ಮೂತ್ರಪಿಂಡ ಕಸಿ ಬಳಿಕ ಮೂತ್ರನಾಳ ಸೋಂಕಿಗೆ ತುತ್ತಾಗಿದ್ದ ಮಹಿಳೆಗೆ ರೋಬೋಟಿಕ್‌ ನಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ.

ಬೆಂಗಳೂರು,ಆಗಸ್ಟ್,10,2023(www.justkannada.in):  ದೇಹಕ್ಕೆ ಹೊಂದಿಕೆಯಾಗದ ಮೂತ್ರಪಿಂಡದ ಕಸಿ ಮಾಡಿಸಿಕೊಂಡು ನಂತರ ಮೂತ್ರನಾಳ ಸೋಂಕಿಗೆ ಒಳಗಾಗಿದ್ದ 51 ವರ್ಷದ ಒಮಾನಿ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ರೋಬೋಟ್‌ ಸಹಾಯದಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಮೂತ್ರಶಾಸ್ತ್ರ ತಜ್ಞ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಡಾ.ಮೋಹನ್ ಕೇಶವಮೂರ್ತಿ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ಈ ಕುರಿತು ಮಾತನಾಡಿದ ಡಾ. ಮೋಹನ್‌ ಕೇಶವಮೂರ್ತಿ, 51 ವರ್ಷದ ರೇಷ್ಮ ಎಂಬ ಮಹಿಳೆಯು ಒಂದು ವರ್ಷದ ಹಿಂದೆ ಕೆಲ ಕಾರಣದಿಂದ ಮೂತ್ರಪಿಂಡ ಕಳೆದುಕೊಂಡು, ಪಾಕಿಸ್ತಾನದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು, ಆದರೆ ಇದು ಇವರ ದೇಹ ಹಾಗೂ ರಕ್ತಕ್ಕೆ ಹೊಂದಿಕೆಯಾಗಿರಲಿಲ್ಲ. ಮೂತ್ರನಾಳ ಕಸಿ ಮಾಡುವ ವೇಳೆ ಮೂತ್ರನಾಳದ ಸ್ಟೆಂಟಿಂಗ್ ಅನ್ನು (ಡಬಲ್ ಜೆ ಸ್ಟೆಂಟ್) ಅಳವಡಿಸಲಾಗಿತ್ತು, ಜೊತೆಗೆ ಮೂತ್ರವಿಸರ್ಜನೆಗೆಂದು ಪ್ಲಾಸ್ಟಿಕ್‌ ಟ್ಯೂಬ್‌ನನ್ನು ಅಳವಡಿಸಲಾಗಿತ್ತು, ಇದು ತೀರ ತೆಳುವಾದ್ದರಿಂದ ಕೇವಲ ಒಂದು ವರ್ಷದಲ್ಲಿಯೇ ಆ ಡಬಲ್‌ ಜೆ ಸ್ಟಂಟ್‌ ಮುರಿದಿತ್ತು, ಮೊದಲೇ ಹೊಂದಿಕೆಯಾಗದ ಮೂತ್ರಪಿಂಡವಾದ್ದರಿಂದ ಈ ಸ್ಟಂಟ್‌ ಮುರಿದು, ರೇಷ್ಮ ಅವರಿಗೆ ಮೂತ್ರಕೋಶದ ಸೋಂಕು ಹರಡಲು ಪ್ರಾರಂಭಗೊಂಡಿತ್ತು, ಮುರಿದು ಹೋದ ಸ್ಟಂಟ್‌ ನನ್ನು ತೆಗೆದು ಹಾಕುವುದು ಅನಿವಾರ್ಯವಾಗಿತ್ತು, ಆದರೆ, ಇದನ್ನು ತೆಗೆದು ಹಾಕಲು ಪಾಕಿಸ್ತಾನದಲ್ಲಿ ಯಾವ ಆಸ್ಪತ್ರೆಯಲ್ಲೂ ಅತ್ಯಾಧುನಿಕ  ಆಸ್ಪತ್ರೆ ಸಿಗದೇ ರೋಗಿಯು ತೀರ ಸಮಸ್ಯೆ ಎದುರಿಸಿದ್ದರು. ಸಾಕಷ್ಟು ಶಸ್ತ್ರಚಿಕಿತ್ಸೆಗೆ ಒಳಗಾದರೂ ಸ್ಟಂಟ್‌ ತೆರವು ಅಸಾಧ್ಯವಾಗಿತ್ತು.

ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ರೇಷ್ಮ ಅವರು, ನಮ್ಮಲ್ಲಿರುವ ರೋಬೋಟಿಕ್‌  ತಂತ್ರಜ್ಞಾನವನ್ನು ಬಳಸಿಕೊಂಡು, ಮೂರುಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಮುರಿದು ಹೋಗಿದ್ದ ಸ್ಟಂಟ್‌ ನನ್ನು ಹೊರತೆಗೆದು, ಕಸಿ ಮಾಡಲಾದ ಮೂತ್ರಪಿಂಡದಿಂದಲೇ ನೇರವಾಗಿ  ಮೂತ್ರ ವಿಸರ್ಜನೆಗೆ ತೊಂದರೆಯಾಗದಂತೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ಸಂಪೂರ್ಣ ಗುಣಮುಖರಾಗಿದ್ದು, ಮೂತ್ರಕೋಶ ಸೋಂಕಿನಿಂದಲೂ ಮುಕ್ತರಾಗಿ, ಆರೋಗ್ಯದಿಂದ್ದಾರೆ ಎಂದು ವಿವರಿಸಿದರು.

ಫೋರ್ಟಿಸ್ ಆಸ್ಪತ್ರೆ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ”  ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟವು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ . ಪಾಕಿಸ್ತಾನದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಮಹಿಳೆಯು ಭಾರತದಲ್ಲಿ ಅದರಲ್ಲೂ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿ, ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಇದು ನಮ್ಮ ಆಸ್ಪತ್ರೆಗೆ ಹೆಮ್ಮೆಯ ವಿಚಾರ ಎಂದರು.

Key words: Successful-complex- robotic-surgery – woman – Fortis Hospital