರಮಗಳನ್ನು ಕೊಡುವ ವ್ಯವಸ್ಥೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಾಗಿದೆ. ಪ್ರತಿಯೊಬ್ಬರನ್ನೂ ಒಟ್ಟಿಗೆ ಕರೆದೊಯ್ಯುವುದು ಕಾಂಗ್ರೆಸ್ ಪಕ್ಷವಾಗಿದೆ. ರಾಜ್ಯದಲ್ಲಿ  ಬರಗಾಲ ಇದ್ದರೂ ಕೇಂದ್ರ ಸರ್ಕಾರ ನಯಾಪೈಸೆ ಕೊಡಲಿಲ್ಲ. ಸೆಪ್ಟಂಬರ್‌ನಲ್ಲೇ ವರದಿ ಕೊಟ್ಟು ಮನವಿ ಮಾಡಿದರೂ ಸ್ಪಂದನೆ ಮಾಡಲಿಲ್ಲ. ಎನ್ ಡಿಆರ್ ಎ ತಂಡವೇ ೧೮ ಸಾವಿರ ಕೋಟಿ ರೂ.ಪರಿಹಾರವನ್ನು ತ್ವತರಿತವಾಗಿ ಬಿಡುಗಡೆ ಮಾಡಬೇಕೆಂದು ವರದಿ ಕೊಟ್ಟರು ಐದು ಪೈಸೆ ಬಿಡುಗಡೆ ಮಾಡಿಲ್ಲ. ಅವರು ಪುಕ್ಕಟ್ಟೆ ಕೊಡದಿದ್ದರೂ ನಮ್ಮ ರಾಜ್ಯದ ತೆರಿಗೆ ಹಣದಲ್ಲಿ ನ್ಯಾಯಯುತವಾಗಿ ನೀಡಬೇಕಾದ ಅನುದಾನ ನೀಡಲಿಲ್ಲ. ಬರೀ ಸುಳ್ಳು ಹೇಳಿಕೊಂಡೆ ತಿರುಗಾಡುವ ಕೆಲಸ ಮಾಡುತ್ತಾರೆ. ಆದುದರಿಂದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ನಾಗನಹಳ್ಳಿಯಲ್ಲಿ ಸುಸಜ್ಜಿತ ರೈಲ್ವೆ ಫ್ಲಾಟ್ ಫಾರಂ ನಿರ್ಮಿಸುವುದಾಗಿ 2017 ರಲ್ಲೇ ರೈಲ್ವೆ ಸಚಿವರಾಗಿದ್ದ ಸದಾನಂದಗೌಡ ಅವರನ್ನು ಕರೆದು ತಂದು ಘೋಷಣೆ ಮಾಡಿ ಬಾವುಟ ಹಾರಿಸಿದರು. ರೈಲ್ವೆ ಟರ್ಮಿನಲ್ ಗೆ 36 ಭೂಮಿಯನ್ನು ವಶಕ್ಕೆ ಪಡೆಯುವುದಾಗಿ ಹೇಳಿ ಹೋದವರು ಇದುವರೆವಿಗೂ ಬಂದಿಲ್ಲ. ಈಗ ಅದು ಸೂಕ್ತ ಜಾಗವಲ್ಲವೆಂದು ಹೇಳಿ, ಇರುವ ಜಾಗದಲ್ಲೇ ಹೆಚ್ಚುವರಿ ಎರಡು ಫ್ಲಾಂಟ್ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗೆ ಬಿಜೆಪಿ ಸುಳ್ಳು ಹೇಳುವುದು ಬಿಟ್ಟರೆ ಎನೂ ಆಗಿಲ್ಲ ಎಂದರು.

ಪ್ರತಾಪ್ ಸಿಂಹ  ಮಾಧ್ಯಮಗಳ ಮುಂದೆ ಬಂದೂ ಅವರಿವರನ್ನು ಬೈದಿದ್ದು ಬಿಟ್ಟರೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ನಾನೇ ಮಾಡಿದ್ದು, ನಾನೇ ಮಾಡಿದ್ದು ಎಂದು ಹೇಳಿದ್ದು ಬಿಟ್ಟರೆ ಎನೂ ಮಾಡಲಿಲ್ಲ. ಆದರೆ, ನಾನು ನಿಮಗೆ ಭರವಸೆ ನೀಡುತ್ತೇನೆ. ನನಗೆ ನೀವು ಹಾಕುವ ಮತಕ್ಕೆ ಐದು ವರ್ಷವೂ ನಿಮ್ಮ ಸೇವಕನಾಗಿ ನಿಮ್ಮ ಕೆಲಸ ಮಾಡುತ್ತೇನೆ. ದಯಾಮಾಡಿ ಒಂದು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆಂದು ಹೇಳಿದರು.

ಲೋಕಸಭಾ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಿನಿ ೨೨ ಸಾವಿರ ಕೋಟಿ ರೂ.ಗಳನ್ನೂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೈಸೂರ್ ಜಿಲ್ಲೆಗೆ  ನೀಡಿದ್ದಾರೆ. ಇಂದು ಉತ್ತಮ ರಸ್ತೆಗಳಿದ್ದರೆ ಅದು ಎಚ್.ಸಿ.ಮಹದೇವಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯೇ ಕಾರಣವಾಗಿದೆ. ಇದು ಆಗ ಅರ್ಥ ಆಗದೇ ಐದು ವರ್ಷದ ಬಳಿಕ ಅರ್ಥ ಆಯಿತು.  ಈಗ ಅದಕ್ಕೆ ಮತ್ತೆ ಸಿಎಂ ಆಗಿ ಸಿದ್ದರಾಮಯ್ಯ ಬಂದಿದ್ದಾರೆ. ೫೭ಸಾವಿರ ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿಗೆ ನೀಡಿದ್ದೇವೆ. ೩.೫ ಕೋಟಿ ಮಂದಿಗೆ ನಮ್ಮ ಗ್ಯಾರಂಟಿ ತಲುಪಿದೆ. ಅದಕ್ಕೆ ಕೂಲಿಯಾಗಿ ಮತ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ರಾಕೇಶ್ ಪಾಪಣ್ಣ, ರೇಖಾ ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಯೋಜನ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಊಮಾಶಂಕರ್, ಕೃಷ್ಣಕುಮಾರ್‌ಸಾಗರ್, ಕೆಂಪನಾಯಕ, ಇಲವಾಲ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸತೀಶ್, ಗುರುಸ್ವಾಮಿ, ಮಲ್ಲೇಶ್, ರಾಮೇಗೌಡ, ಮುತ್ತುರಾಜ್, ಕೆ.ಎಸ್.ಸಣ್ಣಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಚೆನ್ನಯ್ಯ, ಹಂಚ್ಯಾ ಶ್ರೀನಿವಾಸ್‌ಗೌಡ, ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲೋನಿ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಆಲನಹಳ್ಳಿ ಹಾಗೂ ಹೊಸುಂಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಡಜನರ ಉಳಿವಿಗೆ ಲಕ್ಷ್ಮಣ್ ಗೆ ಮತಹಾಕಿ- ಯತೀಂದ್ರ ಸಿದ್ದರಾಮಯ್ಯ..

ದೇಶದಲ್ಲಿ ಬಡಜನರ ಬದುಕು ಉಳಿಯಬೇಕಿದೆ. ಇದೇ ಕಾರಣಕ್ಕಾಗಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಬರಬೇಕಿದ್ದು, ಲಕ್ಷ್ಮಣ್ ಅವರಿಗೆ ನೀವು ಹಾಕುವ ಮತ ನಿಮ್ಮ ಬದುಕು ಉಳಿಸುವ ಮತ ಆಗಲಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಎ.೨೬ಕ್ಕೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇದಕ್ಕೆ ದೇಶವನ್ನು ಯಾರು ಮುನ್ನಡೆಸಬೇಕೆಂಬುದನ್ನು ಜನರು ತೀರ್ಮಾನ ಮಾಡಬೇಕಿದೆ. ಯಾರು ಜನರಿಗೆ ಕೊಟ್ಟ ಮಾತಿಗೆ ತಪ್ಪಿಲ್ಲ, ಯಾರಿಗೆ ಮತ ಹಾಕಿದರೆ ಜನರ ಜೀವನ ಮಟ್ಟ ಸುಧಾರಣೆ ಆಗಲಿದೆ ಎಂಬುದನ್ನು ಜನರಿಗೆ ತಿಳಿಸಿಕೊಡಬೇಕಿದೆ. ಆಗ ದೇಶಕ್ಕೆ ನಿಜವಾಗಿಯೂ ಒಳ್ಳೆಯದಾಗಲಿದೆ ಎಂದರು.
ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳೂ ಅಧಿಕಾರದಲ್ಲಿದ್ದು, ಇಬ್ಬರೂ ಮಾಡಿದ ಸಾಧನೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್‌ನ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್ ಅವರ ಅವಧಿಯಲ್ಲಿ ಶಿಕ್ಷಣ ಮೂಲಭೂತ ಹಕ್ಕು, ನರೇಗಾ, ಆಹಾರ ಭದ್ರತಾ ಕಾಯಿದೆ ಹಾಗೂ ರೈತ ಸಾಲಮನ್ನಾ ಹೀಗೆ ಎಲ್ಲವನ್ನೂ ಸಹ ಜನಸಾಮಾನ್ಯರಿಗೆ ನೀಡಿದ್ದಾರೆ. ೭೦ ವರ್ಷದ ಕಾಂಗ್ರೆಸ್ ಅವಧಿಯಲ್ಲಿ ಬಡವರ ಪರವಾಗಿ ಇದೆ ಎಂದು ಹೇಳಿದರು.
ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ಲಕ್ಷ ಹಾಕುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಹಣವನ್ನು ತರಲಿಲ್ಲ. ಜನರ ಖಾತೆಗೂ ಹಾಕಲಿಲ್ಲ. ಸ್ವಿಸ್ ಬ್ಯಾಂಕ್‌ನಲ್ಲಿರುವ ಮಾಹಿತಿಯನ್ನು ಕೊಡಲಿಲ್ಲ. ೨ಕೋಟಿ ಉದ್ಯೋಗ ಸೃಷ್ಠಿಯ ಬದಲಿಗೆ ವಿಶ್ವದಲ್ಲಿಯೇ ಅತಿಹೆಚ್ಚು ನಿರುದ್ಯೋಗ ದೇಶದಲ್ಲಿ ಸೃಷ್ಟಿಯಾಗಿದೆ. ಅದೇ ರೀತಿ ರೈತರ ದುಪ್ಪಟ್ಟು ಆದಾಯ ಮಾಡುವ ಬದಲಿಗೆ ಅಧಿಕ ಬಂಡವಾಳದಿಂದ ರೈತರು ಕೃಷಿ ತೊರೆಯುವ ದುಸ್ಥಿತಿ ನಿರ್ಮಾಣ ಆಗಿದೆ. ರಸಗೊಬ್ಬರಗಳ ಬೆಲೆ ಏರಿಕೆ, ಕೃಷಿ ಯಂತ್ರೋಪಕರಣಗಳ ಮೇಲೆ ಜಿಎಸ್‌ಟಿ ಹೇರಿಕೆ ಇಂತಹ ಅನೇಕ ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದರು.
ಅವರ ಪ್ರಣಾಳಿಕೆಯಲ್ಲಿ ೬೦೦ ಭರವಸೆ ನೀಡಿ ೬೦ನ್ನು ಸಹ ಈಡೇರಿಸಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ೧೬೮ ಭರವಸೆಯಿಟ್ಟು ಅಷ್ಟನ್ನೂ ಈಡೇರಿಸಿದ್ದೇವೆ. ಅದರ ಹೊರತಾಗಿಯೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇವೆ. ೫೮ಸಾವಿರ ಕೋಟಿ ರೂ.ಗಳ ಕಾರ್ಯಕ್ರಮವಾದ ಪಂಚಗ್ಯಾರಂಟಿ ಯನ್ನು ಜನರಿಗೆ ನೀಡಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿಯೋಜನೆ ಹಾಗೂ ಯುವ ನಿಧಿ ಕಾರ್ಯಕ್ರಮಗಳಲ್ಲಿ ೭ ಕೋಟಿಯಲ್ಲಿ ಶೇ.೮೦ರಷ್ಟು ಮಂದಿ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.
ಕೆಲವರು ನಮ್ಮ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯಗಳೆಂದು ಲೇವಡಿ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಉಳ್ಳವರಿಂದ ಪಡೆದ ಇಲ್ಲದರಿಗೆ ನೀಡುವ ಕೆಲಸವನ್ನು ಮಾಡುವ ಮಾಡುತ್ತಿದ್ದೇವೆ. ಹೀಗೆ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದಿಲ್ಲ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಹೀಗಾಗಿ ನಮಗೆ ಮತ ಕೊಡಿ ಎಂದು ಕೇಳುತ್ತಿದ್ದೇವೆ. ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ ಬಂದ ಮೇಲೆ ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಶೇ.೧೦ರಷ್ಟು ಕಡಿಮೆ ಮಾಡಿ ಬಡವರ ಜಿಎಸ್‌ಟಿಯನ್ನು ಹೆಚ್ಚಳ ಮಾಡಿದ್ದಾರೆ. ಇದು ಕಾಂಗ್ರೆಸ್‌ಗೂ ಬಿಜೆಪಿಯೂ ಇರುವ ವ್ಯತ್ಯಾಸವಾಗಿದೆ ಎಂದು ಹೇಳಿದರು.
೧೮೦೦ ಕೋಟಿ ರೂ. ಬ್ಯಾಂಕ್ ಅಕೌಂಟ್ ಗೌಪ್ಯವಾಗಿ ಹಿಡಿದಿಟ್ಟುಕೊಂಡು ದಂಡ ವಿಧಿಸಿದ್ದಾರೆ. ಇಬ್ಬರೂ ಸಿಎಂಗಳನ್ನು ಜೈಲಿಗೆ ಹಾಕಿದ್ದಾರೆ. ಈ ಮೂಲಕ ಪ್ರತಿಪಕ್ಷ ಹಾಗೂ ವಿರೋಧ ಮಾಡುವವರ ವಿರುದ್ಧ ನಾನಾ ರೀತಿ ದಾಳಿ ಮಾಡುವ ಮೂಲಕ ಸಂವಿಧಾನಕ್ಕೆ ಅಪಾಯ ತರಲು ಹೊರಟ್ಟಿದ್ದಾರೆ. ಈ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುವುದೇ ಇವರ ಮೂಲಕ ಉದ್ದೇಶ ಆಗಿದೆ. ಸಂವಿಧಾನ ಬದಲಾದರೆ ಕೇವಲ ದಲಿತರು, ಅಲ್ಪಸಂಖ್ಯಾತರಿಗಷ್ಟೇ ಅಲ್ಲ ಎಲ್ಲರಿಗೂ ಅಪಾಯ ಆಗಲಿದೆ. ನಾವೆಲ್ಲರೂ ಮೋದಿಯವರ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ, ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದರು.

Key words: Vote, mysore, congress-M. Laxman