ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಲು ಯೋಜನೆ.

ಬೆಂಗಳೂರು, ಅಕ್ಟೋಬರ್ 28, 2022(www.justkannada.in): ನವೆಂಬರ್ 11 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸುತ್ತಿರುವ ೧೦೮-ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಮೂರು ಲಕ್ಷ ಜನರನ್ನು ಸೇರಿಸುವ ಆಲೋಚನೆ ಹೊಂದಿದೆ.

ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ನವೆಂಬರ್ 11 ರಂದು ಯಾವ ಯಾವ ಕಾರ್ಯಕ್ರಮಗಳಿವೆ ಎಂದು ತಿಳಿಸಲು ಪ್ರಧಾನಿ ಮೋದಿಯವರೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಅನ್ನು ಏರ್ಪಡಿಸಿದ್ದರು. ಪ್ರಧಾನಿ ಮೋದಿಯವರು, ದಕ್ಷಿಣ ಭಾರತದ ಮೊಟ್ಟ ಮೊದಲ, ಬೆಂಗಳೂರು ಮೂಲಕ ಹಾದು ಹೋಗುವ ಮೈಸೂರು-ಚೆನ್ನೈ ರೈಲಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ, ೨.೫ ಕೋಟಿ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಿಸುವ ರೂ.೫,೦೦೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ನಂತರ, ಕೆಂಪೇಗೌಡ ಪ್ರಗತಿ ಪ್ರತಿಮೆ ಉದ್ಘಾಟಿಸಲಿದ್ದಾರೆ. ಅದಾದ ನಂತರ, ಒಕ್ಕಲಿಗರ ಪ್ರಾಬಲ್ಯವಿರುವಂತಹ ಸುಮಾರು ೧೬ ಜಿಲ್ಲೆಗಳಿಂದ ಮೂರು ಲಕ್ಷ ಜನರು ಭಾಗವಹಿಸಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಕಂಚು ಹಾಗೂ ಉಕ್ಕಿನಿಂದ ತಯಾರಿಸಲ್ಪಟ್ಟಿರುವ ಈ ಬೃಹತ್ ಪ್ರತಿಮೆಗೆ ರೂ.೬೪ ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದರು. ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶವನ್ನು ಸುಂದರವಾದ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲಿದ್ದು, ಇದಕ್ಕಾಗಿ ರಾಜ್ಯದಾದ್ಯಂತ ವಿವಿಧ ಸ್ಥಳಗಳಿಂದ ಸಂಗ್ರಹಿಸಿ ತರುವ ಮಣ್ಣನ್ನು ಬಳಸಿಕೊಳ್ಳಲಾಗುವುದು. ಸುಮಾರು ೨೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಯನ್ನು ಮುಂದಿನ ಆರು ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

“ಕೆಂಪೇಗೌಡ ವಿಮಾನನಿಲ್ದಾಣದ ಆವರಣದಲ್ಲಿ ೩ಡಿ ವರ್ಚ್ಯುವಲ್ ರಿಯಾಲಿಟಿ ಪಾರ್ಕ್ ಒಂದನ್ನು ಅಭಿವೃದ್ಧಿಪಡಿಸಲು ನಾವು ಆಲೋಚಿಸುತ್ತಿದ್ದು, ಬೆಂಗಳೂರು ಹಾಗೂ ಅದರ ಸ್ಥಾಪಕರ ಕುರಿತು ಸಂಕ್ಷಿಪ್ತ ಚರಿತ್ರೆಯನ್ನು ಆಧರಿಸಿರುವ ಕಥಾನಕವಿರುತ್ತದೆ,” ಎಂದು ಅಶ್ವತ್ ನಾರಾಯಣ್ ಅವರು ಮಾಧ್ಯಮಕ್ಕೆ ತಿಳಿಸಿದರು. ಜೊತೆಗೆ, ೧೬ನೇ ಶತಮಾನದ ಅರಸನಾಗಿದ್ದಂತಹ ೪೬ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ೪೬ ಸ್ಥಳಗಳನ್ನು ಗುರುತಿಸುವ ವಿವರವಾದ ಯೋಜನಾ ವರದಿಗಳು ಅಂತಿಮ ಸಿದ್ಧತೆಯಲ್ಲಿವೆ. “ಪ್ರವಾಸೋದ್ಯಮ ಇಲಾಖೆಯು ಮಾಗಡಿಯಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಮರುಅಭಿವೃದ್ಧಿಗಾಗಿ ಪುರಾತತ್ವ ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆಗೆ ಹಣವನ್ನು ಬಿಡುಗಡೆಗೊಳಿಸಿದೆ,” ಎಂದು ತಿಳಿಸಿದರು.

ಖ್ಯಾತ ಶಿಲ್ಪಿ ರಾಮ್ ಸುತಾರ್ (ಗುಜರಾತ್‌ನಲ್ಲಿರುವ ಏಕತಾ ಪ್ರತಿಮೆಯ ನಿರ್ಮಾತೃ) ಅವರು ಕೆಂಪೇಗೌಡರ ಪ್ರತಿಮೆಯನ್ನು ವಿನ್ಯಾಸಪಡಿಸಿದ್ದು, ವಿಧಾನಸೌಧದ ಮುಂದೆಯೂ ಸ್ಥಾಪಿಸಲು ಉದ್ದೇಶಿಸಿರುವ ಮತ್ತೊಂದು ಕೆಂಪೇಗೌಡರ ಪ್ರತಿಮೆಯನ್ನೂ ವಿನ್ಯಾಸಪಡಿಸಿದ್ದಾರೆ. ವಿಧಾನಸೌಧದ ಮುಂದಿನ ಪ್ರತಿಮೆಯನ್ನು ಮುಂದಿನ ಎರಡು ತಿಂಗಳುಗಳ ಒಳಗೆ ಅಳವಡಿಸಲಾಗುವುದು, ಎಂದು ಮಾನ್ಯ ಸಚಿವರು ತಿಳಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Prime Minister –Modi- visits- Bengaluru-BJP -plans – massive- convention