ಸ್ಟಿಕ್ ಇಡ್ಲಿ: ಬೆಂಗಳೂರಿನಲ್ಲಿ ಹೊಸ ರೂಪ ಪಡೆದ ದಕ್ಷಿಣ ಭಾರತದ ಅತ್ಯಂತ ಮೆಚ್ಚಿನ ತಿಂಡಿ, ನೆಟ್ಟಿಗರಿಂದ ಭಿನ್ನ ಪ್ರತಿಕ್ರಿಯೆ.

ಬೆಂಗಳೂರು, ಫೆಬ್ರವರಿ,2, 2023(www.justkannada.in): ಬೆಂಗಳೂರು ಎಂದರೆ ವಿಭಿನ್ನತೆ, ವೈಶಿಷ್ಟ್ಯತೆ. ಧಿರಿಸುಗಳಿಂದ ಹಿಡಿದು ತಿನಿಸುಗಳವರೆಗೆ ವಿಭಿನ್ನತೆಯನ್ನು ಹೊಂದಿರುವ ನಗರವಾಗಿದೆ. ಜೊತೆಗೆ, ಬೆಂಗಳೂರಿಗರು ಆಹಾರಪ್ರಿಯರು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅಚ್ಚುಮೆಚ್ಚಿನ ಬೆಳಗಿನ ಉಪಹಾರವಾದ ಇಡ್ಲಿಗೆ ಹೊಸ ಹೊಸ ರೂಪ ಲಭಿಸುತ್ತಿದೆ. ಇಂತಹ ಒಂದು ಪ್ರಯೋಗದಡಿಯಲ್ಲಿ ಇಡ್ಲಿಗೆ ಸ್ಟಿಕ್ ಇಡ್ಲಿ ರೂಪ ನೀಡಲಾಗಿದೆ. ಬೆಂಗಳೂರಿನ ಆಹಾರ ಪ್ರಿಯರು, ಹೊಸ ರೂಪದ ‘ಸ್ಟಿಕ್ ಇಡ್ಲಿ’ಗಳಿಗೆ ಸಂಬಂಧಿಸಿದಂತೆ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಅನೇಕರು ಚಿಕ್ಕ ಕಡ್ಡಿಯ ಒಂದು ತುದಿಯಲಿ ಇಡ್ಲಿಯನ್ನು ತಯಾರಿಸಲಾರಂಭಿಸಿದ್ದು, ಇದಕ್ಕೆ ‘ಸ್ಟಿಕ್ ಇಡ್ಲಿ’, ‘ಪಾಪ್ಸಿಕಲ್ ಇಡ್ಲಿ’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ‘ಸ್ಟಿಕ್ ಇಡ್ಲಿ’ ಮೊದಲ ಬಾರಿಗೆ ಅಕ್ಟೋಬರ್ 2021ರಲ್ಲಿ ವೈರಲ್ ಆಯಿತು. ಯೂಟ್ಯೂಬ್‌ ನಲ್ಲಿ ಅನೇಕ ಆಹಾರ ತಯಾರಿಸುವ ಚಾನೆಲ್‌ ಗಳಲ್ಲಿ ಈ ರೆಸಿಪಿಯ ವೀಡಿಯೋಗಳು ಹರಿದಾಡಿದವು.

ಈ ಸ್ಟಿಕ್ ಇಡ್ಲಿ ಕುರಿತ ಇತ್ತೀಚಿನ ಒಂದು ಟ್ವೀಟ್ ಚರ್ಚೆಯನ್ನು ಪುನರಾರಂಭಿಸಿದೆ. “ಬೆಂಗಳೂರಿನ ಆಹಾರ ಕ್ಷೇತ್ರದಲ್ಲಿ ನವೀನ ಆವಿಷ್ಕಾರ – ಕಡ್ಡಿಯ ತುದಿಯಲ್ಲಿ ಇಡ್ಲಿ, ಸಾಂಬಾರ್, ಚಟ್ನಿಯೊಂದಿಗೆ! ಯೇಸ್ ಅಥವಾ ನೋ?” ಎಂಬ ಟ್ವೀಟಿಗೆ 90 ಸಾವಿರಕ್ಕೂ ಹೆಚ್ಚು ವ್ಯೂವ್‌ ಗಳು ಲಭಿಸಿದ್ದು, ನೂರಾರು ಪ್ರತಿಕ್ರಿಯೆ ಸಂದೇಶಗಳು ಬಂದಿವೆ. ಆ ಪೈಕಿ ಬಹುಪಾಲು ‘ನೋ’ (ಬೇಡ) ಎಂದಿವೆ.

ಕೇಂದ್ರದ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಹಾಗೂ ತಂತ್ರಜ್ಞಾನ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ‘ನಾನು ಮೂಲ ರೂಪದ ಇಡ್ಲಿ’ಯನ್ನೇ ಬಯಸುತ್ತೇನೆ ಎಂದಿದ್ದಾರೆ.

ಮತ್ತೊಬ್ಬರು, “ಇದೊಂದು ನಿರುಪಯೋಗಿ ಕ್ರಿಯಾತ್ಮಕತೆ. ಮೂಲ ರೂಪವೇ ಚೆನ್ನಾಗಿದೆ. ನಾನು ನನ್ನ ಕೈಬೆರಳುಗಳಿಂದ ತಿಂಡಿಯನ್ನು ಸ್ಪರ್ಶಿಸಿದಾಗ ಹಾಗೂ ಬೆರಳುಗಳಿಂದ ಸೇವಿಸಿದಾಗ ರುಚಿಯೇ ಬೇರೆ,” ಎಂದು ಉತ್ತರಿಸಿದ್ದಾರೆ.

“ಚಿಕ್ಕ ಮಕ್ಕಳಿಗೆ ಇದು ಇಷ್ಟವಾಗಬಹುದು, ಏಕೆಂದರೆ ಈ ರೂಪದಲ್ಲಿ ಇಡ್ಲಿ ತಿನ್ನುವುದು ಸುಲಭವಾಗುತ್ತದೆ ಅವರಿಗೆ, ಆದರೆ ನನಗಲ್ಲ,” ಎನ್ನುವುದು ಮತ್ತೊಬ್ಬ ಟ್ವೀಟಿಗನ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್

Key words: Stick Idli- Bengaluru-mixed- response – netizens.