Saturday, September 12, 2026

BDA Apartments

Home Front Page ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸಿದ್ಧತೆ : ಗೊಬ್ಬರ ಪೂರೈಕೆ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ-...

ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸಿದ್ಧತೆ : ಗೊಬ್ಬರ ಪೂರೈಕೆ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ- ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು,ಜೂನ್,2,2021(www.justkannada.in): ಮಳೆಗಾಲದಲ್ಲಿ ಪ್ರವಾಹ ಎದುರಿಸಲು ಸಹ ಸಿದ್ಧತೆ ನಡೆಸಲಾಗಿದ್ದು, ಪಂಚಾಯಿತಿ ಮಟ್ಟದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡಗಳು ಸಜ್ಜಾಗಿವೆ. ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.jk

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರ್ವ ಸಿದ್ಧತೆ ಕುರಿತಂತೆ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ರಾಜ್ಯದಲ್ಲಿ ಈವರೆಗೆ ಚೆನ್ನಾಗಿ ಮಳೆಯಾಗಿದೆ. ಕರ್ನಾಟಕದಲ್ಲಿ 20 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6-7ರ ವೇಳೆಗೆ ಮುಂಗಾರು ಪ್ರಾರಂಭವಾಗಲಿದೆ. 2020-21ರಲ್ಲಿ ದಾಖಲೆ ಪ್ರಮಾಣದ 153.08 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯ ಉತ್ಪಾದನೆ ಆಗಿದೆ. ಕಳೆದ ವರ್ಷಕ್ಕಿಂತ ಶೇ. 10 ರಷ್ಟು ಹೆಚ್ಚಳವಾಗಿದೆ. ಈ ವರ್ಷ 135.48 ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟು ಸಂಖ್ಯೆಯಲ್ಲಿದೆ. ಡಿಎಪಿ ಪೂರೈಕೆಯಲ್ಲಿ ಇದ್ದ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಡಿಎಪಿ ಗೊಬ್ಬರ ಮತ್ತು ಯೂರಿಯ ಗೊಬ್ಬರ ಸಕಾಲದಲ್ಲಿ ಪೂರೈಸುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳು ಹಾಗೂ 210 ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ ಎಂದರು.

ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ  ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಲಾದ ಪರಿಹಾರ ವಿತರಣೆ ಈಗಾಗಲೇ ಪ್ರಾರಂಭವಾಗಿದ್ದು, ಇದಕ್ಕಾಗಿ ಬಿಡುಗಡೆಯಾಗಿರುವ 19 ಕೋಟಿ ರೂ.ಗಳಲ್ಲಿ 15.23 ಕೋಟಿ ರೂ.ಗಳನ್ನು 36,327 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

2020-21ರಲ್ಲಿ ಕೃಷಿ ಸಾಲ ಗುರಿಗಿಂತ 16 ಶೇ. ಹೆಚ್ಚು ವಿತರಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ 3 ಸಾವಿರ ಕೋಟಿ ರೂ. ಹೆಚ್ಚುವರಿ ಗುರಿ ನಿಗದಿ ಪಡಿಸಿದ್ದು, ಪ್ರಸಕ್ತ ಸಾಲಿನಲ್ಲಿ 21 ಸಾವಿರ ಕೋಟಿ ರೂ. ಸಾಲ ವಿತರಣೆಯ ಗುರಿ ನಿಗದಿ ಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ 1067 ಕೋಟಿ ರೂ. ಪಾವತಿಗೆ ಬಾಕಿ ಇದ್ದು, ಕೂಡಲೇ 250 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ತೋಟಗಾರಿಕಾ ಸಚಿವ ಶಂಕರ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Key words: Preparing – flooding –during- rainy season-  CM BS Yeddyurappa.