ಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸಬೇಕು: ಸಚಿವ ಡಾ.ಹೆಚ್.ಸಿ ಮಹದೇವಪ್ಪ.

ಮೈಸೂರು, ಅಕ್ಟೋಬರ್,16,2023(www.justkannada.in):  ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಯೋಜನೆಗಳು ಹಾಗೂ ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ನಡೆಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.

ನಗರದ ಜೆಕೆ ಮೈದಾನದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ  ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ದಸರಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು,   ಮೈಸೂರು ದಸರಾ ಎಂದರೆ ನಾಲ್ವಡಿ ಕೃಷ್ಣರಾಜರನ್ನು ನೆನೆಯಬೇಕಾದ ಒಂದು ವಿನೂತನ ಕಾರ್ಯಕ್ರಮ. ಮಹಿಳೆಯರ ಶಿಕ್ಷಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಸಾವಿತ್ರಿ ಬಾಪುಲೆ ಮತ್ತು ಜ್ಯೋತಿ ಬಾಪುಲೆ ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ಖಂಡಿಸಿ ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು.  17 ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ  ಸ್ವಂತ ಮನೆಯನ್ನು ಬಿಟ್ಟು ಹೊರ ನಡೆದರು. ಅದೇ ರೀತಿಯಾಗಿ ಮಹಿಳೆಯರ ಸಮಾನತೆಗಾಗಿ ತಮ್ಮ ಕಾನೂನು ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಈ ಸಮಯದಲ್ಲಿ ನೆನೆದರು.

ಈಗ ಮಹಿಳೆಯರು ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಮಹಿಳೆಯರಲ್ಲಿ ಅನೇಕ ಪ್ರತಿಭೆಗಳಿವೆ ಅದನ್ನು ಅವಕಾಶ ಮತ್ತು ವೇದಿಕೆ ಸಿಕ್ಕಾಗ ತೆರೆದಿಡುವ ಪ್ರಯತ್ನ ಮಾಡಬೇಕು. ನಮ್ಮ ಸರ್ಕಾರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ಬಳಸಿಕೊಂಡು  ಸ್ವಾಭಾವಲಂಬಿ ಬದುಕು ನಡೆಸಬೇಕು ಎಂದರು.

ಸರ್ಕಾರವು ಗರ್ಭಿಣಿ ಮಹಿಳೆಯರಿಗೆ  ಪೌಷ್ಟಿಕ ಆಹಾರಗಳನ್ನು ನೀಡುತ್ತಿದ್ದು ಇದನ್ನು ಬಳಸಿಕೊಂಡು ಆರೋಗ್ಯವಂತರಾಗಿರಬೇಕು.  ನಮ್ಮ ಸರ್ಕಾರದ ಅನ್ನ ಭಾಗ್ಯ, ಸ್ತ್ರೀ ಶಕ್ತಿ, ಗೃಹಲಕ್ಷ್ಮಿ ,ಯೋಜನೆಗಳ ಮುಖಾಂತರ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಕ್ರೀಡೆ , ಕಲೆ  ಸಾಹಿತ್ಯ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶದೊಂದಿಗೆ ಸಂವಿಧಾನದ ಅಡಿಯ ಮೈಸೂರು ದಸರಾವನ್ನು ಆಚರಿಸುತ್ತಿದ್ದೇವೆ. ಮಹಿಳೆಯರು ಸಮಾಜದ ಬೆನ್ನೆಲುಬು ಇದ್ದಂತೆ. ಕುಟುಂಬ ಮತ್ತು ಸಮಾಜವನ್ನು ಸರಿ ದಾರಿಯಲ್ಲಿ ಸಾಮಾಜಿಕ ಅಂಶಗಳಾದ ಆರ್ಥಿಕ ,ಶೈಕ್ಷಣಿಕ ಆರೋಗ್ಯ ಎಲ್ಲಾ ಕ್ಷೇತ್ರದಗಳಲ್ಲಿ ಮಹಿಳೆಯರು ಮುಂದೆ ಬಂದು ಸರ್ವತೋಮುಖ ಅಭಿವೃದ್ಧಿಯತ್ತ ಮುಖ ಮಾಡಬೇಕು ಎಂದು ತಿಳಿಸಿದರು.

ಇದೇ ಸಮಯದಲ್ಲಿ ಮಹಿಳಾ ದಸರಾ ಪ್ರಯುಕ್ತ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಮಾರಾಟ ಮೇಳವನ್ನು ಹಾಗೂ ಮಳಿಗೆಗಳನ್ನು  ಉದ್ಘಾಟಿಸಿದ ಸಚಿವ ಹೆಚ್.ಸಿ ಮಹದೇವಪ್ಪ ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಮಹಿಳೆಯರಿಗೆ ಶುಭಾಶಯವನ್ನು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ರವರು ಮಾತನಾಡಿ,  ಮಹಿಳಾ ದಸರಾ ಕಾರ್ಯಕ್ರಮವು ಮಹಿಳೆಯರ ಅಭಿವೃದ್ಧಿ ಪೂರಕವಾಗಿದೆ. ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದು ಸ್ವಭಾವಲಂಬಿಯಾಗಿ ಬದುಕಬೇಕು. ಅದು ದೇಶದ ಆರ್ಥಿಕತೆಗೂ ಕೂಡ ಸಹಾಯವಾಗುತ್ತದೆ. ಈಗಿನ ಮಹಿಳೆಯರು ಗುಡಿ ಕೈಗಾರಿಕೆ ಕ್ಷೇತ್ರದಲ್ಲಷ್ಟೇ ಅಲ್ಲದೆ ಕಾರ್ಪೊರೇಟ್ ಕ್ಷೇತ್ರದಲ್ಲೂ ಹೆಸರು ಮಾಡುತ್ತಿರುವುದು ಸಂತಸದ ವಿಷಯ. ಹೀಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಖ್ಯ ವಾಹಿನಿಗೆ ಬರಬೇಕು. ಮಹಿಳೆಯರು ಮಹಿಳಾ ದಸರಾ ಪ್ರಯುಕ್ತ ಆಯೋಜಿಸಿರುವ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತೆ ಉತ್ತೇಜನ ನೀಡಿದರು.

ಕಾರ್ಯಕ್ರಮದಲ್ಲಿ  ಉಪಮೇಯರ್  ಡಾ. ರೂಪ, ನಗರ ಪಾಲಿಕೆಯ ಸದಸ್ಯರಾದ ಪ್ರಮೀಳಾ ಭರತ್ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಅಧ್ಯಕ್ಷರಾದ ಸುಧಾ ಮದೇವಯ್ಯ, ಹುಣಸೂರು ಉಪ ವಿಭಾಗಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವಿಶೇಷಾಧಿಕಾರಿಗಳಾದ ರುಚಿ ಬಿಂದಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Key words: Women – lead – self-reliant –life- Minister- Dr. HC Mahadevappa.