ರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಟಾಪನೆ  ಮೈಸೂರಿಗೆ ಮಾಡಿದ ಅವಮಾನ- ಅರಸು ಸಮಾಜದ ಮುಖಂಡರಿಂದ ಖಂಡನೆ.

ಮೈಸೂರು,ಡಿಸೆಂಬರ್,9,2023(www.justkannada.in): ಮೈಸೂರು ಅರಮನೆಯ ಗನ್ ಹೌಸ್ ವೃತ್ತದ ಬಳಿ  ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಪುತ್ಥಳಿಯನ್ನ ರಾತ್ರೋ ರಾತ್ರಿ ನಿರ್ಮಾಣ ಮಾಡಿದ್ದಾರೆ. ಇದು ಮೈಸೂರಿಗೆ ಮಾಡಿದ ಅಪಮಾನ ಎಂದು ಅರಸು ಸಮಾಜದ ಮುಖಂಡ ಅಮರನಾಥ ರಾಜೇ ಅರಸ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಪುತ್ತಳಿಯನ್ನ ರಾತ್ರಿಯ ವೇಳೆ ಕದ್ದು ಪ್ರತಿಷ್ಟಾಪನೆ ಮಾಡಿರುವುದು ಅವರಿಗೆ ಮಾಡಿದ ಅಪಮಾನ. ನಮ್ಮ ರಾಜ ಮನೆತನಕ್ಕೆ ಮಾತ್ರವಲ್ಲ. ಜೆಎಸ್ ಎಸ್ ಸಂಸ್ಥೆಗೂ ಅವಮಾನ ಮಾಡಿದ್ದಾರೆ. ಯಾವುದೇ ಸ್ಪಷ್ಟ ದಾಖಲಾತಿ ಇಲ್ಲದೆ ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಶ್ರೀಕಂಠದತ್ತ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕು. ರಾಜಮನೆತನದವರ ಪುತ್ಥಳಿ ಇಡೋದಕ್ಕೆ ಆಗಲ್ಲ ಎಂದರೆ ಚಾಮುಂಡೇಶ್ವರಿ ಪ್ರತಿಮೆ ಇಡಬೇಕು ಎಂದು ಹೇಳಿದರು.

ಮಠ ಬೆಳೆದಿರುವುದು ಅರಮನೆಯಿಂದ ಹೊರತು ಮಠದಿಂದ ಅರಮನೆ ಬೆಳೆದಿಲ್ಲ

ಯಾವುದೋ ಒಂದು ಸಮಿತಿ ಸೇರಿಕೊಂಡು ಪುತ್ಥಳಿ ಇಡೋದಕ್ಕೆ ಬಿಡೋದಿಲ್ಲ ಪ್ರತಿಭಟನೆ ಮಾಡುತ್ತೇವೆ. ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮಾಡಿಲ್ಲ. ನಾವು ನ್ಯಾಯುತವಾಗಿ ಹೋರಾಟ ಮಾಡುತ್ತೇವೆ. ಮಠ ಬೆಳೆದಿರುವುದು ಅರಮನೆಯಿಂದ ಹೊರತು ಮಠದಿಂದ ಅರಮನೆ ಬೆಳೆದಿಲ್ಲ. ಮೈಸೂರು ರಾಜರು ಮಾಡಿರುವ ಆಸ್ತಿ. ಪುತ್ಥಳಿ ಹಾಕಿರುವವರ ದಾಖಲೆ ಇಲ್ಲ.  ನಿರ್ಮಾಣ ಮಾಡಿದ್ದವರೇ ತೆಗಿಯಬೇಕು. ಮಠದವರು ಬಂದು ಧೈರ್ಯದಿಂದ ಹೇಳಬೇಕಿತ್ತು ಕದ್ದು ಹಾಕೋದು ಏನಿತ್ತು. ಅರಮನೆಗೆ ಮೋಸ ಆಗುತ್ತಿದೆ. ಕೋರ್ಟ್ ಆದೇಶ ಬಂದ್ರೆ ಯಾವುದೇ ಪುತ್ಥಳಿ ನಿರ್ಮಾಣಕ್ಕೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ಅಮರನಾಥ ರಾಜೇ ಅರಸ್ ಹೇಳಿದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಮ್ಮ ಹೋರಾಟ- ಜಯದೇವರಾಜೇ ಅರಸ್

ಈ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಜಯದೇವರಾಜೇ ಅರಸ್, ಈಗಲೂ ಕೂಡ ಈ ವೃತ್ತವನ್ನ ಗನ್ ಹೌಸ್ ವೃತ್ತ ಎಂದೇ ಕರೆಯುತ್ತಾರೆ. ಅರಮನೆ ಸುತ್ತಮುತ್ತ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿಯೂ ಸಹ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ನಿರ್ಮಾಣ ಆಗಬೇಕು ಎಂಬುದು ನಮ್ಮ ಬಯಕೆ. ಪ್ರತಿಮೆ ಸ್ಥಾಪನೆ ವಿಚಾರ ಕೋರ್ಟ್ ನಲ್ಲಿದೆ. ಜಿಲ್ಲಾ ಸಮಿತಿ ಹಾಗೂ ಜಿಲ್ಲಾಡಳಿತ ನಿರ್ಲಕ್ಷದಿಂದ ಈ ವಿವಾದ ಎಬ್ಬಿದೆ. ರಾತ್ರೋ ರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪನೆ ಮಾಡುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ. ಈ ವಿಷಯವಾಗಿ ನಾವು ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡುತ್ತೇವೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಎರಡು ಸಮುದಾಯಗಳು ಕುಳಿತು ಸಮಸ್ಯೆ ಬಗೆಹರಿಸಬೇಕು- ಎಲ್.ನಾಗೇಂದ್ರ

ಇನ್ನು ಗನ್ ಹೌಸ್ ವೃತ್ತದಲ್ಲಿ ಶಿವರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪನೆ ವಿಚಾರ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎಲ್ ನಾಗೇಂದ್ರ, ಇದರ ಬಗ್ಗೆ ಹೆಚ್ಚಾಗಿ ಮಾತನಾಡಲು ಬಯಸಲ್ಲ. ಎರಡು ಸಮುದಾಯಗಳು ಕುಳಿತು ಸಮಸ್ಯೆ ಬಗೆಹರಿಸಬೇಕು. ಅದನ್ನ ಬಿಟ್ಟು ಬೀದಿಗಿಳಿಯಬಾರದು. ರಾಜೇಂದ್ರ ಶ್ರೀಗಳ ಕೊಡುಗೆ ಸಹ ಸಮಾಜಕ್ಕೆ ಅಪಾರ. ಶ್ರೀಗಳು ತ್ರಿವಿದ ದಾಸೋಹಿಗಳು. ಅಕ್ಷರ, ಅನ್ನ ,ವಸತಿ, ಆರೋಗ್ಯ ಕ್ಷೇತ್ರದಲ್ಲಿ ಶ್ರೀಗಳ ಕೊಡುಗೆ ಅತ್ಯಮೂಲ್ಯ. ಇದೆ ರೀತಿ ಮೈಸೂರು ದೊರೆಗಳ ಕೊಡುಗೆ ಕೂಡ ಅಪಾರವಾದದ್ದು. ಮೈಸೂರು ಭಾಗದ ಅಭಿವೃದ್ಧಿಗೆ ಮಹಾರಾಜರು ಹಗಲಿರುಳು ಶ್ರಮಿಸಿದ್ದಾರೆ. ಹಾಗಾಗಿ ಎರಡು ಸಮುದಾಯಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು.

Key words: install- statue – insult – Mysore- Condemned -Arasu Samaj- leaders