ನಾವು ಪೋಷಣೆ ಮಾಡಿದ ಅರ್ಜುನ ನಮ್ಮ ಕಣ್ಣೆದುರೇ ಧರೆಗುರುಳಿ ಪ್ರಾಣಬಿಟ್ಟಿದ್ದು ಆಘಾತವಾಗಿದೆ-ಪಶುವೈದ್ಯ ಡಾ. ರಮೇಶ್ ದುಃಖಿತ ಮಾತು.

ಮೈಸೂರು, ಡಿಸೆಂಬರ್,9,2023(www.justkannada.in): ಕಾಡಾನೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿಯಿಂದ ಅರ್ಜುನ ಸಾವಿಗೀಡಾದ ಘಟನೆಯ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಪಶು ವೈದ್ಯ ಡಾ. ರಮೇಶ್ ಮಾತನಾಡುತ್ತಾ ದುಃಖಿತರಾದರು.

ಅಂದು ಕಾರ್ಯಾಚರಣೆ ವೇಳೆ ನಡೆದ ಘಟನೆ ಬಗ್ಗೆ ಮಾತನಾಡಿ   ವಿವರಿಸಿದ ಪಶು ವೈದ್ಯ ಡಾ. ರಮೇಶ್, ನಾವು ಪಾಲನೆ ಮಾಡುತ್ತಿದ್ದ ದಸರಾ ಆನೆ ಅರ್ಜುನ ನಮ್ಮ ಕಣ್ಣೆದುರಿಗೆ ಕಾಡಾನೆ ದಾಳಿಗೆ ನೆಲಕ್ಕೊರಗಿದ್ದು ಆಘಾತವಾಗಿದೆ. ಅರ್ಜುನನ ಮೇಲೆ ಕಾಡಾನೆ ದಾಳಿಯನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ. ಹಠಾತ್ತನೆ ಈ ಆನೆ, ಅರ್ಜುನನ ಮೇಲೆ ದಾಳಿ ನಡೆಸಿತು.  ಅರವಳಿಕೆ ಚುಚ್ಚುಮದ್ದು ಡಾರ್ಟ್ ಮಾಡಿದರೂ, ಕೆಂದದ ಕಾಡಾನೆ, ಅರ್ಜುನನ ಬಲಿ ಪಡೆಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಅರ್ಜುನನನ್ನು ಕೊಂದ ಕಾಡಾನೆಯ ಸೆರೆಗಾಗಿ ಕಾರ್ಯಾಚರಣೆ ನಡೆಸಿರಲಿಲ್ಲ. ಯಸಳೂರು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಇದು ಎಂದು ಗುರುತಿಸಿರಲಿಲ್ಲ. ವಿಕ್ರಾಂತ್ ಎಂಬ ಆನೆ ಅಲ್ಲದೇ ಉದ್ದದ ದಂತವಿರುವ ಮತ್ತೊಂದು ಆನೆಯನ್ನು ಉಪಟಳ ನೀಡುತ್ತಿದ್ದ ಆನೆಗಳೆಂದು ಗುರುತಿಸಲಾಗಿತ್ತು. ಅವುಗಳನ್ನು ಸೆರೆ ಹಿಡಿಯಲು ಫೋಟೋಗಳನ್ನೂ ಕೂಡ ನಮಗೆ ನೀಡಲಾಗಿತ್ತು. ಆ ಎರಡು ಆನೆಗಳ ಸೆರೆಗಾಗಿಯೇ ನಮ್ಮ ಕಾರ್ಯಾಚರಣೆ ನಡೆದಿತ್ತು ಎಂದು ಪಶುವೈದ್ಯ ಡಾ. ರಮೇಶ್ ತಿಳಿಸಿದರು.

ಆನೆಗಳ ಸೆರೆಗಾಗಿ ನಾವು ಕಾಡಿಗೆ ಪ್ರವೇಶಿಸುತ್ತಿದ್ದಂತೆಯೇ ಪೊದೆಯೊಳಗಿಂದ ನುಗ್ಗಿ ಬಂದ ಒಂಟಿ ಸಲಗ, ಏಕಾಏಕಿ ಅರ್ಜುನನ ಕತ್ತಿನ ಭಾಗಕ್ಕೆ ಬಿರುಸಿನಿಂದ ತಿವಿಯಿತು. ಸುಮಾರು 5 ನಿಮಿಷ ಕಾಲ ಎರಡೂ ಆನೆಗಳ ನಡುವೆ ಕಾಳಗ ನಡೆದು,  ಈ ಕಾಳಗದಲ್ಲಿ ಅರ್ಜುನ ಕಾಡಾನೆಯನ್ನು ಓಡಿಸಿತು. ಈ ಸಂದರ್ಭದಲ್ಲಿ ಅರ್ಜುನನ ಮೇಲಿದ್ದ ನಾವು ಕೆಳಗೆ ಬೀಳುವಂತಾಗಿ ನಾನು ಒಂದು ಕೈಯ್ಯಲ್ಲಿ ಹಗ್ಗ ಹಾಗೂ ಮತ್ತೊಂದು ಕೈಯ್ಯಲ್ಲಿ ಅರವಳಿಕೆ ಶೂಟ್ ಮಾಡುವ ಗನ್ ಹಿಡಿದುಕೊಂಡು ಹೋರಾಡುತ್ತಿದ್ದೆ. ಅರ್ಜುನನ ಮಾವುತ ವಿನು ನನ್ನ ಶರ್ಟ್ ಹಿಡಿದು ಕೂರಿಸಿದ.

ಈ ಸಂದರ್ಭದಲ್ಲಿ ಅರವಳಿಕೆ ಚುಚ್ಚುಮದ್ದು ನೀಡುವ ಗನ್‍ ನ  ಸೇಫ್ಟಿ ಬಟನ್ ಓಪನ್ ಆಗಿ ಟ್ರಿಗರ್ ಪ್ರೆಸ್ ಆಗಿದೆ. ಆ ವೇಳೆ ಮೇಲಕ್ಕೆ ಹಾರಿದ ಚುಚ್ಚುಮದ್ದು ಕೆಳಕ್ಕೆ ಬೀಳುವಾಗ ಮತ್ತೊಂದು ಬದಿಯಲ್ಲಿ ನಿಂತಿದ್ದ ಪ್ರಶಾಂತ್ ಕಾಲಿಗೆ ಚುಚ್ಚಿದೆ. ಇದು ನನಗೆ ಗೊತ್ತೇ ಇರಲಿಲ್ಲ. ಗನ್‍ ಗೆ ಮತ್ತೊಂದು ಅರವಳಿಕೆ ಡಾರ್ಟ್ ಲೋಡ್ ಮಾಡುತ್ತಿದ್ದ ವೇಳೆ ಡಿಆರ್‍ಎಫ್‍ ಓ ರಂಜನ್ ಅವರು ಕರೆ ಮಾಡಿ ಪ್ರಶಾಂತ್ ಗೆ ಅರವಳಿಕೆ ಮದ್ದು ಡಾರ್ಟ್ ಆಗಿರುವ ಬಗ್ಗೆ ತಿಳಿಸಿದರು. ತಕ್ಷಣವೇ ಅಲ್ಲಿಗೆ ಹೋದಾಗ ಪ್ರಶಾಂತನಿಗೆ ಇನ್ನೂ ಮಂಪರು ಬಾರದೆ ತೂರಾಡುತ್ತಿದ್ದ. ತಕ್ಷಣವೇ ರಿವರ್ಸ್ ಇಂಜೆಕ್ಷನ್ ನೀಡಿದ್ದರಿಂದ ಎರಡು ನಿಮಿಷದಲ್ಲಿ ಪ್ರಶಾಂತ ಸಾಮಾನ್ಯ ಸ್ಥಿತಿಗೆ ಬಂದ. ಆದರೆ, ಅರ್ಜುನನೊಂದಿಗಿನ ಕಾಳಗದಲ್ಲಿ ಓಡಿ ಹೋಗಿದ್ದ ಕಾಡಾನೆ ಮತ್ತೆ ಹಠಾತ್ತನೆ ಬಂದು ಅರ್ಜುನನ ಮೇಲೆರಗಿತು. ಈ ವೇಳೆ ಸಿಬ್ಬಂದಿ ಏರ್ ಫೈರ್ ಮಾಡಿದರೂ ಕೂಡ ಎರಡೂ ಆನೆಗಳ ಕಾಳಗ ಮುಂದುವರೆದೇ ಇತ್ತು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ಡಾರ್ಟ್ ಮಾಡಿದರೂ ಕೂಡ ಜಗ್ಗದೇ ಅದು ಅರ್ಜುನನೊಂದಿಗೆ ಕಾಳಗ ನಡೆಸುತ್ತಲೇ ಇತ್ತು. ಕಾಡಾನೆಯ ದಾಳಿ ಭೀಕರವಾಗಿದ್ದರಿಂದ ಅರ್ಜುನ ನೆಲಕ್ಕೊರಗಿತು. ನಂತರವೂ ಕಾಡಾನೆ ಅರ್ಜುನನ್ನು ತಿವಿದು ಕೊಂದು ಹಾಕಿತು ಎಂದು ಡಾ. ರಮೇಶ್ ಹೇಳಿದರು.

ಅರ್ಜುನ ಆನೆ ಮತ್ತು ಕಾಡಾನೆ ಎರಡಕ್ಕೂ  ಗುಂಡೇಟು ತಗುಲಲಿಲ್ಲ ಎಂದು ಸ್ಪಷ್ಟಪಡಿಸಿದ ಡಾ. ರಮೇಶ್ ಅವರು, ತಮ್ಮ ಸಿಬ್ಬಂದಿ ಏರ್ ಫೈರ್ ಮಾಡಿದರೆ ಹೊರತು, ಆನೆಗಳನ್ನು ಗುರಿ ಇಟ್ಟು ಫೈರ್ ಮಾಡಲೇ ಇಲ್ಲ.  ಆದರೆ ಕಾಡಾನೆಯೊಂದಿಗಿನ ಕಾಳಗದ ವೇಳೆ ಅರ್ಜುನನ ಕಾಲಿಗೆ ಚೂಪಾದ ಮರದ ತುಂಡು ತಗುಲಿ ಅದರ ಉಗುರಿನ ಬಳಿ ರಕ್ತ ಕಾಣಿಸಿಕೊಂಡಿದೆ ಎಂದು ಕಾಳಗ ನಡೆಯುತ್ತಿದ್ದಾಗಲೇ ಮಾವುತ ತಿಳಿಸಿದ್ದ ಎಂದು ಘಟನೆ ಬಗ್ಗೆ ವಿವರಿಸಿದರು.

Key words  shock – Arjuna- died – Veterinarian -Dr. Ramesh