ಹಿರಿಯ ಪತ್ರಕರ್ತ ಆರ್. ಜಯಕುಮಾರ್ ನಿಧನ: KUWJ ಸಂತಾಪ.

ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮೈಸೂರಿನ ಅವರ ತೋಟದ ಮನೆಯಲ್ಲಿ ಜಯಕುಮಾರ್ ಅವರಿಗೆ ಸನ್ಮಾನ ಮಾಡಿತ್ತು.

ಬೆಂಗಳೂರು,ಮೇ,25,2024 (www.justkannada.in):  ಹಿರಿಯ ಪತ್ರಕರ್ತ ಆರ್.ಜಯಕುಮಾರ್ (64)ಅವರು ಅನಾರೋಗ್ಯದ ಕಾರಣದಿಂದಾಗಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಪತ್ನಿ ಡಾ.ಲೀಲಾ ಸಂಪಿಗೆ, ಪುತ್ರಿ ದೀಪಿಕಾ, ಸೇರಿದಂತೆ ಅಪಾರ ಬಂಧು ಬಳಗವನ್ನು ಆರ್.ಜಯಕುಮಾರ್  ಅಗಲಿದ್ದಾರೆ. ಕೊಡಗಿನವರಾದ ಜಯಕುಮಾರ್, ಚಳವಳಿ ಮೂಲಕವೇ ಪತ್ರಕರ್ತರಾಗಿ ರೂಪುಗೊಂಡವರು. ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಪತ್ರಿಕೆ, ಉದಯ ಟಿವಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ರಾಜ್ಯದ ನಾನಾ ಭಾಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿ ಮಾಡಿದ್ದರು.

ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮೈಸೂರಿನ ಅವರ ತೋಟದ ಮನೆಯಲ್ಲಿ ಜಯಕುಮಾರ್ ಅವರಿಗೆ ಸನ್ಮಾನ ಮಾಡಿತ್ತು.

ಜನಪರ ಹೋರಾಟದಲ್ಲಿ ಭಾಗವಹಿಸಿದ್ದ ಕಾಮ್ರೆಡ್ ಜಯಕುಮಾರ್ ಅವರು ಇತ್ತೀಚೆಗೆ ಗಾಂಧಿ ಮರೆತ ನಾಡಿನಲ್ಲಿ ಮತ್ತು ಕಾಡು ಹಾದಿಯ ಬೆಳಕಿನ ಜಾಡಿನಲ್ಲಿ ಎಂಬ ಎರಡು ಪುಸ್ತಕಗಳನ್ನು ಹೊರತಂದಿದ್ದರು.

ಇಂದು ಸಂಜೆ ಅವರ ದೇಹವನ್ನು ಬೆಂಗಳೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

ಹಿರಿಯ ಮತ್ತು ಕ್ರಿಯಾಶೀಲ: ಕೆಯುಡಬ್ಲೂಜೆ ಸಂತಾಪ

ಪತ್ರಕರ್ತರಾಗಿದ್ದ ಆರ್.ಜಯಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು  (ಕೆಯುಡಬ್ಲ್ಯೂಜೆ) ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗೆ ಆರ್.ಜಯಕುಮಾರ್ ಭಾಜನರಾಗಿದ್ದರು. ಅನಾರೋಗ್ಯದ ಕಾರಣದಿಂದ ಚಿತ್ರದುರ್ಗದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕಾರಣ, ಮೈಸೂರಿನ ಅವರ ತೋಟದ ಮನೆಗೆ ಹೋಗಿ ಅಲ್ಲಿ ಕೆಯುಡಬ್ಲೂಜೆ ಪ್ರಶಸ್ತಿ ಪ್ರದಾನ ಮಾಡಿತ್ತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಜಯಕುಮಾರ್ ನಿಧನದಿಂದ ಕ್ರೀಯಾಶೀಲ ಪತ್ರಕರ್ತನನ್ನು ಸುದ್ದಿಮನೆ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು  ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Key words: Veteran journalist, R. Jayakumar, no more