MYSORE UNIVERSITY : ಅಭಿನಂಧನಾ ಸಮಾರಂಭದಲ್ಲಿ ಕುಲಪತಿ ಭಾವುಕ..

 

ಮೈಸೂರು, ನ.14, 2022 (www.justkannada.in news) : ಮೈಸೂರು ವಿವಿಗೆ ಕುಲಪತಿಯಾಗಿ ನೇಮಕಗೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ನನಗೆ ಅಷ್ಟೇ ಸುಲಭವಾಗಿ ಸಿಕ್ಕಿತ್ತು. ಇದಕ್ಕೆ ನನ್ನ ಸ್ವಂತಃ ಪರಿಶ್ರಮ ಜತೆಗೆ ನನ್ನ ಹಿತೈಷಿಗಳು, ಗುರುಗಳು ಹಾಗೂ ಸಹದ್ಯೋಗಿಗಳು ಕಾರಣ. 4 ವರ್ಷ ಉತ್ತಮವಾಗಿ ಕೆಲಸ ಮಾಡಿದ ಸಾರ್ಥಕತೆ ಇದೆ ಎಂದು ಪ್ರೊ.ಜಿ.ಹೇಮಂತ್ ಕುಮಾರ್ ಭಾವುಕರಾದರು.

ನಗರದ ಕ್ರಾಫರ್ಡ್ ಹಾಲ್‌ನಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದು ಹೀಗೆ…

ಜೆಎಸ್‌ಎಸ್ ಸಂಸ್ಥೆಯಲ್ಲಿ ಪ್ರೌಢಶಾಲೆ ಶಿಕ್ಷಕನಾಗಿ ನಾನು ವೃತ್ತಿ ಆರಂಭಿಸಿದೆ. ಮೈವಿವಿಯಲ್ಲೇ ಓದಿದೆ, ಉಪನ್ಯಾಸಕನಾದೆ. ಡೀನ್ ಆದೆ. ಇದೀಗ ಕುಲಪತಿಯಾಗಿಯೂ ಕಾರ್ಯ ನಿರ್ವಹಿಸಿದ ಖುಷಿ ಇದೆ. ಈ ಸಂದರ್ಭದಲ್ಲಿ ನನ್ನ ಏಳಿಗೆಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ನಾನು ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ಮೊದಲ ಬ್ಯಾಚ್‌ನ ವಿದ್ಯಾರ್ಥಿ. ಜೊತೆಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್.ಡಿ ಪಡೆದ ಮೊದಲ ವಿದ್ಯಾರ್ಥಿ. ಪ್ರೊ.ಪಿ.ನಾಗಭೂಷಣ್, ಪ್ರೊ.ಶಶಿಧರ್ ಪ್ರಸಾದ್, ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ತಳವಾರ್ ಸೇರಿದಂತೆ ಎಲ್ಲರೂ ಪ್ರೇರಣೆ ನೀಡಿದ್ದಾರೆ. ವಿವಿಯಲ್ಲಿ 1750 ಜನ ಪಿಂಚಣಿದಾರರು ಇದ್ದಾರೆ. 240 ಕಾಲೇಜುಗಳಿವೆ ಇದನ್ನೆಲ್ಲಾ ನಿರ್ವಹಣೆ ಮಾಡಬೇಕಾದ ಸವಾಲಿತ್ತು. ಪ್ರಾಧ್ಯಾಪಕರಿಗೆ ಬಡ್ತಿ ನೀಡಿದೆ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡೆ ಎಂದರು.

ಹಿಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ, ಈಗಿನ ಸಿಎಂ ಬಸವರಾಜ್ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಎಲ್ಲರೂ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿದ ಪರಿಣಾಮ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು. ಪದವಿ, ಸ್ನಾತಕೋತ್ತರ ಮಾಡಿದ ಬಹುತೇಕರು ಡಿ ಗ್ರೂಪ್ ಕೆಲಸ ಕೊಡಿ ಎಂದು ನನ್ನ ಬಳಿ ಬರುತ್ತಿದ್ದರು. ಹಾಗಾಗಿ ‘ಕಮ್ ಆರ್ ಅಪ್’ (come or up) ಎಂಬ ಪ್ರಾಜೆಕ್ಟ್ ಶುರು ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 7 ಕೋಟಿ ನೆರವು ನೀಡಿದ್ದಾರೆ. ತರಬೇತಿ ಜೊತೆಗೆ ಉದ್ಯೋಗ ಕಟ್ಟಿಕೊಳ್ಳಲು ಇದರಿಂದ ಹಲವರಿಗೆ ಸಾಧ್ಯವಾಯಿತು. ಹಾಗಾಗಿ ಅವರಿಗೂ ನಾನು ಕೃತಜ್ಞನೆ ಸಲ್ಲಿಸುತ್ತೇನೆ ಎಂದರು.

ಕೋವಿಡ್ ಸಮಯದಲ್ಲಿ ವಿವಿ ಅಭಿವೃದ್ಧಿ ಕೆಲಸಕ್ಕೆ, ವೇತನ ನಿರ್ವಹಣೆ ಮಾಡುವಾಗಲೂ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಹಣಕಾಸು ಅಧಿಕಾರಿ, ಸಿಂಡಿಕೇಟ್ ಸದಸ್ಯರ ಬೆಂಬಲ ನಾನು ಮರೆಯುವುದಿಲ್ಲ. ಈ ನಾಲ್ಕು ವರ್ಷದ ಅವಧಿಯಲ್ಲಿ ನನಗೆ ಎಲ್ಲರ ಸಹಕಾರ ಸಿಕ್ಕಿದೆ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಹೇಮಂತ ಕುಮಾರ್ ಹಾಗೂ ಜೆಎಸ್‌ಎಸ್ ನಡುವೆ ಒಂದು ಅವಿನಾಭಾವ ಸಂಬಂಧ ಇದೆ. ವಿವಿ ಆರಂಭವಾದ ದಿನಗಳಲಿ 14 ಜಿಲ್ಲೆಗಳು ಬರುತ್ತಿದ್ದವು. ಈಗ 4 ಜಿಲ್ಲೆಗೆ ಸೀಮಿತವಾಗಿದೆ. ವಿವಿ ಗಾತ್ರದಲ್ಲಿ ದೊಡ್ಡದು, ಚಿಕ್ಕದು ಎಂಬುದಕ್ಕಿಂತ ಗುಣಾತ್ಮಕತೆ ತುಂಬಾ ಮುಖ್ಯ. ಹೇಮಂತ ಕುಮಾರ್ ಅವರು ಜ್ಞಾನ ಪಿಪಾಸುಗಳಾಗಿದ್ದರು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಎನ್.ಎಸ್.ರಾಮೇಗೌಡ, ಪ್ರೊ.ಆರ್.ನಿರಂಜನ, ಮೈವಿವಿ ವಿಶೇಷಾಧಿಕಾರಿ ಡಾ.ಚೇತನ್ ಸೇರಿದಂತೆ ಇತರರು ಇದ್ದರು.

key words : Mysore-university-vc-hemanth.kumar-felicitation