ಮೈಸೂರು, ಸೆ.೧೨,೨೦೨೬: ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಳಿದಾಸ ರಸ್ತೆಯ ಜಯಲಕ್ಷ್ಮಿಪುರಂನಲ್ಲಿರುವ ಬೃಂದಾವನ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ ನಗರದ ವಿವಿಧ ವಲಯಗಳ 25 ವಾರ್ಡ್‌ಗಳ 320 ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ., ನಗರದ ಸ್ವಚ್ಛತೆಗಾಗಿ ಕಠಿಣ ಪರಿಶ್ರಮ ಪಡುತ್ತಿರುವ ಸ್ವಚ್ಛತಾ ಕಾರ್ಮಿಕರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು. ಪೌರಕಾರ್ಮಿಕರ ಆರೋಗ್ಯಕ್ಕಾಗಿ ಮುಂದೆ ಬಂದು ಸಹಭಾಗಿತ್ವ ವಹಿಸಿರುವ ವಿವಿಧ ಆಸ್ಪತ್ರೆಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ನಗರದ ಇನ್ನಷ್ಟು ಪ್ರತಿಷ್ಠಿತ ಆಸ್ಪತ್ರೆಗಳು ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬೃಂದಾವನ ಆಸ್ಪತ್ರೆಯ ಡಾ. ಗುರುರಾಜ್ ಮಾತನಾಡಿ, ಪೌರಕಾರ್ಮಿಕರ ಆರೋಗ್ಯಕ್ಕಾಗಿ ನಡೆಯುತ್ತಿರುವ ಈ ಉತ್ತಮ ಕಾರ್ಯದಲ್ಲಿ ಭಾಗಿಯಾಗಲು ಸಂತೋಷವಾಗಿದೆ ಎಂದರು. ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ರಕ್ತ ಪರೀಕ್ಷೆ, ಇಸಿಜಿ, ಎಕ್ಸ್‌ರೇ, ಕಣ್ಣಿನ ತಪಾಸಣೆ, ಅಲ್ಟ್ರಾಸೌಂಡ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.

ವಿವಿಧ ವಲಯಗಳಲ್ಲಿ ಆರ್ಯಾ, ವೀನಸ್, ಅರವಿಂದ್, ಫಣೀಶ್, ಜಿಸಿ’ಸ್, ಕಾಮಾಕ್ಷಿ, ಸುಯೋಗ, ಬೃಂದಾವನ, ಭಾರತ್ ಕ್ಯಾನ್ಸರ್, ಎಎಸ್‌ಜಿ ಐ ಮತ್ತು ಸೇಂಟ್ ಜೋಸೆಫ್ ಆಸ್ಪತ್ರೆಗಳು ಸೇರಿದಂತೆ ಹಲವು ಆಸ್ಪತ್ರೆಗಳು ಪೌರಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ಸಹಭಾಗಿತ್ವ ವಹಿಸಿದ್ದವು.
ಕಾರ್ಯಕ್ರಮದಲ್ಲಿ ವಲಯ ಆಯುಕ್ತ ಮಹೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಧುಕರ್, ಮೃತ್ಯುಂಜಯ, ಪರಿಸರ ಅಭಿಯಂತರ ಶ್ರೀದೇವಿ, ಆರೋಗ್ಯ ನಿರೀಕ್ಷಕರಾದ ಪ್ರಕಾಶ್, ಹರೀಶ್ ಹಾಗೂ ರಾಜೇಶ್ವರಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Free Health Check-Up, Mysuru Civic Workers, MCC, Corporation, Hospital

ENGLISH SUMMARY:
Free Health Check-Up for Mysuru Civic Workers
Mysuru: A free health check-up camp was organized for civic workers at Brundhavan Hospital, Jayalakshmi Puram, Mysuru.
Mysuru City Corporation Commissioner Savitha M.K. said protecting the health of sanitation workers who keep the city clean is everyone’s responsibility. She appreciated the hospitals supporting the initiative and urged more hospitals to join such welfare programs.

Dr. Gururaj of Brundhavan Hospital advised civic workers to take greater care of their health. A total of 320 civic workers from 25 wards underwent free tests, including blood tests, ECG, X-ray, eye check-ups and ultrasound. Several reputed hospitals participated in the initiative.







