ತಿಂಗಳುಗಳಿಂದ ಕ್ಯಾಮೆರಾಗಳು ಬಂದ್; ಸಂಚಾರ ನಿಯಮ ಉಲ್ಲಂಘನೆ, ಅಪರಾಧ ನಿಯಂತ್ರಣದ ಮೇಲ್ವಿಚಾರಣೆಗೆ ಹೊಡೆತ
ಮೈಸೂರು, ಸೆ.28, 2026: ನಾಡಹಬ್ಬ ಮೈಸೂರು ದಸರಾ ಸಮೀಪಿಸುತ್ತಿರುವ ಬೆನ್ನಲ್ಲೇ, ನಗರದಲ್ಲಿ ಸಂಚಾರ ನಿಯಮಗಳ ಪಾಲನೆ ಹಾಗೂ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಅಳವಡಿಸಲಾಗಿದ್ದ ITMS (Intelligent Traffic Management System) ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದ್ದ ಈ ಕಣ್ಗಾವಲು ವ್ಯವಸ್ಥೆಯೇ ಇದೀಗ ಸ್ಥಗಿತಗೊಂಡಿರುವುದರಿಂದ, ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ, ದಂಡ ವಿಧಿಸುವ ಪ್ರಕ್ರಿಯೆ ಹಾಗೂ ಅಪರಾಧ ಪ್ರಕರಣಗಳಲ್ಲಿ ಶಂಕಿತರ ಪತ್ತೆ ಸೇರಿದಂತೆ ಹಲವು ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬೇಕಿದ್ದ ಕ್ಯಾಮೆರಾಗಳೇ ಸ್ಥಗಿತ
ನಗರದ ಪ್ರಮುಖ ರಸ್ತೆ, ಜಂಕ್ಷನ್ಗಳು ಹಾಗೂ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ITMS ಕ್ಯಾಮೆರಾಗಳ ಪ್ರಮುಖ ಉದ್ದೇಶ ಸಂಚಾರ ನಿಯಮ ಉಲ್ಲಂಘನೆಗಳನ್ನು ಗುರುತಿಸಿ, ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿತ್ತು.
ಆದರೆ ಕಳೆದ ಒಂದೂವರೆ–ಎರಡು ತಿಂಗಳಿಂದ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಪರಿಣಾಮವಾಗಿ ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದೆ ಎಂಬುದು ನಾಗರಿಕರ ಆರೋಪವಾಗಿದೆ.

AMC ನವೀಕರಣವಾಗದಿರುವುದೇ ಕಾರಣವೇ?
Just Kannadaಗೆ ಲಭ್ಯವಾಗಿರುವ ಮೂಲಗಳ ಮಾಹಿತಿ ಪ್ರಕಾರ, ITMS ವ್ಯವಸ್ಥೆಯ ನಿರ್ವಹಣೆಗೆ ಸಂಬಂಧಿಸಿದ AMC (Annual Maintenance Contract) ನವೀಕರಣವಾಗದ ಹಿನ್ನೆಲೆಯಲ್ಲಿ ಕ್ಯಾಮೆರಾಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ.
ಇದು ನಿಜವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಂತ ಮಹತ್ವದ ಕಣ್ಗಾವಲು ವ್ಯವಸ್ಥೆ ಕೇವಲ ನಿರ್ವಹಣಾ ಒಪ್ಪಂದ ನವೀಕರಣದ ಕೊರತೆಯಿಂದ ಸ್ಥಗಿತಗೊಂಡಿದ್ದರೆ, ಇದರ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯೂ ಎದುರಾಗಿದೆ.
ಮೈಸೂರು ಮಾತ್ರವಲ್ಲ, ರಾಜ್ಯಾದ್ಯಂತ ಸಮಸ್ಯೆ?
ಮೂಲಗಳ ಪ್ರಕಾರ, ITMS ವ್ಯವಸ್ಥೆ ರಾಜ್ಯಾದ್ಯಂತ ಒಂದೇ ವ್ಯವಸ್ಥೆ/ಕಂಪನಿಯ ನಿರ್ವಹಣೆಯಡಿ ಇರುವುದರಿಂದ ಸಮಸ್ಯೆ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ ಎನ್ನಲಾಗಿದೆ. ರಾಜ್ಯದ ಹಲವು ನಗರಗಳಲ್ಲಿಯೂ ITMS ಕ್ಯಾಮೆರಾಗಳ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟನೆ ನೀಡಬೇಕಾಗಿದೆ.

ದಸರಾ ಸಂದರ್ಭದಲ್ಲಿ ಆತಂಕ ಹೆಚ್ಚಳ
ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ನಗರದಲ್ಲಿ ದಸರಾ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುವುದರ ಜೊತೆಗೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಭದ್ರತೆ ಮತ್ತು ಅಪರಾಧ ನಿಯಂತ್ರಣವೂ ಪೊಲೀಸರಿಗೆ ದೊಡ್ಡ ಸವಾಲಾಗಲಿದೆ. ಇಂತಹ ಸಂದರ್ಭದಲ್ಲಿ ಪೊಲೀಸರ ಕಣ್ಣಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ನಗರದ CCTV ಹಾಗೂ ITMS ಕಣ್ಗಾವಲು ವ್ಯವಸ್ಥೆಯೇ ಸ್ಥಗಿತಗೊಂಡಿರುವುದು ಗಂಭೀರ ವಿಚಾರವಾಗಿದೆ.

ಅಪರಾಧ ಪತ್ತೆಗೂ CCTV ಪ್ರಮುಖ ಅಸ್ತ್ರ
CCTV ಕ್ಯಾಮೆರಾಗಳು ಕೇವಲ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಮಾತ್ರವಲ್ಲದೆ, ಅಪರಾಧ ಪ್ರಕರಣಗಳ ತನಿಖೆಯಲ್ಲಿಯೂ ಪೊಲೀಸರಿಗೆ ಮಹತ್ವದ ನೆರವು ನೀಡುತ್ತವೆ. ಕಳೆದ ದಸರಾ ಸಂದರ್ಭದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ CCTV ದೃಶ್ಯಾವಳಿಗಳು ತನಿಖೆಗೆ ನೆರವಾಗಿದ್ದು, ಪೊಲೀಸರು ಆರೋಪಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಗಮನಾರ್ಹ.
ಹೀಗಿರುವಾಗ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ದಸರಾ ಸಂದರ್ಭದಲ್ಲಿ ನಗರದ ಪ್ರಮುಖ ಸ್ಥಳಗಳ ಮೇಲೆ ನಿರಂತರ ಕಣ್ಗಾವಲು ಅಗತ್ಯವಿರುವಾಗ ITMS ವ್ಯವಸ್ಥೆ ಸ್ಥಗಿತಗೊಂಡಿರುವುದು ಭದ್ರತಾ ದೃಷ್ಟಿಯಿಂದಲೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದಸರಾಗೆ ಕೋಟ್ಯಂತರ ರೂ. ಖರ್ಚು; ಕಣ್ಗಾವಲು ವ್ಯವಸ್ಥೆಗೆ ನಿರ್ಲಕ್ಷ್ಯ?
ಮೈಸೂರು ದಸರಾ ಮಹೋತ್ಸವಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ನಗರ ಸಿಂಗಾರ, ವಿದ್ಯುತ್ ದೀಪಾಲಂಕಾರ, ಕಾರ್ಯಕ್ರಮಗಳು, ಮೂಲಸೌಕರ್ಯ ಸೇರಿದಂತೆ ವಿವಿಧ ವ್ಯವಸ್ಥೆಗಳಿಗೆ ಭಾರಿ ಪ್ರಮಾಣದ ಹಣ ವಿನಿಯೋಗಿಸಲಾಗುತ್ತಿದೆ.
ಆದರೆ, ನಗರದ ಸಂಚಾರ ನಿಯಂತ್ರಣ ಹಾಗೂ ಅಪರಾಧ ಪತ್ತೆಗೆ ನೇರವಾಗಿ ನೆರವಾಗುವ ITMS ವ್ಯವಸ್ಥೆಯನ್ನು ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯವಿರುವ ನಿರ್ವಹಣಾ ಕ್ರಮಕ್ಕೆ ಮಾತ್ರ ಏಕೆ ವಿಳಂಬ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಒಂದೆಡೆ ದಸರಾ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದರೆ, ಮತ್ತೊಂದೆಡೆ ನಗರ ಭದ್ರತೆ ಮತ್ತು ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ತಂತ್ರಜ್ಞಾನ ವ್ಯವಸ್ಥೆ ತಿಂಗಳುಗಟ್ಟಲೆ ಸ್ಥಗಿತಗೊಂಡಿರುವುದು ಆಡಳಿತದ ಆದ್ಯತೆಗಳ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.

ಸರ್ಕಾರ–ಪೊಲೀಸ್ ಇಲಾಖೆಯಿಂದ ಸ್ಪಷ್ಟನೆಗೆ ಆಗ್ರಹ :
ದಸರಾ ಆರಂಭಕ್ಕೂ ಮುನ್ನವೇ ITMS ಕ್ಯಾಮೆರಾಗಳನ್ನು ತಕ್ಷಣ ಕಾರ್ಯಗತಗೊಳಿಸಬೇಕು, AMC ನವೀಕರಣವಾಗದಿದ್ದರೆ ಅದರ ಕಾರಣವೇನು, ಒಪ್ಪಂದ ನವೀಕರಣಕ್ಕೆ ಏಕೆ ವಿಳಂಬವಾಯಿತು, ಇದರಿಂದ ಸರ್ಕಾರಕ್ಕೆ ಅಥವಾ ಸಾರ್ವಜನಿಕರಿಗೆ ಉಂಟಾಗಿರುವ ನಷ್ಟವೇನು ಹಾಗೂ ರಾಜ್ಯಾದ್ಯಂತ ಇದೇ ಸಮಸ್ಯೆ ಇದೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಮಾಹಿತಿ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ದಸರಾ ಸಂದರ್ಭದಲ್ಲಿ ಲಕ್ಷಾಂತರ ಜನರ ಸುರಕ್ಷತೆ, ಸಂಚಾರ ನಿಯಂತ್ರಣ ಮತ್ತು ಅಪರಾಧ ತಡೆಗೆ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆ ಅತ್ಯಗತ್ಯ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಳವಡಿಸಿದ ವ್ಯವಸ್ಥೆ ಬಳಕೆಯಲ್ಲೇ ಇಲ್ಲದಿದ್ದರೆ, ಅದು ಸಾರ್ವಜನಿಕ ಹಣದ ಸದುಪಯೋಗದ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ.
ದಸರಾ ಆರಂಭಕ್ಕೂ ಮುನ್ನ ITMS ಕ್ಯಾಮೆರಾಗಳನ್ನು ಮರುಕಾರ್ಯಗತಗೊಳಿಸಿ, ನಗರದ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು ಪೊಲೀಸ್ ಇಲಾಖೆ ಮತ್ತು ಸರ್ಕಾರದ ತುರ್ತು ಆದ್ಯತೆಯಾಗಬೇಕಿದೆ.

KEY WORDS:
Mysuru Dasara 2026, Mysuru ITMS cameras, Intelligent Traffic Management System, Mysuru, Mysuru traffic violations, Mysuru crime surveillance, Mysuru traffic cameras, Mysuru police, surveillance, Mysuru Dasara, traffic management







