ಮೈಸೂರು, ನವೆಂಬರ್,7,2026 (www.justkannada.in): ಸ್ವಚ್ಛ ಸರ್ವೇಕ್ಷಣ್ 2025–26ರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಮೈಸೂರು ನಗರಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಅಧಿಕೃತ ಆಹ್ವಾನ ದೊರೆತಿದೆ. ಸಚಿವಾಲಯವು ಕಳುಹಿಸಿರುವ ಪ್ರಶಸ್ತಿ ಪುರಸ್ಕೃತ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿದೆ.
ದಿನಾಂಕ 11 ನವೆಂಬರ್ 2026ರಂದು ಬೆಳಿಗ್ಗೆ 10 ಗಂಟೆಯಿಂದ ನವದೆಹಲಿಯ ವಿಜ್ಞಾನ ಭವನದಲ್ಲಿ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಘನ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮೈಸೂರಿಗೆ ಯಾವ ವಿಭಾಗದಲ್ಲಿ ಪ್ರಶಸ್ತಿ ಲಭಿಸಲಿದೆ ಎಂಬ ವಿವರ ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಪ್ರಶಸ್ತಿ ಸ್ವೀಕರಿಸಲು ಅಧಿಕೃತ ಆಹ್ವಾನ ಬಂದಿದ್ದು, ಪ್ರಶಸ್ತಿಯ ವಿಭಾಗ ಹಾಗೂ ಇತರ ವಿವರಗಳು ಅಧಿಕೃತವಾಗಿ ಪ್ರಕಟವಾದ ಬಳಿಕ ತಿಳಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ತಿಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಲು ಮೈಸೂರಿಗೆ ಆಹ್ವಾನ ಸಂತಸದ ಸಂಗತಿ- ಸಂಸದ ಯದುವೀರ್
“ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಮೈಸೂರಿಗೆ ಆಹ್ವಾನ ಬಂದಿರುವುದು ಸಂತಸದ ಸಂಗತಿ. ನಗರದ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಹಾಗೂ ಸಹಕರಿಸುತ್ತಿರುವ ನಾಗರಿಕರಿಗೆ ಅಭಿನಂದನೆಗಳು. ಮೈಸೂರಿನ ಸ್ವಚ್ಛತೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ರಾಜ್ಯಕ್ಕೆ ಹೆಮ್ಮೆಯ ವಿಷಯ- ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ
“ರಾಷ್ಟ್ರಪತಿಗಳ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೈಸೂರು ಆಹ್ವಾನಿತವಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ಪ್ರಶಸ್ತಿಯ ವಿಭಾಗ ಇನ್ನಷ್ಟೇ ಅಧಿಕೃತವಾಗಿ ಪ್ರಕಟವಾಗಬೇಕಿದೆ. ಈ ಸಾಧನೆಗಾಗಿ ಶ್ರಮಿಸಿದ ಪೌರಕಾರ್ಮಿಕರು, ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮೈಸೂರಿನ ನಾಗರಿಕರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ಪ್ರತಿಕ್ರಿಯಿಸಿ, ನಗರದ ಸ್ವಚ್ಛತೆ ಕಾಪಾಡುವಲ್ಲಿ ಕೈಜೋಡಿಸಿರುವ ಪೌರಕಾರ್ಮಿಕರು, ಸಂಘಸಂಸ್ಥೆಗಳು, ಸಾರ್ವಜನಿಕರು ಹಾಗೂ ಎಲ್ಲ ಭಾಗೀದಾರರಿಗೆ ಮೈಸೂರು ಮಹಾನಗರಪಾಲಿಕೆ ಕೃತಜ್ಞತೆ ಸಲ್ಲಿಸುತ್ತದೆ ಎಂದಿದ್ದಾರೆ.






