ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್  ಯೋಜನೆ ರದ್ಧತಿಗೆ ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ಜೂನ್,17,2022(www.justkannada.in):  ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಅಗ್ನಿಪಥ್  ಯೋಜನೆಗೆ ವಿರೋಧಿಸಿ ಬಿಹಾರ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆದು ಪ್ರತಿಭಟನಾಕಾರರು ರೈಲುಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ತಿರುಗಿದೆ. ಈ ಮಧ್ಯೆ ಈ ಯೋಜನೆಯನ್ನ ರದ್ಧುಗೊಳಿಸಿ ಹಿಂದಿನಂತೆಯೇ ಸೇನಾ ನೇಮಕಾತಿ ಮಾಡುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಯಬೇಕು. ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ? ಎಂದು ಚಾಟಿ ಬೀಸಿದ್ದಾರೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ಅವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ?

ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟುಹಾಕಲಿರುವ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಲು ಸಾಧ್ಯವೇ? ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗುವ ಸೈನಿಕರಿಗೆ ಉದ್ಯೋಗದ ಭದ್ರತೆ, ನ್ಯಾಯಬದ್ಧ ಸಂಬಳ, ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗದಷ್ಟು ಕೇಂದ್ರದ ಸರ್ಕಾರ ದಿವಾಳಿಯಾಗಿದೆಯೇ? ನಿಮ್ಮ ದಿವಾಳಿತನ ಮುಚ್ಚಿಡಲು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡಲು ಹೋಗಬೇಡಿ ಮೋದಿ ಅವರೇ

ಹೊಸಸೇನಾ ನೇಮಕಾತಿ ಅಗ್ನಿಪಥ್ ಕೇವಲ ಸೇನಾ ನೇಮಕಾತಿಗಷ್ಟೇ ಸೀಮಿತವಾಗಲಾರದು. ಸೈನಿಕರ ಅನ್ನ ಕಸಿಯಲು ಹೊರಟಿರುವ ಈ ದೇಶದ್ರೋಹಿ, ಜನವಿರೋಧಿ ಸರ್ಕಾರ ಮುಂದಿನ ದಿನಗಳಲ್ಲಿ ಇತರ ಸರ್ಕಾರಿ ಉದ್ಯೋಗಗಳ ಮೇಲೆಯೂ ಸವಾರಿ ಮಾಡಲು ಹೊರಡುವುದು ಖಚಿತ. ಎಚ್ಚೆತ್ತುಕೊಳ್ಳಲು ಇದು ಸಕಾಲ! ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದ ಜನ ಪಾಠ ಕಲಿಸಿದ್ದಾರೆ. ಈಗ ಯುವಜನರ ಬದುಕು ನಾಶದ ಜೊತೆಯಲ್ಲಿ ಸೈನಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವವರಿಗೂ ಪಾಠ ಕಲಿಸಲು ದೇಶದ ಜನತೆ ಮುಂದಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

Key words: Siddaramaiah – Demand-cancellation -Agnipath project