ಪ್ರಧಾನಿ ಮೋದಿ ಸೂಚಿಸಿದ ಅಷ್ಟೂ ನಿಯಮಗಳನ್ನು ಮೈಸೂರು ಪೊಲೀಸರು ಅನುಸರಿಸಿದ್ದಾರೆ : ಸಚಿವದ್ವಯರ ಶ್ಲಾಘನೆ..

 

ಮೈಸೂರು, ಮೇ 22, 2020 : ( www.justkannada.in news ) ನಾನು ಮೈಸೂರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಗ್ರಾಮೀಣ ಹಾಗೂ ನಗರ ಕ್ಷೇತ್ರಗಳಲ್ಲಿ ಸಭೆ ನಡೆಸಿದೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಕಾರ್ಯನಿರ್ವಹಿಸಿದ ರೀತಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತೇ ವಿನಹ ಯಾರೂ ಸಹ ಕೆಲಸ ಕಾರ್ಯಗಳ ಮೇಲೆ ಬೆರಳು ತೋರಿಸಿಲ್ಲ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಮೈಸೂರು ಜಿಲ್ಲಾ ಪೊಲೀಸರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಪೊಲೀಸರು ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ಪೊಲೀಸ್ ಇಲಾಖೆ ಸಮನ್ವಯ ಹೊಂದಿ ಕಾರ್ಯನಿರ್ವಹಿಸಿದ್ದರ ಪರಿಣಾಮ ರಾಜ್ಯದಲ್ಲೇ ಹೆಚ್ಚಿದ್ದ ಕೊರೋನಾ ಸೋಂಕು ಪ್ರಕರಣ ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು.

ಮೈಸೂರಿಗೆ ಬಂದು ತಮ್ಮಲ್ಲರಿಗೂ ಧನ್ಯವಾದ ಅರ್ಪಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೆ. ಅವರೂ ಒಪ್ಪಿದ್ದರು. ಹಾಗಾಗಿ ನಾನು ಇನ್ನೊಮ್ಮೆ ಈ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಈ ಮಾಸಾಂತ್ಯದ ನಂತರ ಕರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

 Mysore-police-are-doing-good-home-minister-appreciate

ಇಂದು ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣವಾಗುವಲ್ಲಿ ಪೊಲೀಸರ ಪಾತ್ರ ಬಹಳ ಇದೆ. ಇದೇ ವೇಳೆ ಎಲ್ಲ ಪೊಲೀಸರ ಬೆನ್ನಿಗೆ ಗೃಹಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ನಿಂತಿದ್ದಾರೆ. ಮೈಸೂರು ಪೊಲೀಸರ ಸೇವೆ ಬಗ್ಗೆ ನಾನು ಅವರನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ವಿವರಿಸಲು ಹೋದಾಗ, ಮೊದಲೇ ತಾವು ವರದಿ ತರಿಸಿಕೊಂಡಿದ್ದು, ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದ್ದರು ಎಂದು ಸಚಿವರು ತಿಳಿಸಿದರು.

ಬೆಂಗಳೂರಿನ ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದವರನ್ನು ಬಂಧಿಸುವ ನಿಟ್ಟಿನಲ್ಲಿ ಸ್ವತಃ ಸಚಿವರೇ ಸ್ಥಳದಲ್ಲಿ ಖುದ್ದು ನಿಂತು ಆರೋಪಿಗಳನ್ನು ಸೆರೆ ಹಿಡಿಸಿದ್ದವರು ಎಂದು ಗೃಹಸಚಿವರ ಕಾರ್ಯವೈಖರಿಯನ್ನು ಸಚಿವ ಸೋಮಶೇಖರ್ ಪ್ರಶಂಸಿಸಿದರು.

ಪೊಲೀಸರ ಕಾರ್ಯ ಶ್ಲಾಘಿಸಿದ ಗೃಹಸಚಿವರು

 Mysore-police-are-doing-good-home-minister-appreciate

ಕೊರೋನಾ ಹೋರಾಟದಲ್ಲಿ ಮೈಸೂರಿನ ಪಾತ್ರ ಮಹತ್ವದ್ದಾಗಿದೆ. ಇದಕ್ಕೆ ಜಿಲ್ಲೆಯ ಪೊಲೀಸರ ಕಾರ್ಯ ಮಹತ್ವದ್ದು, ರಾಜ್ಯಕ್ಕೇ ಇಲ್ಲಿನ ನಿರ್ವಹಣೆ ಮಾದರಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರು ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ ಅಷ್ಟೂ ನಿಯಮಗಳನ್ನು ಅನುಸರಿಸಿದ್ದಾರೆ. ಇದಕ್ಕೆ ನಾನು ಅಭಿನಂದನೆಯನ್ನು ಅರ್ಪಿಸುತ್ತೇನೆ. ವಲಸೆ ಕಾರ್ಮಿಕರನ್ನು ಇಲ್ಲಿಂದ ಕಳುಹಿಸುವುದರಿಂದ ಬೇರೆ ರಾಜ್ಯಗಳಿಂದ ಕರೆತರುವುದು ಸೇರಿ ಅವರನ್ನು ಪರೀಕ್ಷೆಗೊಳಪಡಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡಿದೆ ಎಂದರು.

ರಾಜ್ಯಕ್ಕೆ ಬಂದ ಎಲ್ಲ ತಬ್ಲಿಘಿಗಳನ್ನು ಗುರುತಿಸಿ ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಕೆಲಸವನ್ನು ಕರ್ನಾಟಕ ಪೊಲೀಸರು ಮಾಡಿದ್ದಾರೆ. ಜೊತೆಗೆ ಬೇರೆ ರಾಜ್ಯಗಳಲ್ಲಿರುವ ತಬ್ಲಿಘೆಗಳನ್ನು ಪತ್ತೆ ಹಚ್ಚಿ ಅವರ ಬಗ್ಗೆ ಆ ರಾಜ್ಯದವರಿಗೆ ದೂರವಾಣಿ ಸಂಖ್ಯೆ ಸಹಿತ ಮಾಹಿತಿಯನ್ನು ನೀಡಲಾಗಿದೆ. ಇಂಥ ಕೆಲಸವನ್ನು ಮಾಡಿದ ಏಕೈಕ ರಾಜ್ಯ ಕರ್ನಾಟಕ ಎಂದು ತಿಳಿಸಿದರು.

ಈಗ ಕೆಲವು ಕಡೆ ಕ್ರೈಂಗಳು ಹೆಚ್ಚಿದ್ದರೂ ಅದನ್ನೂ ನಿರ್ವಹಿಸುವುದರ ಜೊತೆಗೆ ಕೊರೋನಾದಂತಹ ಪ್ರಕರಣಗಳಲ್ಲೂ ಯಶಸ್ವಿಯಾಗಿ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ. ಇಂಥ ಕಾರ್ಯವನ್ನು ಮುಂದೂ ಮುಂದುವರಿಸಿಕೊಂಡು ಹೋಗಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಆರೋಗ್ಯ ಕಾಪಾಡಿಕೊಳ್ಳಿ

ಪೊಲೀಸರ ಆರೋಗ್ಯ ಬಹಳ ಮುಖ್ಯ. ಹೀಗಾಗಿ ನೀವು ಆರೋಗ್ಯ ಕಾಪಾಡಿಕೊಳ್ಳಬೇಕು. ನಿಮಗೆ ಸಿಗಬೇಕಾದ ಸೌಲಭ್ಯವನ್ನು ನೀಡುವಂತೆ ನಾನೂ ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಐಜಿ ದಕ್ಷಿಣ ವಲಯ. ಶಾಸಕರಾದ ನಾಗೇಂದ್ರ ಇದ್ದರು

key words : Mysore-police-are-doing-good-home-minister-appreciate