ಒರಿಜಿನಲ್ ಜೆಡಿಎಸ್ ನಮ್ಮದೇ ಎಂದ ಸಿಎಂ ಇಬ್ರಾಹಿಂಗೆ ತಿರುಗೇಟು ಕೊಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಅಕ್ಟೋಬರ್,17,2023(www.justkannada.in):  ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಿನ್ನೆ ಸಭೆ ನಡೆಸಿ ಚರ್ಚಿಸಿದ ಬಳಿಕ ನಾನು ಪಕ್ಷ ಬಿಡಲ್ಲ. ಬಿಜೆಪಿ ಪರ ಹೋಗಲ್ಲ.  ಒರಿಜಿನಲ್ ಜೆಡಿಎಸ್ ನಮ್ಮದೇ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ.

ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ  ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಿಮಗೆ ಅದು ದೊಡ್ಡದಾಗಿ ಕಾಣುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ.. ಅವರೇ ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಎಂದು ಬರೆದುಕೊಳ್ಳಲಿ ಎಂದು ಟಾಂಗ್ ನೀಡಿದರು.

ತಮ್ಮನ್ನು ಹಾಗೂ ನಿಖಿಲ್ ಕುಮಾರಸ್ವಾಮಿಯನ್ನ  ಪಕ್ಷದಿಂದ ಉಚ್ಚಾಟನೆ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ ಡಿ ಕುಮಾರಸ್ವಾಮಿ , ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅವರಿಗೆ ಬಿಟ್ಟಿದ್ದು.  ನಮಗೆ ಏನು ಮಾಡಬೇಕೊ, ಸರಿ ಮಾಡುತ್ತೇವೆ. ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ? ಅವರು ಫ್ರೀ ಇದ್ದಾರೆ ಮಾತಾನಾಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Key words: Former CM-HD Kumaraswamy – CM Ibrahim -saying – original JDS – ours.