ತೀವ್ರ ಸ್ವರೂಪ ಪಡೆದ ನೀಟ್ ಹೋರಾಟ: ದೇಶಾದ್ಯಂತ ಬಿಜೆಪಿ-ಕಾಂಗ್ರೆಸ್ ಪರಸ್ಪರ ಪ್ರತಿಭಟನೆ, ಕಲ್ಲು ತೂರಾಟ

ನವದೆಹಲಿ,ಜುಲೈ,22,2026 (www.justkannada.in):  ನೀಟ್ ಅಕ್ರಮ ವಿರೋಧಿಸಿ  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಇತ್ತ ವಿದ್ಯಾರ್ಥಿಗಳ  ಹೋರಾಟ ತೀವ್ರ ಸ್ವರೂಪ ಪಡೆದರೇ ಅತ್ತ ದೇಶಾದ್ಯಂತ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಪ್ರತಿಭಟನೆ ಮಾಡಿ ಕಲ್ಲುತೂರಾಟ ನಡೆಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪ್ರಧಾನಿ ಮೋದಿ ನಿವಾಸದ ಎದುರು ಪ್ರತಿಭಟನೆ ನಡೆಸಿದ ವೇಳೆ ರಾಹುಲ್ ಗಾಂಧಿ ಬಂಧನವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಪ್ರತಿಭಟನೆ ನಡೆಸಿದೆ.

ಇತ್ತ  ಪ್ರಧಾನಿ ಮೋದಿ ನಿವಾದೆದುರು ಕಾಂಗ್ರೆಸ್ ‍ಪ್ರತಿಭಟಿಸಿದ್ದನ್ನು ಖಂಡಿಸಿ ಬಿಜೆಪಿಯು  ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದೆ.

ಇಂದು ರಾಜಸ್ತಾನ, ಗುಜರಾತ್ ಬಿಹಾರ, ಕರ್ನಾಟಕ, ತೆಲಂಗಾಣ ಸೇರಿ ಹಲವು ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಪ್ರತಿಭಟಿಸಿ ದೊಣ್ಣೆ ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ.

ಹೈದರಾಬಾದ್ ಮತ್ತು ಪಾಟ್ನಾ ನಗರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಲಾಠಿ ಹಾಗೂ ಕಲ್ಲು ತೂರಾಟ ನಡೆದಿರುವ ಘಟನೆಗಳು ವರದಿಯಾಗಿವೆ.ಈ ಘರ್ಷಣೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ತೆಲಂಗಾಣ ಬಿಜೆಪಿ ರಾಜ್ಯ ಕಚೇರಿ ಇರುವ ನಾಂಪಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಆಗಮಿಸಿದ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ಲಾಠಿ ಹಾಗೂ ಕಲ್ಲು ತೂರಾಟಕ್ಕೆ ತಿರುಗಿತು.

ಬಿಹಾರ ಪಾಟ್ನಾದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ದೊಣ್ಣೆ ಹಿಡಿದುಕೊಂಡು ಹೊಡೆದಾಟ ನಡೆಸಿದ್ದಾರೆ ಎನ್ನಲಾಗಿದೆ. ಹಾಗೆಯೇ ರಾಜಸ್ತಾನದಲ್ಲಿ ಪ್ರತಿಭಟನೆ ತಾರಕಕ್ಕೇರಿದ್ದು, ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆಗೆ ಹಾಕಲು ಯತ್ನಿಸಿದ್ದು ಈ ವೇಳೆ ಉದ್ರಿಕ್ತರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.

Key words: NEET, BJP-Congress, across, country, stone pelting