ಸೈಟ್ ಹಂಚುವಾಗ ಗಿಡ ಬೆಳೆಯುವುದು ಕಡ್ಡಾಯ ಮಾಡಿ : ಸಚಿವ S.T. ಸೋಮಶೇಖರ್

 

ಮೈಸೂರು, ಮೇ 21, 2020 : (www.justkannada.in news ) ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೈಟ್ ಗಳಿಗೆ ಅನುಮೋದನೆ ಕೊಡುವಾಗ ಒಂದು ಸೈಟಿಗೆ 2 ಗಿಡ ಬೆಳೆಸಬೇಕು ಎಂಬುದನ್ನು ಕಡ್ಡಾಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅಭಿಪ್ರಾಯಪಟ್ಟರು.

ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಜಿ.ಪಂ. ಸಭಾಂಗಣದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಪರಿಸರ ಸಂರಕ್ಷಣೆಗೆ ಗಿಡಗಳನ್ನು ಬೆಳಸುವುದೇ ಪರಿಹಾರ. ಆದ್ದರಿಂದ ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಜಾರಿಗೊಳಿಸಬೇಕು. ಇದೇ ವೇಳೆ, ನಿವೇಶನ ಹಂಚುವಾಗಲೂ ಸಹ ಗಿಡ ಬೆಳಸುವುದನ್ನು ಕಡ್ಡಾಯ ಮಾಡಿ ಕಂಡಿಷನ್ ವಿಧಿಸಬೇಕು. ಒಂದು ವೇಳೆ ಗಿಡ ಬೆಳೆಯದಿದ್ದರೆ, ಆಗ ನಿವೇಶನದ ಪರವಾನಗಿಯನ್ನು ಕೊಡದಂತೆ ಕಾನೂನು ಬಿಗಿಗೊಳಿಸಲು ಅಗತ್ಯ ಕ್ರಮದ ಜಾರಿಗೆ ಮುಂದಾಗುವಂತೆ ಮುಡಾ ಆಯುಕ್ತರಿಗೆ ಸಚಿವರು ಸೂಚಿಸಿದರು.

mysore-zp-meeting-incharge-minister-somashekar-environment-day-plantation

ಮೈಸೂರು ಮಾದರಿ :

ಹಸಿರೀಕರಣ ವಿಷಯದಲ್ಲಿ ಮೈಸೂರು ಮಾದರಿಯಾಗಬೇಕು. ಹೀಗಾಗಿ ಜಿಲ್ಲೆಯಲ್ಲಿ ಗಿಡ ನೆಡಬೇಕೆಂದರೆ ನಿಮ್ಮ ಬಳಿ ಎಷ್ಟು ಗಿಡಗಳಿವೆ? ಜಿಲ್ಲೆಯಲ್ಲಿರುವ 11 ಕ್ಷೇತ್ರಗಳಲ್ಲಿ ಎಷ್ಟು ಗಿಡಗಳನ್ನು ಬೆಳೆಸಬಹುದು? ಆ ಎಲ್ಲ ಕಡೆ ನೆಡುವಷ್ಟು ಗಿಡಗಳಿವೆಯೇ? ಒಂದು ಲಕ್ಷ ಸಸಿಗಳನ್ನು ಬೆಳೆಸಬೇಕೆಂದರೆ ಇರುವ ವ್ಯವಸ್ಥೆ ಏನು? ಇವುಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಕೊಡಿ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಈಗ ಗಿಡ ನೆಡುವುದಕ್ಕೆ ಮುಂಚೆ ನೆಟ್ಟ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಅಂದರೆ ರಸ್ತೆ ವಿಸ್ತರಣೆ ಮಾಡಿದರೆ, ವಿದ್ಯುತ್ ಲೈನ್ ಗಳ ಕೆಳಗೆ ಗಿಡ ನೆಟ್ಟರೆ ವರ್ಷಗಳ ಬಳಿಕ ಇನ್ನೊಂದು ಇಲಾಖೆಯವರು ಅಭಿವೃದ್ಧಿ ಕಾಮಗಾರಿ ದೃಷ್ಟಿಯಿಂದ ಕಡಿದುಹಾಕುವಂತಾಗಬಾರದು. ಈ ನಿಟ್ಟಿನಲ್ಲಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನೂ ಗಮನದಲ್ಲಿಟ್ಟುಕೊಂಡು, ಮುಂದಾಗುವ ಪರಿಣಾಮಗಳನ್ನು ಗಮನಿಸಿ ಗಿಡ ನೆಡಬೇಕು. ಇನ್ನೂ ಸಮಯಾವಕಾಶವಿದ್ದು, ಅಧ್ಯಯನ ಮಾಡಿ ವರದಿ ಕೊಡಿ ಎಂದು ಸೂಚಿಸಿದರು.

ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ನಾಗೇಂದ್ರ ಮಾತನಾಡಿ ಸಲಹೆ ನೀಡಿದರು.

ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಹೇಮಂತ್ ಕುಮಾರ್ ಮಾತನಾಡಿ, ವಿವಿ ವತಿಯಿಂದ ವಿದ್ಯಾರ್ಥಿಗಳಿಗೆ ಗಿಡಗಳನ್ನು ಬೆಳೆಯುವ ಜವಾಬ್ದಾರಿಯನ್ನು ಕೊಡಲಾಗಿದೆ. ಅವರಿಗೂ ಸಹ ಪರಿಸರ ಬೆಳೆಸುವ ಅರಿವು ಮೂಡುತ್ತದೆ. ಜೊತೆಗೆ ಅವರು ಅಭ್ಯಾಸ ಮಾಡುವಷ್ಟು ದಿನಗಳ ಕಾಲ ಆ ಗಿಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಇದಕ್ಕೆ ಅರಣ್ಯ ಇಲಾಖೆಯ ಸಹಕಾರವೂ ಬೇಕು ಎಂದು ಹೇಳಿದರು.

ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್ ಮಾತನಾಡಿ, ಪ್ರತಿ ಸಿಬ್ಬಂದಿಗೆ ತಲಾ 4 ಗಿಡಗಳನ್ನು ವಿತರಣೆ ಮಾಡುತ್ತಿದ್ದು, 2 ಗಿಡವನ್ನು ವಿವಿ ವ್ಯಾಪ್ತಿಯಲ್ಲಿ ಹಾಗೂ 2 ಗಿಡಗಳನ್ನು ಅವರ ಮನೆಯಲ್ಲಿ ನೆಡಲು ವ್ಯವಸ್ಥೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ, ಜಿಪಂ ಕಾರ್ಯನಿರ್ವಹಣಾಧಿಕಾರಿ ತಾವು ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಕೆಲವು ಕಡೆ ವಿದ್ಯುತ್ ತಂತಿಗಳ ಕೆಳಗೆ ಬೆಳೆಯುವ ಪರಿಪಾಠ ಬಿಡಬೇಕು. ಆ ಗಿಡಗಳು ಬೆಳೆದ ಬಳಿಕ ಲೈನ್ ಗಳಿಗೆ ತಾಗುವುದರಿಂದ ವಿದ್ಯುತ್ ಇಲಾಖೆ ಸಿಬ್ಬಂದಿ ಅವುಗಳನ್ನು ಕಡಿಯಬೇಕಾಗುತ್ತದೆ. ಜೊತೆಗೆ ನಗರಗಳಲ್ಲಿ ಗಟ್ಟಿ ಇರುವ ಮರಗಳ ತಳಿಗಳನ್ನು ಬೆಳೆಸಿದರೆ ಉತ್ತಮ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

key words : mysore-zp-meeting-incharge-minister-somashekar-environment-day-plantation

Make planting a must when allotting the sites: District charge Minister S.T.Somasekhar at Mysore