ಹಿರಿಯ ಪತ್ರಕರ್ತ ಕೆ.ಬಿ. ಗಣಪತಿ ಅವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಅಭಿನಂದನೆ.

ಮೈಸೂರು,ಅಕ್ಟೋಬರ್,16,2023(www.justkannada.in):  ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ 2023-24 ನೇ ಸಾಲಿನ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿರುವ ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ ಕೆ.ಬಿ. ಗಣಪತಿ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ   ಅಭಿನಂದನೆ ಸಲ್ಲಿಸಿದೆ.

ಮೈಸೂರಿನ ಪತ್ರಿಕೋದ್ಯಮ ಕ್ಷೇತ್ರದ ದಿಗ್ಗಜರೆನಿಸಿಕೊಂಡಿರುವ ಕೆ.ಬಿ.ಗಣಪತಿ ರವರು ಸುಮಾರು 5 ದಶಕಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಪತ್ರಿಕಾರಂಗದ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಘನತೆಯನ್ನು ಎತ್ತರಕ್ಕೆ ಏರಿಸಿದ್ದಾರೆ.

ಇದೇ ಪ್ರಥಮ ಬಾರಿಗೆ ಪತ್ರಿಕಾ ಕ್ಷೇತ್ರದಲ್ಲಿನ  ಕೆ.ಬಿ. ಗಣಪತಿ  ಸಾಧನೆಯನ್ನು ಗುರ್ತಿಸಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡುತ್ತಿರುವುದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಗರಿಮೆಯನ್ನು ಹೆಚ್ಚಿಸಿದೆ.

ಕೆ.ಬಿ.ಗಣಪತಿ ಅವರು ಮೈಸೂರಿನಲ್ಲಿ ಸಂಜೆ ಪ್ರಾದೇಶಿಕ ಇಂಗ್ಲಿಷ್ ದಿನಪತ್ರಿಕೆ ಸ್ಟಾರ್ ಆಫ್ ಮೈಸೂರ್(1978) ಆರಂಭಿಸಿದರು. ಬೆಳಗಿನ ಪತ್ರಿಕೆ ಓದದ ಅನೇಕರು ‘ಸ್ಟಾರ್ ಆಫ್ ಮೈಸೂರ್” ಪತ್ರಿಕೆ ಓದುತ್ತಾರೆನ್ನುವುದು ನಿತ್ಯಸತ್ಯ. ಜೊತೆಗೆ ಪತ್ರಕರ್ತರಾಗಲು ಅಗತ್ಯ ತರಬೇತಿ ನೀಡುವ ಪತ್ರಿಕೆಯೂ ಇದು ಎನ್ನುವುದು ಹೆಮ್ಮೆಯ ಸಂಗತಿ. ಇದರೊಂದಿಗೆ ಮೈಸೂರು ಮಿತ್ರ (1980) ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಕೂಡ ಗಣಪತಿ ಅವರು ಪತ್ರಿಕಾರಂಗದಲ್ಲಿ ಸಾಧನೆ ಮಾಡಿದ್ದಾರೆ. ‘ಮೈಸೂರು ಮಿತ್ರ’ ಪತ್ರಿಕೆಗೆ ಅವರು ಬರೆಯುವ ‘ಛೂ ಮಂತ್ರ’ ಹಾಗೂ ‘ಸ್ಟಾರ್ ಆಫ್ ಮೈಸೂರ್’ ಪತ್ರಿಕೆಗೆ ಬರೆಯುವ “ಅಬ್ರಕಡಬ್ರ” ಅಂಕಣಗಳು ಬಹಳ ಪ್ರಸಿದ್ಧಿ ಪಡೆದಿವೆ.

ಈ ಪತ್ರಿಕೆಗಳನ್ನು ಆರಂಭಿಸುವ ಮೊದಲು ಅವರು, ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ನಂತರ ಮುಂಬಯಿಗೆ ತೆರಳಿ ಅಲ್ಲಿಯ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದರು. ಮುಂಬೈನಲ್ಲಿ ‘ಫ್ರೀ ಪ್ರೆಸ್ ಜರ್ನಲ್’, ‘ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ಹಾಗೂ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಅನುಭವ ಪಡೆದಿದ್ದಾರೆ. ಬಳಿಕ ಮೈಸೂರಿಗೆ ಬಂದು ಎರಡು ಪತ್ರಿಕೆಗಳನ್ನು ಆರಂಭಿಸಿದ್ದು ಇತಿಹಾಸ.

ಕೆಬಿಜಿ ಅವರ ಪ್ರಕಟಿತ ಕೃತಿಗಳು:

ಆದರ್ಶವಾದಿ’ ಕಾದಂಬರಿ (1992), ‘ಅಮೇರಿಕಾ-ಆನ್ ಏರಿಯಾ ಆಫ್ ಲೈಟ್’ ಪ್ರವಾಸ ಕಥನ (1993), ‘ದಿ ಕ್ರಾಸ್ ಆ್ಯಂಡ್ ದಿ ಕೂರ್ಗ್’ ಇಂಗ್ಲಿಷ್ ಕಾದಂಬರಿ (1994), ‘ಸ್ಟಾರ್ ಆಫ್ ಮೈಸೂರ್ – ಸ್ಟೋರಿ ಆಫ್ ಎ ಯೂನಿಕ್ ಈವನಿಂಗ್ ಇಂಗ್ಲಿಷ್ ನ್ಯೂಸ್‌ ಪೇಪರ್’ (2018), ‘ಸ್ವಾರ್ಡ್ ಆಫ್ ಶಿವಾಜಿ’ ಜೀವನ ಚರಿತ್ರೆ (2021), ಶಿವಾಜಿಯ ಖಡ್ಗ ಜೀವನ (2021).

ಭಾರತೀಯ ವಿದ್ಯಾಭವನದ ಮೈಸೂರು ಕೇಂದ್ರದ ಅಧ್ಯಕ್ಷರಾದ ಅವರು, ಮೈಸೂರು ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷರು. ಪತ್ರಿಕಾ ಅಕಾಡೆಮಿಯ ಸದಸ್ಯರಾಗಿದ್ದ ಅವರು, ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದರು. ಜೊತೆಗೆ ಎಚ್‌.ಕೆ.ವೀರಣ್ಣಗೌಡ ಪ್ರಶಸ್ತಿ, ಕೆಯುಡಬ್ಲ್ಯೂ ಪಿ.ಆರ್. ರಾಮಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ ಪುರಸ್ಕೃತರು ಕೂಡ. ಕೆಬಿಜಿ ಅವರಂತಹ ಹಿರಿಯ ಪತ್ರಕರ್ತರ ಸೇವೆಯನ್ನು ಗುರ್ತಿಸಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದು ಸಂಘದ ಅಧ್ಯಕ್ಷರಾದ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ತಿಳಿಸಿದ್ದಾರೆ.

Key words: Senior journalist- K.B Ganapathi-  Honorary Doctorate – Mysore University