274 ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಹುದ್ದೆಗೆ ಬಡ್ತಿ- ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು,ಡಿಸೆಂಬರ್, 16,2022(www.justkannada.in): ಇದೇ ಮೊದಲ ಬಾರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ 274 ಸಹ ಪ್ರಾಧ್ಯಾಪಕರುಗಳಿಗೆ (ಅಸೋಸಿಯೇಟ್‌ ಪ್ರೊಫೆಸರ್‍ಸ್) ಪ್ರಾಧ್ಯಾಪಕರಾಗಿ ಬಡ್ತಿ ನೀಡಲು ರಾಜ್ಯ ಸರಕಾರವು ನಿರ್ಧರಿಸಿದೆ. ಈ ಸಂಬಂಧವಾಗಿ ಬುಧವಾರ (ಡಿ.14) ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರಕಾರದ ಈ ನಿರ್ಧಾರದಿಂದ 274 ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯ ಭಾಗವಾಗಿರುವ ವೃತ್ತಿ ಸುಧಾರಣೆ ಆಯ್ಕೆ ಸಮಿತಿಯ ತೀರ್ಮಾನದ ಮೇಲೆ ಈ ಹೆಜ್ಜೆ ಇಡಲಾಗುತ್ತಿದೆ ಎಂದಿದ್ದಾರೆ.

ಯುಜಿಸಿ ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್‍‌ಗಳಾಗಿ ಬಡ್ತಿ ನೀಡಬಹುದೆಂದು 2010ರಲ್ಲೇ ಹೇಳಿದೆ. ಆದರೆ ಕಳೆದ 12 ವರ್ಷಗಳಿಂದ ಈ ವಿಚಾರದಲ್ಲಿ ಯಾವ ಪ್ರಗತಿಯೂ ಆಗಿರಲಿಲ್ಲ. ಈಗ ಸರಕಾರವು 274 ಅಸೋಸಿಯೇಟ್‌ ಪ್ರೊಫೆಸರುಗಳಿಗೆ ಬಡ್ತಿ ನೀಡಲು ಅಧಿಸೂಚನೆ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.

Key words: Promotion – 274 -Associate -Professors  -Professor.