ವಿವೇಕರ ಸ್ಮಾರಕ ನಿರ್ಮಾಣ ಬೇಡ- ನಿವೃತ್ತ ಡಿಜಿ&ಐಜಿಪಿ ಶಂಕರ್ ಬಿದರಿ.

ಮೈಸೂರು,ನವೆಂಬರ್,6,2021(www.justkannada.in): ನಿರಂಜನ ಮಠ ಉಳಿಸಿ ಹೋರಾಟ ಮುಂದುವರೆದಿದ್ದು ಸ್ಮಾರಕ ನಿರ್ಮಾಣ ಬದಲು ಭಾವಚಿತ್ರವಿಟ್ಟು ನಿರಂಜನ ಮಠಕ್ಕೆ ವಿವೇಕಾನಂದರು ಭೇಟಿ ನೀಡಿದ್ದರು ಎಂದು ಬರೆಯಲಿ ಎಂದು ನಿವೃತ್ತ ಡಿಜಿ&ಐಜಿಪಿ ಶಂಕರ್ ಬಿದರಿ ಸಲಹೆ ನೀಡಿದರು.

ನಿರಂಜನ ಮಠದ ಉಳಿವಿಗಾಗಿ ಮಠದ ಆವರಣದಲ್ಲಿ  ವೀರಶೈವ ಲಿಂಗಾಯತ ಸಮುದಾಯಗಳಿಂದ ಸಮಾವೇಶ ನಡೆಯಿತು. ಕಾರ್ಯಕ್ರಮಕ್ಕೆ ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಚಾಲನೆ ನೀಡಿದರು. ಬಳಿಕ ನಿರಂಜನ ಮಠದ ಕುರಿತು ಮಾತನಾಡಿದ ಶಂಕರ ಬಿದರಿ, ಇಡೀ ಸಮಾಜವನ್ನು ಗೌರವಿಸುವ ನಾವು ನಮ್ಮ ಮಠ ಉಳಿವಿಗೆ 100 ದಿನ ಹೋರಾಟ ಮಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ವೀರಶೈವರನ್ನು ಉಪೇಕ್ಷಿಸಿ ಬದುಕಬಲ್ಲದಾ.? ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದಲ್ಲಿ ರಾಮಕೃಷ್ಣ ಮಠಕ್ಕಿಂತ ಹೆಚ್ಚು ಲಿಂಗಾಯಿತ ಮಠಗಳು ಉತ್ತಮ ಕೆಲಸ ಮಾಡಿವೆ. ಸ್ವಾಮಿ ವಿವೇಕಾನಂದ, ಬಸವೇಶ್ವರು ಸೇರಿ ಎಲ್ಲಾ ಶಿವಶರಣರು ಬೇರೆಯಲ್ಲ. ನಮ್ಮ ಲಿಂಗಾಯಿತರು ಕೊಡುವ ಸಮಾಜ, ಬೇಡುವ ಸಮಾಜವಲ್ಲ. ಬಸವಾದಿ ಶರಣರೂ ಸೇರಿ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದ ಎಲ್ಲರೂ ಸಾರ್ವಜನಿಕ ಆಸ್ತಿ ಎಂದರು.

ಸ್ವಾಮಿ ವಿವೇಕಾನಂದರು ಕೇವಲ ನಿರಂಜನ ಮಠಕ್ಕೆ ಬೇಟಿ ಕೊಡಲಿಲ್ಲ. ಸದ್ವಿದ್ಯಾ ಶಾಲೆ, ಶೇಷಾದ್ರಿ ಐಯ್ಯರ್ ಕಟ್ಟಡ, ಮತ್ತು ಅರಮನೆಗೂ ಭೇಟಿ ಕೊಟ್ಟಿದ್ದಾರೆ. ಬೇಕಿದ್ದರೆ ಅರಮನೆ ಸೇರಿ ಎಲ್ಲಾ ಕಡೆ ಸ್ಮಾರಕ ಮಾಡಲಿ ನಮ್ಮ ಅಭ್ಯಂತರವಿಲ್ಲ. ಎಲ್ಲಾ ಕಡೆ ಮಾಡಿದರೆ ನಮ್ಮ ಮಠದಲ್ಲೂ ನಾವೇ ಸ್ವಂತ ಖರ್ಚಿನಲ್ಲಿ ಸ್ಮಾರಕ ಮಾಡ್ತೀವಿ. ಸ್ಮಾರಕ ನಿರ್ಮಾಣ ಮಾಡುವುದು ಬೇಡ, ಬದಲಾಗಿ ಇಲ್ಲೊಂದು ಭಾವಚಿತ್ರವಿಟ್ಟು ನಿರಂಜನ ಮಠಕ್ಕೆ ವಿವೇಕಾನಂದರು ಭೇಟಿ ನೀಡಿದ್ದರು ಎಂದು ಬರೆಯಲಿ. ಇದು ಕಮರ್ಶಿಯಲ್ ಪ್ರಾಪರ್ಟಿ ಅಲ್ಲ ಇದು ನಮ್ಮ ಧರ್ಮ ತತ್ವದ ಸಂಕೇತ ಎಂದು ಶಂಕರ್ ಬಿದರಿ ಹೇಳಿದರು.

ಸಂಧಾನದ ಮೂಲಕ ಸಮಸ್ಯೆ ಬಗೆಯರಿಸಿಕೊಳ್ಳೋಣ..

ಸಂಧಾನದ ಮೂಲಕ ಈ ಸಮಸ್ಯೆ ಬಗೆಯರಿಸಿಕೊಳ್ಳೋಣ. ಈ ಬಗ್ಗೆ ನಾಳೆ ಮುಖ್ಯಮಂತ್ರಿಗಳಿಗೆ ಅರ್ಜಿ ಕೊಡಿ. ಈ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುವುದರಿಂದ ನಮ್ಮ ಗೌರವಕ್ಕೆ ಧಕ್ಕೆಯಾಗುತ್ತೆ. ಇದೇ ಜಾಗದಲ್ಲಿ 2 ಸಾವಿರ ಚದರ ಅಡಿಯಲ್ಲಿ ಬೇಕಾದರೇ ವಿವೇಕ ಸ್ಮಾರಕಕ್ಕೆ ಜಾಗ ನೀಡಿ ನಾವೇ ಸ್ಮಾರಕ ಮಾಡ್ತೀವಿ. ರಾಮಕೃಷ್ಣ ಆಶ್ರಮದವರ ಜೊತೆ ಸಂಪರ್ಕದ ಕೊರತೆಯಿಂದ ಈ ರೀತಿ ಆಗಿರಬಹುದು. ರಾಮಕೃಷ್ಣ ಆಶ್ರಮದವರು ಸಾಧು-ಸಂತರು, ಅವರಿಗೆ ಆಸ್ತಿ ಬಗ್ಗೆ ಆಸೆ ಇಲ್ಲ. ಈ ಹೋರಾಟ ಮುಂದುವರೆದರೆ ರಾಜ್ಯವ್ಯಾಪಿ ಹರಡಿಬಿಡುತ್ತೆ ಎಂದು ಶಂಕರ್ ಬಿದರಿ ತಿಳಿಸಿದರು.
ರಾಮಕೃಷ್ಣ ಆಶ್ರಮದವರು ಲಿಂಗಾಯಿತರ ವಿರೋಧಿಗಳಲ್ಲ. ಅವರು ನಮ್ಮನ್ನ ಎದುರು ಹಾಕಿಕೊಳ್ಳುವವರಲ್ಲ. ಹಾಗಾಗಿ ನಮಗೆ ಈ ಹೋರಾಟ ಬೆಳೆಸುವುದು ಬೇಡ. ಸಂದಾನದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳೋಣ. ರಾಮಕೃಷ್ಣ ಆಶ್ರಮದವರು ಸಂದಾನಕ್ಕೆ ಒಪ್ಪುತ್ತಾರೆ ಎಂಬ ನಂಬಿಕೆ ಇದೆ. ಆ ಸಂದಾನ ಫಲಪ್ರದ ಆಗುವವರೆಗೆ ಈ ಹೋರಾಟ ಸ್ಥಗಿತ ಮಾಡಿ ಎಂದು ಹೋರಾಟಗಾರರಿಗೆ ನಿವೃತ ಡಿಜಿ-ಐಜಿಪಿ ಶಂಕರ್ ಬಿದರಿ ಮನವಿ ಮಾಡಿದರು.

Key words: mysore-niranjana math- Retired -DG & IGP -Shankar Bidri