ಕ.ರಾ.ಮು.ವಿ :  ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಉತ್ಸವ ಮತ್ತು ಕಾರ್ಯಗಾರ ನಿರಂತರ.

 

ಮೈಸೂರು, ಜೂ,13,2024: ಕರ್ನಾಟಕ ರಾಜ್ಯ ಮುಕ್ತ ವಿವಿ ರಾಜ್ಯದಲ್ಲೇ ಅತ್ಯಂತ ವಿಶಿಷ್ಠ ಮತ್ತು ಜನಪ್ರಿಯ ವಿಶ್ವವಿದ್ಯಾನಿಲಯವಾಗಿದೆ. ಯುಜಿಸಿ ಮೂಲಕ ಮಾನ್ಯತೆಗೊಂಡು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಕ್‌ ನಿಂದ ಎ+ ಮಾನ್ಯತೆ ಪಡೆದುಕೊಂಡಿದೆ.

ಇದು ತೆರೆದ ಕಲಿಕಾ ಪದ್ಧತಿ (ಓಪನ್ ಡಿಸ್ಬೆನ್ಸ್  ಲರ್ನಿಂಗ್‌ ಸಿಸ್ಟಮ್‌ ) ಮೂಲಕ ಶಿಕ್ಷಣವನ್ನು ನೀಡುತ್ತಿದ್ದು “ಎಲ್ಲರಿಗೂ ಎಲ್ಲೆಡೆಯೂ ಶಿಕ್ಷಣ”ಸಿಗಬೇಕೆಂಬ ಸದುದ್ದೇಶದಿಂದ ವಿದ್ಯೆಯನ್ನು ಸಾರ್ವತ್ರೀಕರಣಗೊಳಿಸಿದೆ.

ಈ ವಿಶ್ವವಿದ್ಯಾನಿಲಯದ ಪದವಿಗಳು ಭಾರತದ ಇತರ ಯಾವುದೇ ಅ೦ಗೀಕೃತ ವಿಶ್ವವಿದ್ಯಾನಿಲಯದ ಪದವಿಗಳಿಗೆ ಸಮ ಎಂದು ಭಾರತೀಯ ಸವೋಚ್ಚ ನ್ಯಾಯಾಲಯವೂ ಸಹ ಆದೇಶ ನೀಡಿದೆ.

ಕರ್ನಾಟಕ ರಾಜ್ಯದ ಅತೀ ಪ್ರಮುಖ ವಿಶ್ವವಿದ್ಯಾನಿಲಯವಾಗಿರುವುದರಿಂದ ಕನ್ನಡಕ್ಕಾಗಿ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದಲ್ಲದೇ ಎಲ್ಲ ಪದವಿಗಳನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನೀಡಲಾಗುತ್ತಿದೆ. ಇದರಿಂದ ಕನ್ನಡ ನಾಡಿನ ಅಧ್ಯಯನಾಸಕ್ತರು ಕನ್ನಡದಲ್ಲಿಯೇ ಕಲಿಯಲು ಈ ವಿಶ್ವವಿದ್ಯಾನಿಲಯ ಪ್ರಮುಖ ಆಸರೆಯಾಗಿದೆ. ಅಲ್ಲದೇ ಈ ವಿಶ್ವವಿದ್ಯಾನಿಲಯದಲ್ಲಿ ಕಡತ ನಿರ್ವಹಣೆಯಿಂದ ಹಿಡಿದು ಪ್ರಮುಖ ಆದೇಶಗಳವರೆವಿಗೆ ಕನ್ನಡದಲ್ಲಿಯೇ ಆಡಳಿತ ನಡೆಸಲಾಗುತ್ತಿದೆ.

ವಿಶ್ವವಿದ್ಯಾನಿಲಯ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ ೪೦ ಕ್ಕೂ ಹೆಚ್ಚು ಪದವಿಗಳ ಸ್ವಯಂ ಕಲಿಕಾ ಪಾಠಗಳನ್ನು ಕನ್ನಡದಲ್ಲಿಯೂ ಮುದ್ರಿಸಿ ನೀಡಲಾಗುತ್ತಿದೆ. ಇದನ್ನು ಕರ್ನಾಟಕದ ಯಾವ ವಿಶ್ವವಿದ್ಯಾನಿಲಯಗಳು  ಮಾಡಲಾಗಿಲ್ಲ. ಈ ಪಾಠಗಳನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆ ಅನೇಕ ಕಮ್ಮಟಗಳನ್ನು ಕಾಲಿಕವಾಗಿ ನಡೆಸಲಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಕನ್ನಡ ವಿಭಾಗದಲ್ಲಿ ಅನೇಕ ಕಾರ್ಯಗಾರಗಳನ್ನು ಹಾಗೂ ಕಮ್ಮಟಗಳನ್ನು ಪ್ರತಿವರ್ಷದಲ್ಲಿಯೂ ನಡೆಸಲಾಗಿದೆ.

ಕನ್ನಡ ವಿಭಾಗದಿಂದ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ. ಉದಾಹರಣೆಗೆ 2009 ರ ಅಕ್ಟೋಬರ್ 30-31 ರಲ್ಲಿ ನಡೆದ ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮ ಶತಮಾನೋತ್ಸವ ದ ರಾಜ್ಯ ಮಟ್ಟದ ವಿಚಾರ ಸಂಕಿರಣ, 2009 ಜೂನ್ 24 ರಿಂದ 26 ರವರೆಗೆ ನಡೆದ ಪ್ರಾಚೀನ ಕನ್ನಡ ಕಾವ್ಯ : ಓದು ವ್ಯಾಖ್ಯಾನ, 2012 ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ನಡೆದ ಅಂತರಾಷ್ಟ್ರೀಯ ಸಮ್ಮೇಳನ, 2015 ರಲ್ಲಿ ನಡೆದ ಸಾಹಿತಿ -ಸಾಹಿತ್ಯ ವರ್ತಮಾನ, 2020 ರ ಭಾಷಾ ಉತ್ಸವ ಇತ್ಯಾದಿಗಳು.

ಇಷ್ಟೇ ಅಲ್ಲದೇ ಕನ್ನಡ ವಿಭಾಗದ ಅಧ್ಯಾಪಕರು ಸೇರಿದಂತೆ ವಿವಿಧ ಅಧ್ಯಯನ ವಿಭಾಗಗಳ ಅಧ್ಯಾಪಕರು ಅನೇಕ ಕನ್ನಡ ಸಾಹಿತ್ಯ, ಇತಿಹಾಸ, ವಿಜ್ಞಾನ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅಲ್ಲದೇ ಸಂಶೋಧನಾ ಲೇಖನಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಯು ಶಾಸ್ತ್ರೀಯ ಸ್ಥಾನಮಾನ ಪಡೆದ ಹಿನ್ನೆಲೆಯಲ್ಲಿ ಭಾಷಾಭಿವೃದ್ಧಿ ಯೋಜನೆಯಲ್ಲಿ ಡಾ. ಎ. ರಂಗಸ್ವಾಮಿ ಅವರ ಸಂಪಾದಕತ್ವದಲ್ಲಿ ಜನಪ್ರಿಯ ಕನ್ನಡ ಪುಸ್ತಕಮಾಲೆಯ ಮೂಲಕ 127 ಕನ್ನಡ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಹಾಗೆಯೇ ಡಾ. ಎನ್. ಲಕ್ಷ್ಮೀ ಅವರ ಸಂಪಾದಕತ್ವದಲ್ಲಿ ಶಿಕ್ಷಣ ವಿಷಯ ವಿಶ್ವಕೋಶದ 3 ಸಂಪುಟಗಳನ್ನು ಪ್ರಕಟಿಸಲಾಗಿದೆ. ಇವುಗಳನ್ನು ರಿಯಾಯಿತಿ ಬೆಲೆಗೆ ಮಾರಾಟ ಮಾಡುವುದಲ್ಲದೇ, ರಾಜ್ಯದಲ್ಲಿ ನಡೆವ ಕನ್ನಡ ಉತ್ಸವಗಳ ಕಾಲದಲ್ಲಿ ಪ್ರದರ್ಶಿಸಲಾಗುತ್ತಿದೆ.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಡಾ. ಶಲ್ವಪ್ಪಿಳ್ಳೆ ಅಯ್ಯಂಗಾರ್ ಅವರು ಭಾರತದೇಶದ ಪ್ರಮುಖ ಪ್ರತಿಷ್ಠಿತ ಸಂಸ್ಥೆಗಳಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತೀಯ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಶಾಲೆ (ಡಿಎಫ್ಆರ್ಎಲ್), ಗಳಲ್ಲಿ 19.11.2020 ಹಾಗೂ 28.11.2023 ದಂದು ರಾಜ್ಯೋತ್ಸವದ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿರುತ್ತಾರೆ. ಇದು ವಿಶ್ವವಿದ್ಯಾಲಯಕ್ಕೆ ಸಂದ ಗೌರವ ಮತ್ತು ಕರಾಮುವಿಯ ಬದ್ಧತೆಯಾಗಿದೆ.

ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಮಣಿರವರು ವಿದೇಶಗಳಲ್ಲಿ ಮತ್ತು ತಮಿಳುನಾಡಿನಲ್ಲಿ 2023 ರಲ್ಲಿ ಭಾಷಾ ಉತ್ಸವಗಳಲ್ಲಿ ಪಾಲ್ಗೊಂಡು ಕನ್ನಡ ಜಾನಪದ ಮತ್ತು ಸಾಹಿತ್ಯ ಪರಂಪರೆಯ ಬಗ್ಗೆ ಲೇಖನಗಳನ್ನು ಮಂಡಿಸಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಾ ಬರಲಾಗಿದ್ದು ಕನ್ನಡ ನಾಡು, ನುಡಿ, ಪರಂಪರೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿದ ಮಹನೀಯರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರ ಪೀಠದಿಂದ ಕನ್ನಡ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

  • ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್.‌

key words: KSOU, Karnataka state open university, Kannada department, KSOU, Kannada fest