ವೇಗಗತಿಯಲ್ಲಿ ಸಾಗುತ್ತಿರುವ ವೈಜ್ಞಾನಿಕ ಸಂಶೋಧನೆಗಳಿಗೆ ತಕ್ಕಂತೆ ಜ್ಞಾನ ವೃದ್ಧಿಸಿಕೊಳ್ಳಿ -ಡಾ. ವೆಂಕಟೇಸ್ವರನ್ .ಜಿ

ಮೈಸೂರು,ಫೆಬ್ರವರಿ,28,2024(www.justkannada.in): ವೈಜ್ಞಾನಿಕ ಸಂಶೋಧನೆಗಳು ವೇಗಗತಿಯಲ್ಲಿ ಸಾಗುತ್ತಿರುವ ಈ ದಿನಮಾನದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಅದಕ್ಕೆ ತಕ್ಕಂತೆ ವೃದ್ಧಿಸಿಕೊಳ್ಳಬೇಕು. ಇಲ್ಲವಾದರೆ  ಉದ್ಯೋಗವಕಾಶಗಳು ಲಭಿಸುವುದಿಲ್ಲ ಸಿ.ಎಫ್.ಟಿ.ಆರ್.ಐ ನ ವಿಶ್ರಾಂತ ವಿಜ್ಞಾನಿ ಡಾ.ವೆಂಕಟೇಸ್ವರನ್ ಜಿ ಸಲಹೆ ನೀಡಿದರು.

ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಸಿ.ಎಫ್.ಟಿ.ಆರ್.ಐ ನ ವಿಶ್ರಾಂತ ವಿಜ್ಞಾನಿ ಡಾ.ವೆಂಕಟೇಸ್ವರನ್ ಜಿ, ಅವರು ಮಾತನಾಡಿದರು.

ತಂತ್ರಜ್ಞಾನವನ್ನು ಬಳಸಿಕೊಂಡು ,ಜ್ಞಾನವನ್ನು ಬೆಳೆಸಿಕೊಳ್ಳಿ. ತಂತ್ರಜ್ಞಾನ ಆಧಾರಿತ ಜ್ಞಾನದ ಬಳಕೆಯೇ ಇಂದು ಮುಖ್ಯವಾಗಿದೆ. ಇಲ್ಲವಾದರೆ ನೀವೇ ಅಪ್ರಸ್ತುತ ಆಗುವ ಆಪಾಯವಿದೆ ಎಂದರು.

ನಮ್ಮ ದೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳಿವೆ. ಅಲ್ಲಿ ಸಂಶೋಧನೆ ಮಾಡಲು ಹಲವಾರು ಅವಕಾಶಗಳಿವೆ. ಅವುಗಳಿಗೆ ಪ್ರವೇಶ ಪಡೆದು ಸಂಶೋಧನೆ ನಡೆಸಿ ದೇಶಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದರು.

ಅಂತರ್ಜಾಲವನ್ನು ಶೈಕ್ಷಣಿಕ ಮಾಹಿತಿ ಪಡೆಯಲು ಮತ್ತು ಅದರಲ್ಲಿ ಪ್ರಗತಿ ಕಾಣಲು ಬಳಸಿಕೊಂಡು, ಒಳ್ಳೆಯ ಉದ್ಯೋಗ ಪಡೆದು ಉತ್ತಮ ಪ್ರಜೆಗಳಾಗಿ ಎಂದರು.

ಆಹಾರ ಪದಾರ್ಥಗಳನ್ನು ಮತ್ತು ಧಾನ್ಯಗಳನ್ನು ಆರೋಗ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಬಳಸಿ, ಬದಲಿಗೆ ಆರೋಗ್ಯವನ್ನು ಹದಗೆಡಿಸುವ ಆಹಾರ ಪದಾರ್ಥಗಳನ್ನು ಬಳಸಬೇಡಿ ಎಂದು ಕಿವಿಮಾತು ಹೇಳಿದರು.

ಡಿ.ಎಫ್.ಆರ್.ಎಲ್ ಮತ್ತು ಸಿ.ಎಫ್.ಟಿ.ಆರ್.ಐ ಒಟ್ಟಿಗೆ ಸೇರಿ ಆಹಾರ ಸಂಸ್ಕರಣೆಯಲ್ಲಿ ಹಲವಾರು ಆವಿಷ್ಕಾರ ಮಾಡಿರುವುದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಅವರು, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದೆಂದರೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಎಂದರ್ಥ. ಹಾಗಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಮಾಜವನ್ನು, ತಮ್ಮ ಸುತ್ತಮುತ್ತಲಿನ ಪರಸರವನ್ನು ಬದಲಾಯಿಸಲು ಪ್ರಯತ್ನಿಸಿ ಎಂದು ಬುದ್ಧಿಮಾತು ಹೇಳಿದರು.

ಕುಮಾರಿ ಶ್ರೀರಕ್ಷಾ ಸ್ವಾಗತಿಸಿದರು ಮತ್ತು ಡಾ.ಶ್ರೀನಿವಾಸ್ ಎಂ.ಎನ್ ವಂದಿಸಿದರು. ಆಂತರಿಕ ಗುಣಮಟ್ಟ ಕೋಶದ ಸಂಚಾಲಕ ವಿ. ನಂದಕುಮಾರ್ ,ವಿಜ್ಞಾನ ಸಮಿತಿ ಸಂಚಾಲಕ ಸರ್ದಾರ್ ಹುಸೇನ್, ಅಧ್ಯಾಪಕ ಕಾರ್ಯದರ್ಶಿ ಡಾ. ರವಿಶಂಕರ್ ಡಿ.ಕೆ, ಸಮಿತಿ ಸದಸ್ಯರಾದ ಡಾ.ಸಿದ್ದೇಗೌಡ, ಎಸ್.ವಿ.ಪ್ರಭಾಕರ್,  ಎಸ್, ಡಾ. ಕುಮಾರ್ ಎಂ.ಎಸ್, ಪೃಥ್ವಿರಾಜ್, ಗೋವಿಂದರಾಜು, ಮಾನಸ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಕಛೇರಿ ಸಿಬ್ಬಂದಿ ಹಾಜರಿದ್ದರು.

Key words: scientific research -Dr. Venkateswaran .G-mysore-Maharani college