Thursday, August 6, 2026

BDA Apartments

Home Front Page ಸಾಹಿತಿ ಎಸ್.ಎಲ್ ಭೈರಪ್ಪ ವಿರುದ್ಧ ಅಸಮಾಧಾನ: ಮಾಜಿ ಸಿಎಂ ಎಸ್. ಎಂ ಕೃಷ್ಣರನ್ನು ಹಾಡಿ ಹೊಗಳಿದ...

ಸಾಹಿತಿ ಎಸ್.ಎಲ್ ಭೈರಪ್ಪ ವಿರುದ್ಧ ಅಸಮಾಧಾನ: ಮಾಜಿ ಸಿಎಂ ಎಸ್. ಎಂ ಕೃಷ್ಣರನ್ನು ಹಾಡಿ ಹೊಗಳಿದ ಹೆಚ್. ವಿಶ್ವನಾಥ್.

ಮೈಸೂರು,ಜನವರಿ,28,2023(www.justkannada.in): ಪ್ರಧಾನಿ ಮೋದಿಯಿಂದ ನನಗೆ ಪದ್ಮ ವಿಭೂಷಣ ಪ್ರಶಸ್ತಿ ಬಂದಿದೆ ಎಂದು ಹೇಳಿಕೆ ನೀಡಿದ್ದ ಹಿರಿಯ ಸಾಹಿತಿ ಎಸ್.ಎಲ್  ಬೈರಪ್ಪ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕೊಡ ಮಾಡುವ ಪದ್ಮಭೂಷಣ, ಪದ್ಮ ವಿಭೂಷಣ, ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ, ನಾಡಿನ ಹಿರಿಯ ಸಾಹಿತಿ ಎಸ್. ಎಲ್ ಭೈರಪ್ಪ, ಡಾ ಸುಧಾಮೂರ್ತಿ, ಡಾ ಖಾದರ್ ವಲ್ಲಿ ಸೇರಿದಂತೆ ಇನ್ನಿತರ ಹಿರಿಯ ಸಾಧಕರಿಗೆ ಎಚ್ ವಿಶ್ವನಾಥ್ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೆಯೇ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ಕೋರಿ, ಇನ್ನುಳಿದಿರುವ ಅಧಿಕಾರವಧಿಯಲ್ಲಿ ಒಳ್ಳೆಯ ಆಡಳಿತ ನೀಡಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿ ಸಾಹಿತಿ ಎಸ್.ಎಲ್ ಭೈರಪ್ಪ ವಿರುದ್ಧ ಬೇಸರ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್, ನಿಮಗೆ ಈ ವಯಸ್ಸಿನಲ್ಲಿ ಓಲೈಕೆ ಬೇಕಿಲ್ಲ. ನಿಮಗೆ ಅಕ್ಟೋಬರ್ ನಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಗುತ್ತೆ. ಜ್ಙಾನಪೀಠ ಪ್ರಶಸ್ತಿಗಾಗಿ ಈ ರೀತಿಯ ಓಲೈಕೆ ಸರಿಯಲ್ಲ. ಮೋದಿಯಿಂದ ಈ ಪ್ರಶಸ್ತಿ ಬಂದಿದೆ ಎಂಬುದು ಸುಳ್ಳು ‌. ನಿಮ್ಮ ಬರವಣಿಗೆಯಿಂದ ಈ ಪ್ರಶಸ್ತಿ ಬಂದಿದೆ. ನಿಮ್ಮ  ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ. ನೀವು ಬರೆವಣಿಗೆ ಆರಂಭಿಸಿದಾಗ ಮೋದಿ ಎಲ್ಲಿದ್ರು ಅನ್ನೊದೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಎಸ್.ಎಂ ಕೃಷ್ಣ ಗುಣಗಾನ ಮಾಡಿದ ಹಳ್ಳಿಹಕ್ಕಿ.

ಪ್ರಧಾನಿ, ರಾಷ್ಟ್ರಪತಿ ಸ್ಥಾನಗಳನ್ನು ಹೊರತುಪಡಿಸಿ ರಾಜಕೀಯದಲ್ಲಿರುವ ಇನ್ನುಳಿದ ಎಲ್ಲಾ ಪ್ರಮುಖ ಸ್ಥಾನಗಳನ್ನು ಎಸ್. ಎಂ ಕೃಷ್ಣ ಅಲಂಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ಷರ, ಆರೋಗ್ಯ, ಅನ್ನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ವೈಬ್ರೆಂಟ್ ಗುಜರಾತ್ ಮಾದರಿಯಲ್ಲಿ ವೈಬ್ರೆಂಟ್ ಕರ್ನಾಟಕ ಎಂಬ ಮಾದರಿಗೆ ಎಸ್ ಎಂ ಕೃಷ್ಣ ಕಾರಣರಾದರು. ಹಲವು ಪ್ರಥಮಗಳಿಗೆ ಎಸ್ ಎಂ ಕೃಷ್ಣ ಕಾರಣೀಭೂತರಾಗಿದ್ದಾರೆ. ಅವರ ಬಳಿಕ ಮತ್ಯಾರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಕೃಷ್ಣರಂತೆ ನ್ಯಾಯ ಒದಗಿಸಲಿಲ್ಲ ಎಂದು ಎಸ್.ಎಂ ಕೃಷ್ಣರನ್ನು ಎಚ್ ವಿಶ್ವನಾಥ್ ಹಾಡಿ ಹೊಗಳಿದರು.

ಎಸ್ ಎಂ ಕೃಷ್ಣರವರ ಅಪಾರ ಅನುಭವವನ್ನು ಬಿಜೆಪಿ ಬಳಸಿಕೊಳ್ಳಲಿಲ್ಲ ಎಂಬ ನೋವು ನನಗಿದೆ. ಎಸ್ ಎಂ ಕೃಷ್ಣರ  ಅಗಾಧವಾದ ಅನುಭವವನ್ನು ಬಳಸಿಕೊಳ್ಳದಿರುವುದು ವಿಪರ್ಯಾಸ. ಬಿಜೆಪಿ, ಬಿಬಿಸಿ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು.

ಸಂಸದ ಪ್ರತಾಪ್ ಸಿಂಹ ಕುಟುಕಿದ ಹೆಚ್.ವಿಶ್ವನಾಥ್.

ಮೈಸೂರು ಬೆಂಗಳೂರು ಹೈವೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆ ಎಸ್ ಎಂ ಕೃಷ್ಣರು ಪತ್ರ ಬರೆದಿದ್ದಾರೆ. ಎಸ್ ಎಂ ಕೃಷ್ಣ ಅವರಿಂದ, ಸಂಸದ ಪ್ರತಾಪ್ ಸಿಂಹ ಹಾಗೂ ನನ್ನಂತಹವರು ಕಲಿಯುವುದು ಬಹಳಷ್ಟಿದೆ ಎನ್ನುವ ಮೂಲಕ ಪರೋಕ್ಷವಾಗಿ ಹೈವೇಗೆ ಕಾವೇರಿ ಎಂದು ಹೆಸರಿಡುವಂತೆ ಆಗ್ರಹಿಸಿರುವ ಸಂಸದ ಪ್ರತಾಪ್ ಸಿಂಹಗೆ ಕುಟುಕಿದರು.

ಕಾಗಿನೆಲೆ ಶ್ರೀಗಳು ಮಾತನಾಡುವಾಗ ಸಿಎಂ ಬೊಮ್ಮಾಯಿ ಮೈಕ್ ಕಿತ್ತುಕೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ವಿಶ್ವನಾಥ್, ಈ ವಿಚಾರದಿಂದ ನನಗೆ ಬಹಳ ನೋವಾಗಿದೆ. ಮುಖ್ಯಮಂತ್ರಿ  ಬೊಮ್ಮಾಯಿ ಈ ವರ್ತನೆ ಸರಿಯಲ್ಲ. ಯಾವುದಾದರೂ ದೊಡ್ಡ ಸಮುದಾಯದ ಮಠದ ಶ್ರೀಗಳು ಮಾತನಾಡುವಾಗ ಈ ರೀತಿ ಮೈಕ್ ಕಡಿದು ಕೊಂಡಿದ್ದರೆ ಬಿಡುತ್ತಿದ್ದರಾ? ಎಂದು ಸಿಎಂ ಬೊಮ್ಮಾಯಿಗೆ ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

Key words: SL Bhairappa-Former CM -S. M Krishna-MLC-Vishwanath-Mysore